ಕೇಂದ್ರ,ರಾಜ್ಯದ ವೈಫಲ್ಯಗಳ ವಿರುದ್ದ ಡಿಕೆ ಸುರೇಶ್ ಆಕ್ರೋಶ

ನವದೆಹಲಿ,ಸೆ.೨೦-ರೈತ ವಿರೋಧಿ ಕಾಯ್ದೆಗಳು, ಕೊರೋನಾ ನಿರ್ವಹಣೆ ವೈಫಲ್ಯ, ರಾಜ್ಯದ ಆರ್ಥಿಕ ದುಸ್ಥಿತಿ, ಸಾಲದ ಹೊರೆ, ರಸಗೊಬ್ಬರ ಕೊರತೆ, ಜಿಡಿಪಿ ಕುಸಿತ, ನಿರುದ್ಯೋಗ, ಖಾಸಗೀಕರಣ ಸೇರಿದಂತೆ ರಾಜ್ಯದ ಸಮಸ್ಯೆಗಳು ಹಾಗೂ ಕೇಂದ್ರ ಸರ್ಕಾರದ ವೈಫಲ್ಯಗಳ ಬಗ್ಗೆ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ ಸುರೇಶ್ ಲೋಕಸಭೆಯಲ್ಲಿ ಧ್ವನಿ ಎತ್ತಿದ್ದಾರೆ.
೨೦೨೦-೨೧ನೇ ಸಾಲಿನ ಬಜೆಟ್ ಅನುದಾನದ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು
‘ಕೇಂದ್ರ ಸರ್ಕಾರ ದೇಶದ ಆರ್ಥಿಕತೆ ನಿರ್ವಹಣೆ ಮಾಡುವುದರಲ್ಲಿ ಸಂಪೂರ್ಣ ವಿಫಲವಾಗಿದೆ. ರಾಜ್ಯದ ಸಾಲದ ಹೊರೆ ಮತ್ತಷ್ಟು ಹೆಚ್ಚಿಸುವಂತಹ ನಿರ್ದೇಶನಗಳನ್ನು ನೀಡುತ್ತಿರುವುದನ್ನು ನಾವು ಗಮನಿಸಿದ್ದೇವೆ. ಅವೈಜ್ಞಾನಿಕ ಆರ್ಥಿಕ ನೀತಿ, ಕೋವಿಡ್, ನೆರೆ ನಿರ್ವಹಣೆ ವೈಫಲ್ಯ, ಜಿಡಿಪಿ ಶೇ. -೨೩ಕ್ಕೆ ಕುಸಿದಿದೆ ಎಂದು ದೂರಿದರು.
ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಶೇ.೩ಕ್ಕೆ ಕುಸಿದಿದ್ದು, ಬಿಜೆಪಿ ಹೊಗಳುವಂತಹ ಸಾಧನೆ ಏನೂ ಮಾಡಿಲ್ಲ. ಇಂತಹ ಪರಿಸ್ಥಿತಿ ನಡುವೆ ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆ ತರಲು ಮುಂದಾಗಿದೆ. ನಿನ್ನೆಯಷ್ಟೇ ಎರಡು ರೈತ ವಿರೋಧಿ ಮಸೂದೆ ಮಂಡಿಸಲಾಗಿದೆ ಎಂದರು.
ಕೃಷಿ ಪ್ರಧಾನ ದೇಶಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ ಮೂಲಕ ಸಾಲ ನೀಡಲು ಆತ್ಮನಿರ್ಭರ ಯೋಜನೆಯಲ್ಲಿ ೫ ಲಕ್ಷ ಕೋಟಿ ಕೃಷಿ ಕ್ಷೇತ್ರಕ್ಕೆ ತೊಡಗಿಸುವುದಾಗಿ ತಿಳಿಸಿದ್ದಾರೆ. ಈಗಾಗಲೇ ನೀಡಿರುವ ಸಾಲವನ್ನು ಸೇರಿಸಿ ರೈತರಿಗೆ ೫ ಲಕ್ಷ ಕೋಟಿ ಸಾಲ ನೀಡುವುದಾಗಿ ಹೇಳಿಕೆ ನೀಡಿ ಕೇಂದ್ರ ಸರ್ಕಾರ ಜನರ ದಾರಿ ತಪ್ಪಿಸುತ್ತಿದೆ ಎಂದುಆಕ್ರೋಸ್ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಚಿನ್ನಾಭರಣದ ಸಾಲದ ಮೇಲಿನ ಸಬ್ಸಿಡಿಯನ್ನು ನರೇಂದ್ರ ಮೋದಿ ಸರ್ಕಾರ ತೆಗೆದುಹಾಕಿರುವುದು ರೈತ ವಿರೋಧಿ ಕ್ರಮವಲ್ಲವೇ? ಇದಕ್ಕೆ ಪ್ರಧಾನಮಂತ್ರಿಗಳು ಹಾಗೂ ವಿತ್ತ ಸಚಿವರು ಉತ್ತರಿಸಬೇಕಾಗುತ್ತದೆ. ಕೇಂದ್ರ ಸರ್ಕಾರ ಸಹಕಾರಿ ಬ್ಯಾಂಕ್ ಗಳ ವ್ಯವಸ್ಥೆ ಹಾಳು ಮಾಡಲು ಪ್ರಯತ್ನಿಸಿದೆ. ರಾಜ್ಯದಲ್ಲಿ ರಸಗೊಬ್ಬರದ ಕೊರತೆ ಹೆಚ್ಚಾಗುತ್ತಿದೆ. ಇನ್ನು ಇಂಧನ ತೈಲಗಳ ಬೆಲೆ ಏರಿಕೆ ಮಾಡಿದೆ. ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಸಾರ್ವಜನಿಕ ವಲಯ ಕ್ಷೇತ್ರಗಳಾದ ವಿಮೆ, ವಿಮಾನಯಾನ, ರೈಲ್ವೆ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಮುಂದಾಗಿದೆ. ಇದು ಉದ್ಯೋಗ ಸೃಷ್ಟಿಗೆ ಭಾರಿ ಹೊಡೆತ ನೀಡಿಲಿದೆ ಎಂದು ಹೇಳಿದ್ದಾರೆ.