ಕೇಂದ್ರಿಯ ವಿವಿಯ ಶೈಕ್ಷಣಿಕ ವಾತಾವರಣಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಅಸಮಾಧಾನ

ಕಲಬುರಗಿ:ಮಾ.11: ಕೇಂದ್ರಿಯ ವಿವಿ ಬರಲು ನಡೆಸಿದ ಹೋರಾಟ ಕಣ್ಣ ಮುಂದಿದೆ. ಖರ್ಗೆ ಸಾಹೇಬರ ಪರಿಶ್ರಮ ಅಪರಿಮಿತವಾಗಿದೆ. ಇಲ್ಲಿನ‌ ಪರಿಸ್ಥಿತಿ ಗಮನಿಸಿದರೆ ಇಲ್ಲಿನ ಕಟ್ಟಡಗಳಿಗೆ ಸುಣ್ಣ ಬಣ್ಣ ಬಳಿದಿಲ್ಲ. ಇದನ್ನು ನೋಡಿದರೆ ನಿಜಕ್ಕೂ ಬೇಸರವಾಗುತ್ತದೆ ಎಂದು ಗ್ರಾಮಿಣಾಭಿವೃದ್ದಿ ಹಾಗೂ ಪಂಚಾಯತ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದರು.

ಆಳಂದ ತಾಲೂಕಿನ ಕಡಗಂಚಿಯ ಕೇಂದ್ರಿಯ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಎಸ್ ಸಿ / ಎಸ್ ಟಿ ನೌಕರರ ಕಲ್ಯಾಣ ಸಂಘ ಏರ್ಪಡಿಸಿದ್ದ ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಸಂವಿಧಾನದ ತತ್ವಗಳು ವಿಚಾರಸಂಕೀರಣ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ವಿಚಾರ ಸಂಕಿರಣ‌ ಏರ್ಪಡಿಸಲು ವಿವಿಯ ರಿಜಿಸ್ಟ್ರಾರ್ ಅವರ ಹಾಕಿರುವ ಷರತ್ತುಗಳ ಪತ್ರ ಪ್ರದರ್ಶಿಸಿ ಕಟುವಾಗಿ ಟೀಕಿಸಿದ ಸಚಿವರು, ಶೈಕ್ಷಣಿಕ ಸಮಗ್ರತೆಗೆ ಧಕ್ಕೆ ತರದಂತೆ ಕಾರ್ಯಕ್ರಮ ನಡೆಸಬೇಕೆನ್ನುವ ಷರತ್ತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಇಂದಿನ ಕಾರ್ಯಕ್ರಮದಲ್ಲಿ ಜನರಿಂದ ಆಯ್ಕೆಯಾದ ಈ ಕ್ಷೇತ್ರದ ಶಾಸಕರು ಹಾಗೂ ಸರ್ಕಾರದ ಭಾಗವಾಗಿರುವ ನಾನು ಭಾಗವಹಿಸುವ ಕಾರ್ಯಕ್ರಮಕ್ಕೆ ಇಷ್ಟೊಂದು ಷರತ್ತು ಹಾಗೂ ಪೊಲೀಸ್ ಭದ್ರತೆ ಹಾಕುವ ಅವಶ್ಯಕತೆ ಏನಿತ್ತು? ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಯೊಂದಿಗೆ ಚರ್ಚಿಸಿ ವಿವಿಯ ಕುಲಪತಿಗೆ ಅಥವಾ ರಿಜಿಸ್ಟ್ರಾರ್ ಗೆ ಪತ್ರ ಬರೆಯಲು ಕೋರುತ್ತೇನೆ ಎಂದರು.

ವಿವಿಯಲ್ಲಿ ಸಂವಿಧಾನ ವಿರೋಧಿ ಚಟುವಟಿಕೆಗಳು ನಡೆದರೆ ಅದನ್ನು ಕಾನೂನಿನ ಅಡಿಯಲ್ಲಿ ಪ್ರಶ್ನಿಸಿ ನಾನು ನಿಮ್ಮೊಂದಿಗೆ ಇದ್ದೇನೆ, ಇರುತ್ತೇನೆ. ವಿವಿಗೆ ಬರದಂತೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನಾನು ಪದೇ ಪದೇ ಬರುತ್ತೇನೆ. ಒಟ್ಟಿನಲ್ಲಿ ಉಸಿರುಕಟ್ಟುವ ವಾತಾವರಣ‌ ನಿರ್ಮಾಣವಾಗದಂತೆ ತಡೆಯಬೇಕು ಎಂದರು.

