ಕೇಂದ್ರದ 5 ಸ್ಟಾರ್ ರೇಟಿಂಗ್ ಪ್ರಶಸ್ತಿಗೆ ಭಾಜನವಾದ ಸ್ಮಯೋರ್ ಸಂಸ್ಥೆ


ಸಂಜೆವಾಣಿ ವಾರ್ತೆ
ಸಂಡೂರು: ಮಾ: 3: ಮಾರ್ಚ್ 1 2023 ರಂದು ನಾಗ್ಪುರದ ನ್ಯಾಷನಲ್ ಫೈರ್ ಸರ್ವಿಸ್ ಕಾಲೇಜಿನ ಆಡಿಟೋರಿಯಂನಲ್ಲಿ ನಡೆದ ಇಂಡಿಯನ್ ಬ್ಯೂರೋ ಆಫ್ ಮೈನ್ಸ್ (ಐಬಿಎಂ)ನ 75 ನೇಯ ವಾರ್ಷಿಕೋತ್ಸವದಲ್ಲಿ ಭಾರತ ಸರಕಾರದ ಗಣಿ ಸಚಿವಾಲಯವು ಸ್ಮಯೋರ್ ಸಂಸ್ಥೆಯ ಎರಡೂ  ಮೈನಿಂಗ್ ಲೀಜ್‍ಗಳಿಗೆ 2021-22 ರ (ಮೈನಿಂಗ್ ಲೀಜ್ ನಂ. 2678 ಮತ್ತು 2679) ಕೇಂದ್ರ ಸರಕಾರದ ಪ್ರತಿಷ್ಠಿತ ಪ್ರಶಸ್ತಿಯಾದ 5 ಸ್ಟಾರ್ ರೇಟಿಂಗ್ ಪ್ರಶಸ್ತಿಯನ್ನು ನೀಡಿ ಗೌರವಿಸಿತು.  ಭಾರತ ಸರಕಾರದ ಸಂಸದೀಯ ವ್ಯವಹಾರಗಳ, ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿಯವರು ಸ್ಮಯೋರ್ ಸಂಸ್ಥೆಯ ಜಿ.ಪಿ. ಕುಂದರಗಿ (ಇಂಡಿಪೆಂಡೆಂಟ್ ಡೈರೆಕ್ಟರ್), ಮೊಹಮ್ಮದ್ ಅಬ್ದುಲ್ ಸಲೀಂ (ಡೈರೆಕ್ಟರ್ ಮೈನ್ಸ್), ಆದಿತ್ಯ ಎಸ್. ಘೋರ್ಪಡೆ ಅಧ್ಯಕ್ಷರು (ಬ್ಯೂಸಿನೆಸ್ ಡೆವಲಪ್‍ಮೆಂಟ್), ಭೀಸ್ಮಾದೇಬ್ ಸಾಹೂ (ಜನರಲ್ ಮ್ಯಾನೇಜರ್ ಗಣಿ) ಮತ್ತು ಡಾ. ನಜೀಮಾ ಬಾನು (ಹಿರಿಯ ವ್ಯವಸ್ಥಾಪಕಿ-ಆರೋಗ್ಯ ಸೇವೆಗಳು) ಇವರಿಗೆ ಈ ಪ್ರತಿಷ್ಠಿತ 5 ಸ್ಟಾರ್ ರೇಟಿಂಗ್ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. 
2014-15 ಸಾಲಿನಿಂದ ಭಾರತ ಸರಕಾರದ ಗಣಿ ಸಚಿವಾಲಯವು ಉತ್ತಮವಾಗಿ ಕಾರ್ಯನಿರ್ವಹಿಸುವ ಗಣಿ ಸಂಸ್ಥೆಗಳಿಗೆ ಈ ಪ್ರತಿಷ್ಠಿತ 5 ಸ್ಟಾರ್ ರೇಟಿಂಗ್ ಪ್ರಶಸ್ತಿಯನ್ನು ನೀಡಲು ಪ್ರರಾಂಭಿಸಿತು.  ಅಂದಿನಿಂದ ಇಂದಿನವರೆಗೂ ಈ ಪ್ರಶಸ್ತಿಯನ್ನು ಸ್ಮಯೋರ್ ಸಂಸ್ಥೆಯು ಕಳೆದ ಎಂಟು ವರುಷಗಳಿಂದ ಸತತವಾಗಿ ಪಡೆಯುತ್ತಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. 
ಕೇಂದ್ರ ಗಣಿ ಸಚಿವಾಲಯವು ಸ್ಮಯೋರ್ ಸಂಸ್ಥೆಯ ಕಾರ್ಯಾಡಳಿತ, ವೈಜ್ಞಾನಿಕ ಗಣಿಗಾರಿಕೆ, ಸಾಮಾಜಿಕ ಕಾಳಜಿ, ಪರಿಸರ ಸ್ನೇಹಿ, ಅಭಿವೃದ್ಧಿ ಕಾರ್ಯಗಳು, ಉದ್ಯೋಗ, ಸಂಸ್ಥೆಯು ಉತ್ತಮ ಮಟ್ಟದಲ್ಲಿ ಗಣಿಯನ್ನು ನಡೆಸಿಕೊಂಡು ಹೋಗುತ್ತಿರುವುದನ್ನು ಗಮನಿಸಿ ಸ್ಮಯೋರ್ ಸಂಸ್ಥೆಗೆ ಕೇಂದ್ರ ಸರಕಾರವು ಈ 5 ಸ್ಟಾರ್ (ಪಂಚತಾರಾ ಪ್ರಶಸ್ತಿ) ರೇಟಿಂಗ್ ಅವಾರ್ಡ್‍ನ್ನು ನೀಡಿದೆ.   ಈ ಪ್ರಶಸ್ತಿಯನ್ನು ಸ್ಮಯೋರ್ ಸಂಸ್ಥೆಯು ಕಳೆದ ಎಂಟು ವರುಷಗಳಿಂದ  ಸತತವಾಗಿ ಪಡೆಯುತ್ತಿದೆ.  ಅದರಲ್ಲಿಯೂ ಈ ಬಾರಿಯೂ ಕೂಡ ಸಂಸ್ಥೆಯ ಎರಡೂ ಮೈನಿಂಗ್‍ಗಳು ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನವಾಗಿರುವುದು ಒಂದು ವಿಶೇಷ ಮತ್ತು ಇಂಥ ಪ್ರಶಸ್ತಿಗಳು ಸಂಸ್ಥೆಯ ಜವಾಬುದಾರಿಯನ್ನು ಹೆಚ್ಚಿಸುತ್ತವೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.