ಕೇಂದ್ರಿಯ ವಿದ್ಯಾಲಯ ಸ್ಥಾಪನೆ. ವಿಶೇಷ ಪ್ರಕರಣದಡಿ ಸರ್ಕಾರಿ ಪ್ರೌಢಶಾಲೆ ಮಂಜೂರಾತಿಗೆ ಒತ್ತಾಯ : ಶಾಸಕ ಲಕ್ಷ್ಮಣ ಸವದಿ

ಅಥಣಿ : ಜ.19:ತಾಲೂಕಿನಲ್ಲಿ ಕೇಂದ್ರಿಯ ವಿದ್ಯಾಲಯ ಸ್ಥಾಪನೆ ಹಾಗೂ ಪಟ್ಟಣದಲ್ಲಿ ಸರ್ಕಾರಿ ಪ್ರೌಢಶಾಲೆಯನ್ನು ಸರ್ಕಾರ ವಿಶೇಷ ಪ್ರಕರಣದಡಿ ಮಂಜೂರು ಮಾಡುವಂತೆ ಒತ್ತಾಯಿಸುತ್ತೇನೆ. ಹಾಗೂ ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಮತ್ತು ಶೈಕ್ಷಣಿಕ ಸುಧಾರಣೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ಪಟ್ಟಣದ ಪ್ರತಿಷ್ಠಿತ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳ ಪ್ರಶ್ನೋತ್ತರಗಳಿಗೆ ಉತ್ತರಿಸಿ ಮಾತನಾಡಿದರು. ಸರ್ಕಾರದ ಮಾರ್ಗಸೂಚಿಯಂತೆ ಪ್ರತಿ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಒಂದು ಪ್ರೌಢಶಾಲೆ ಸ್ಥಾಪಿಸುವ ನಿಯಮವಿದೆ. ಅಥಣಿ ಪಟ್ಟಣದಲ್ಲಿ 10 ಖಾಸಗಿ ಶಾಲೆಗಳಿದ್ದು, ಅದರಲ್ಲಿ ಅನೇಕ ಶಾಲೆಗಳು ಸರ್ಕಾರದ ಅನುದಾನಕ್ಕೆ ಒಳಪಟ್ಟಿವೆ. ಆದ್ದರಿಂದ ಪಟ್ಟಣದಲ್ಲಿ ಸರ್ಕಾರಿ ಪ್ರೌಢಶಾಲೆಯನ್ನು ನೀಡಿಲ್ಲ. ಆದರೂ ಕೂಡ ನಾನು ಶಾಸಕನಾದ ಬಳಿಕ ಎರಡು ಬಾರಿ ಮನವಿ ಸಲ್ಲಿಸಿದ್ದೇನೆ. ವಿಶೇಷ ಪ್ರಕರಣದಡಿ ಅಥಣಿ ಪಟ್ಟಣಕ್ಕೊಂದು ಪ್ರೌಢಶಾಲೆ ಮಂಜೂರಾತಿ ಪಡೆದುಕೊಳ್ಳುವ ಮೂಲಕ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳ ಉಚಿತ ಹಾಗೂ ಕಡ್ಡಾಯ ಶಿಕ್ಷಣಕ್ಕೆ ಹೆಚ್ಚಿನ ಪದ್ಧತಿ ನೀಡಲಾಗುವುದು. ಕೇಂದ್ರಿಯ ವಿದ್ಯಾಲಯ ಸ್ಥಾಪನೆ ಇದರ ಜೊತೆಗೆ ತಾಲೂಕಿನಲ್ಲಿ ಇನ್ನಷ್ಟು ಪದವಿ ಪೂರ್ವ ಕಾಲೇಜುಗಳನ್ನು ಮತ್ತು ಪದವಿ ಮಹಾವಿದ್ಯಾಲಯಗಳನ್ನು ಸ್ಥಾಪಿಸುವ ಸಂಕಲ್ಪ ಹೊಂದಿದ್ದೇನೆ. ಈಗಾಗಲೇ ಉದ್ಘಾಟನೆಗೊಂಡಿರುವ ಪಶು ವೈದ್ಯಕೀಯ ಮಹಾವಿದ್ಯಾಲಯ ಶೀಘ್ರದಲ್ಲಿಯೇ ಕಾರ್ಯಕ್ರಮವಾಗಲಿದೆ. ಕಳೆದ 8 ತಿಂಗಳಿಂದ ಕೇಂದ್ರ ಸರ್ಕಾರದ ಒಪ್ಪಿಗೆಗಾಗಿ ಕಾಯುತ್ತಿದ್ದೇವೆ. ಅನುಮತಿ ದೊರಕಿದ ಕೂಡಲೇ ತರಗತಿಗಳನ್ನ ಆರಂಭಿಸಲಾಗುವುದು ಎಂದು ಹೇಳಿದರು.
ಅಥಣಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ಪ್ರತಿಯೊಂದು ಹಳ್ಳಿಗೂ ಶುದ್ಧ ಕುಡಿಯುವ ನೀರು ದೊರಕಬೇಕು. ಜನರ ಆರೋಗ್ಯ ಆದ್ಯತೆ ನೀಡಲಾಗುವುದು ಎಂದರು.
ವಿಧಾನಸಭೆಯ ಕಾರ್ಯಕಲಾಪಗಳಲ್ಲಿ ಎಂಎಲ್‍ಎ ಮತ್ತು ಎಂ ಎಲ್ ಸಿ ಅವರ ಪಾತ್ರವೇನು, ಚುನಾವಣಾ ಆಯೋಗದ ಕೆಲಸವೇನು, ನೀತಿ ಸಂಹಿತೆ ಎಂದರೇನು, ಪ್ರಧಾನ ಮಂತ್ರಿಗಳ ಆಯ್ಕೆ ಹೇಗೆ ನಡೆಯುತ್ತದೆ, ರಾಷ್ಟ್ರಪತಿಗಳ ಆಯ್ಕೆ ಪ್ರಕ್ರಿಯೆ ಯಾವ ರೀತಿ ನಡೆಯುತ್ತದೆ. ಹಿಂದಿನ ಶಿಕ್ಷಣ ಪದ್ಧತಿಗೂ ಇಂದಿನ ಶಿಕ್ಷಣ ಪದ್ಧತಿಗೆ ಇರುವ ವ್ಯತ್ಯಾಸ, ಅಥಣಿ ಅಭಿವೃದ್ಧಿಯ ಕುರಿತು ತಮ್ಮ ಕನಸೇನು. ಇಂತಹ ಅನೇಕ ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಶಾಸಕ ಲಕ್ಷ್ಮಣ ಸವದಿ ಅವರಿಗೆ ಕೇಳುವ ಮೂಲಕ ಉತ್ತರಗಳನ್ನು ಕಂಡುಕೊಂಡರು. ಶಾಸಕರು ಕೂಡ ಮಕ್ಕಳಿಗೆ ತಿಳಿಯುವ ರೀತಿಯಲ್ಲಿ ಉತ್ತರವನ್ನು ನೀಡುತ್ತಾ ತಾಲೂಕಿನ ಅಭಿವೃದ್ಧಿಗಾಗಿ ತಾವು ಮಾಡಿದ ಕಾರ್ಯಗಳು ಮತ್ತು ಮುಂಬರುವ ನಾಲ್ಕು ವರ್ಷಗಳಲ್ಲಿ ಮಾಡಬೇಕಾದ ಸಂಕಲ್ಪ ಯೋಜನೆಗಳ ಬಗ್ಗೆ ತಿಳಿಸಿದರು. ವಿದ್ಯಾರ್ಥಿ ಪ್ರತಿನಿಧಿಗಳು ಶಾಸಕರನ್ನು ಸನ್ಮಾನಿಸಿ ಅಭಿನಂದಿಸಿದರು.
ಈ ವೇಳೆ ಮುಖ್ಯೋಪಾಧ್ಯಾಯರಾದ ಎಂ ಎಸ್ ದೇಸಾಯಿ, ಎಂ ಬಿ ಬಿರಾದಾರ, ಆಡಳಿತ ಅಧಿಕಾರಿಗಳಾದ ಪ್ರತಿಭಾ ನಾಯಕ, ಹನುಮಂತ ಗುಡೋಡಗಿ, ಜಿ.ಆರ್.ಐನಾಪುರೆ, ವಿ.ವಿ.ಕವಟೇಕರ, ಬಿ.ಆರ್.ಕೋಳಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.