ವಿವಿಯಲ್ಲಿ ವಿದ್ಯಾರ್ಥಿಗಳ ವಿರುದ್ಧ ಒಟ್ಟು 25 ಕೇಸುಗಳು ದಾಖಲಾಗಿರುವ ಬಗ್ಗೆ ಪೊಲೀಸರೊಂದಿಗೆ ವೇದಿಕೆಯಿಂದಲೇ ಮಾತನಾಡಿದ ಸಚಿವರು ಕೇಸುಗಳ ವಿವರವನ್ನು ನಾಳೆ ನನಗೆ ತಿಳಿಸಬೇಕು ಎಂದು ಸ್ಥಳದಲ್ಲಿ ಇದ್ದ DSP ಗೆ ಸೂಚಿಸಿದರು.

ಭಾರತ ಪ್ರಪಂಚದ ಅತಿದೊಡ್ಡ ಪ್ರಜಾತಂತ್ರ ರಾಷ್ಟ್ರವಾಗಿ ಉಳಿದಿರುವುದಕ್ಕೆ ಕಾರಣವೇ ಸಂವಿಧಾನವಾಗಿದೆ. ಭಾರತದ ಸಂವಿಧಾನ ರಚನೆಯ ಸಂದರ್ಭದಲ್ಲಿ ಸಾಕಷ್ಟು ಚರ್ಚೆಗಳು ನಡೆದು ಕೊನೆಗೆ ಮಹಾತ್ಮಾ ಗಾಂಧಿ‌ ಅವರು ಡಾ ಬಾಬಾಸಾಹೇಬರಿಗೆ ಆ ಜವಾಬ್ದಾರಿ ವಹಿಸಲಾಯಿತು. ಅದರಂತೆ ಏಳು ಜನ ಸದಸ್ಯರ ಸಮಿತಿ ರಚಿಸಲಾಯಿತು ಎಂದು ವಿವರಿಸಿದರು.

ಸಂವಿಧಾನ ಎಂದರೆ ಕೆಲವರಿಗೆ ಸರಿ ಹೊಂದುತ್ತಿಲ್ಲ. ಹಾಗಾಗಿ ಬದಲಾಗಿಸುವ ಮಾತನಾಡುತ್ತಾರೆ. 400 ಸೀಟು ಗೆದ್ದರೆ
ಸಂವಿಧಾನ ಬದಲಾಯಿಸುವ ಮಾತನಾಡುವ ರಾಜ್ಯದ ಸಂಸದರೊಬ್ಬರು ಜನರ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಒಂದೇ ಒಂದು ಮಾತನಾಡಲಿಲ್ಲ ಎಂದು ಟೀಕಿಸಿದ ಸಚಿವರು ಸಂವಿಧಾನ ರಕ್ಷಣೆ, ಬಸವ ಹಾಗೂ ಅಂಬೇಡ್ಕರ್ ಅವರ ತತ್ವಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಕೆಲವರು ತಮ್ಮ ಸಿದ್ದಾಂತಗಳನ್ನು ಒಪ್ಪದವರಿಗೆ ದೇಶದ್ರೋಹಿ ಪಟ್ಟ ಕಟ್ಟುತ್ತಿದ್ದಾರೆ. ದೇಶದ ಸ್ವಾತಂತ್ರ್ಯದಲ್ಲಿ ಅವರೇನೂ ಹೋರಾಟ ಮಾಡಿದವರಲ್ಲ. ಒಬ್ಬರನ್ನು ದೇಶದ್ರೋಹಿ ಎಂದು ಕರೆಯಲು ಅದಕ್ಕೆ ಸಂಬಂಧಿಸಿದ ಕಾನೂನು ಪ್ರಕ್ರಿಯೆ ಬಗ್ಗೆ ಅವರಿಗೆ ಅರಿವಿಲ್ಲ. ” 25 ನವೆಂಬರ್ 1949 ರಂದು ಬಾಬಾಸಾಹೇಬರು ಕಾನ್ಸಿಟುಷನಲ್ ಅಸೆಂಬ್ಲಿಯಲ್ಲಿ ಮಾತನಾಡುತ್ತಾ, ಜಾತಿಯ ವಿಷ ಬೀಜು ಬಿತ್ತುವವರು, ಜಾತಿ ಹಾಗೂ ಧರ್ಮದ‌ ಆಧಾರದ ಮೇಲೆ‌ ಸಮಾಜವನ್ನು ಇಬ್ಭಾಗಿಸುವವರೇ ನಿಜವಾದ ದೇಶದ್ರೋಹಿಗಳು” ಎಂದಿದ್ದರು ಎಂದು‌ ಸಚಿವರು ಹೇಳಿದರು.

ಮನುವಾದಿಗಳು ಮೊದಲು ಮನುಸ್ಮೃತಿಯನ್ನು ತಮ್ಮ ತಮ್ಮ ಮನೆಯಲ್ಲಿ ಅಳವಡಿಸಿಕೊಳ್ಳಲಿ. ಆಗ ಅವರ ಮನೆಯವರ ಪ್ರತಿಕ್ರಿಯೆ ಹೇಗಿರುತ್ತದೆ ಗೊತ್ತಾಗುತ್ತದೆ ಎಂದ ಖರ್ಗೆ, ಬಿಜೆಪಿಯ ಪ್ರಮುಖ ನಾಯಕರ ಮಕ್ಕಳು ವಿದೇಶದಲ್ಲಿ ಶಿಕ್ಷಣ ಪಡೆಯುತ್ತಿದ್ದರೆ, ಬಡವರ ಕೆಳವರ್ಗದವರ ಮಕ್ಕಳನ್ನು ಧರ್ಮ ರಕ್ಷಣೆ ಹಾಗೂ ಗೋ ರಕ್ಷಣೆಗೆ ಬಳಸಿಕೊಳ್ಳುತ್ತಿದ್ದಾರೆ. ಎಷ್ಟು ಬಿಜೆಪಿ ನಾಯಕರು ಗೋಮೂತ್ರ ಕುಡಿಯುತ್ತಿದ್ದಾರೆ? ಎಷ್ಟು ಗೋಶಾಲೆ ನಡೆಸುತ್ತಿದ್ದಾರೆ ? ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿ ಸಲಹೆಗಾರರಾದ ಬಿ.ಆರ್. ಪಾಟೀಲ್ ಮಾತನಾಡಿ, ಇಂದಿನ ಸಂಕೀರಣಕ್ಕೆ ಒದಗಿಸಿರುವ ಪೊಲೀಸ್ ಬಂದೋಬಸ್ತ್ ನೋಡಿ ನನಗೆ ಗಾಬರಿಯಾಯಿತು. ನಾವೇನು ಭಯೋತ್ಪಾದಕರಾ? ಪಾಕಿಸ್ತಾನದವರಾ? ನಾವು ವಿವಿಗೆ ಬಂದಿರುವುದು ಬೆಂಕಿ ಹಚ್ಚುವುದಕ್ಕಲ್ಲ, ದೀಪ ಬೆಳಗಿಸಲು. ಇಲ್ಲಿಗೆ ರಾಜ್ಯ ಸರ್ಕಾರ ಮಂತ್ರಿಗಳು ಅಥವಾ ಶಾಸಕರು ವಿವಿಗೆ ಬಂದರೆ ಸೌಜನ್ಯಕ್ಕಾದರೂ ವಿವಿಯ ಅಧಿಕಾರಿಗಳು ನಮ್ಮನ್ನು ಸ್ವಾಗತಿಸಲಿಲ್ಲ. ಈ ವರ್ತನೆಯನ್ನು ನಾನು ಖಂಡಿಸುತ್ತೇನೆ. ಇದೇ ವರ್ತನೆ ಮುಂದುವರೆಸಿದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ‌ ವಿವಿಗೆ ಜಾಗ, ನೀರು ಹಾಗೂ ಕರೆಂಟ್ ಕೊಟ್ಟಿದ್ದು ಕರ್ನಾಟಕ ರಾಜ್ಯ. ಇವೆಲ್ಲವನ್ನೂ ಬಂದ್ ಮಾಡಿದರೆ ವಿವಿಯವರು ಏನು ಮಾಡುತ್ತಾರೆ?. ಇಲ್ಲಿ ವಿಚಾರ ಸಂಕಿರಣ ನಡೆಸಲು ವಿವಿ ಕುಲಪತಿ ಬಟ್ಟು ಸತ್ಯನಾರಾಯಣ ಅನುಮತಿ‌ ಕೊಟ್ಟಿರುವುದೇ ಮೇಲು ಎಂದು ರುಮ್ಮಾ ಹೇಳಿದರು, ಯಾಕೆ ಅನುಮತಿ ಕೊಡುವುದಿಲ್ಲ? ವಿವಿ ಏನು ಅವರ ಅಪ್ಪನ ಮನೆಯಾ ? ಇನ್ನು ಮೇಲೆ ನಾನು ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಪದೇ ಪದೇ ಬರುತ್ತೇವೆ.‌ ಕಾರ್ಯಕ್ರಮ ನಡೆಸುತ್ತೇವೆ ಯಾವುದೇ ಅನುಮತಿ ಬೇಕಿಲ್ಲ, ಎಂದು ಹರಿಹಾಯ್ದರು.

ಆರ್.ಕೆ. ಹುಡಗಿ ಮಾತಮಾಡಿ ಸತ್ಯ, ನ್ಯಾಯ ಹಾಗೂ ಸಂವಿಧಾನದ ಪರವಾಗಿ ಇರಬೇಕು. ಡಾ. ಬಿ.ಆರ್ ಅಂಬೇಡ್ಕರ್ ಅವರು ಇದನ್ನು ಒತ್ತಿ ಹೇಳಿದ್ದಾರೆ. ಯಾವುದೋ ಒಂದು ವಿಚಾರಧಾರೆಯನ್ನು ಬೆಳೆಯಲು ಬಿಟ್ಟು ಮಿಕ್ಕೆಲ್ಲ‌ ವಿಚಾರ ಧಾರೆಗಳನ್ನು ತುಳಿಯುವುದು ವಿಶ್ವವಿದ್ಯಾಲಯಕ್ಕೆ ಶೋಭೆ ತರುವಂತದ್ದಲ್ಲ ಎಂದರು.

ಕೇಂದ್ರೀಯ ವಿವಿ ಬರಲು ಬಹಳಷ್ಟು ಹೋರಾಟ ನಡೆದಿವೆ. ನಾವೆಲ್ಲ ಲಾಠಿ ಏಟು ತಿಂದಿದ್ದೇವೆ. ಅಂದು ಕೇಂದ್ರದಲ್ಲಿ‌ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರ ಪರಿಶ್ರಮದಿಂದ ಇಲ್ಲಿ ವಿವಿ ಸ್ಥಾಪನೆಯಾಗಿದೆ. ಇದು ಸೂಫಿ ಸಂತರ ನಾಡಾಗಿದೆ. ಇಲ್ಲಿ ವೈಚಾರಿಕತೆ, ಪ್ರಗತಿಪರತೆ ಬೆಳೆಯಬೇಕೆ ಹೊರತು ಮೌಢ್ಯವಲ್ಲ. ಯಾವ ಉದ್ದೇಶಕ್ಕೆ ವಿವಿ ಸ್ಥಾಪನೆಯಾಗಿದೆ ಅದೇ ಉದ್ದೇಶ ಉಳಿಯಬೇಕು, ಬೆಳೆಯಬೇಕು. ಈ ನಿಟ್ಟಿನಲ್ಲಿ ಇಲ್ಲಿನ ವಿದ್ಯಾರ್ಥಿಗಳು ಮುಂದಾಗಬೇಕು ಎಂದರು.

ಪ್ರೊ ಸಿ.ಲಕ್ಷ್ಮಣನ್ ಮಾತಮಾಡಿ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ನಮ್ಮೊಳಗೆ ಅಂತರ್ಭವಿಸಿಕೊಳ್ಳಬೇಕು. ಇಲ್ಲಿ ದಲಿತ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿರುವುದು ನನಗೆ ತಿಳಿದುಬಂತು. ದೇವಾಲಯಗಳಲ್ಲಿ ಕುರಿಗಳನ್ನು ಮಾತ್ರ ಬಲಿ‌ಕೊಡಲಾಗುತ್ತದೆ ಹೊರತೆ ಸಿಂಹಗಳನ್ನಲ್ಲ. ನೀವು ಸಿಂಹಗಳಂತಾಗಬೇಕು ಎಂದು ಕರೆನೀಡಿದರು.

ರಾಜಕೀಯದಲ್ಲಿ ಭಕ್ತಿ ಇರುವುದು ಅಪಾಯಕಾರಿಯಾದುದು ಅದು ಪ್ರಜಾತಂತ್ರ ವ್ಯವಸ್ಥೆಯನ್ನು‌ ನಾಶಪಡಿಸುತ್ತದೆ ಎಂದ ಹೇಳಿದ ಪ್ರೊ, ಲಕ್ಷ್ಮಣನ್
ಬಲಪಂಥಿಯರು ಸಂವಿಧಾನದ ಪ್ರಬಲ ವಿರೋಧಿಗಳಾಗಿದ್ದಾರೆ. ಅವರು ಸಂವಿಧಾನವನ್ನು ಮುಗಿಸಲು ಪ್ರಯತ್ನಿಸುತ್ತಿರುತ್ತಾರೆ. ಅಂಬೇಡ್ಕರ್ ತತ್ವಪಾಲಕರು ಸಂವಿಧಾನದ ರಕ್ಷಣೆ ಮಾಡಬೇಕು. ಜಾತ್ಯಾತೀತ ತತ್ವ ಪ್ರತಿಯೊಬ್ಬ ವ್ಯಕ್ತಿಯ ಹಾಗೂ ಸಮುದಾಯ ಹಕ್ಕುಗಳ ರಕ್ಷಣೆ ಮಾಡುತ್ತದೆ. ಸಂವಿಧಾನದಲ್ಲಿ ಇದನ್ನೇ ಅಳವಡಿಸಿಕೊಳ್ಳಲಾಗಿದೆ.

ಡಿ.ಜಿ.ಸಾಗರ ಮಾತನಾಡಿ ಮಾನವನ ಹಕ್ಕುಗಳನ್ನು ಕಾಪಾಡುವ ಅತ್ಯಂತ ದೊಡ್ಡ ಗ್ರಂಥ ನಮ್ಮ ದೇಶದ‌ ಸಂವಿಧಾನವಾಗಿದೆ. ಇಂತದ್ದೆ ಬಟ್ಟೆ ಹಾಕಿ ಎನ್ನುವುದು, ಇಂತದ್ದೆ ತಿನ್ನಬೇಕು ಎಂದು ಒತ್ತಾಯಪಡಿಸುವುದು ಸರಿಯಾದ ಕ್ರಮವಲ್ಲ. ಈ‌‌ ವಿವಿಯಲ್ಲಿ ಸೈದ್ದಾಂತಿಕ‌ ಭಿನ್ನಾಭಿಪ್ರಾಯ ಬರಬಾರದು. ಕಾನೂನು ಹಾಗೂ ವಿವಿ ನಿಯಮಾವಳಿಗಳ ಪ್ರಕಾರ ವಿದ್ಯಾರ್ಥಿಗಳಿಗೆ ಅವಕಾಶಗಳು ಸಿಗಬೇಕು ಎಂದರು.

ವೇದಿಕೆಯ ಮೇಲೆ ಮುಖ್ಯಮಂತ್ರಿ ಸಲಹೆಗಾರ ಹಾಗೂ ಶಾಸಕ ಬಿ.ಆರ್.ಪಾಟೀಲ, ಪ್ರೊ ಸಿ. ಲಕ್ಷ್ಮಣನ್, ಪ್ರೊ, ಆರ್.ಕೆ.ಹುಡಗಿ, ಶಿವಗಂಗಾ ರುಮ್ಮಾ, ಡಿ.ಜಿ.‌ಸಾಗರ, ಅಪ್ಪಗೆರೆ ಸೋಮಶೇಖರ, ವಿದ್ಯಾರ್ಥಿಗಳು ಸೇರಿದಂತೆ ಹಲವರಿದ್ದರು.