ಕೇಂದ್ರದ ವಿರುದ್ಧ ಹೋರಾಟಕ್ಕೆ ವಿಪಕ್ಷಗಳ ನಿರ್ಧಾರ

ನವದೆಹಲಿ, ನ.೩೦- ಕೇಂದ್ರ ಸರ್ಕಾರ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದು ತರಾತುರಿಯಲ್ಲಿ ವಾಪಸ್ ಪಡೆದಿದೆ .ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ರೈತರು ಹೋರಾಟ ನಡೆಸಿದ ಏಳುನೂರಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ್ದಾರೆ ಇದಕ್ಕೆ ಹೊಣೆಯಾರು ಎಂದು ರಾಜ್ಯಸಭೆಯ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.
ದೇಶದಲ್ಲಿ ದಿನನಿತ್ಯ ಏರಿಕೆಯಾಗುತ್ತಿರುವ ಬೆಲೆ ಏರಿಕೆ, ಪೆಗಾಸಿಸ್ ಗೂಢಚರ್ಯೆ ಪ್ರಕರಣ, ಕೃಷಿ ಕಾಯ್ದೆಗಳು, ರೈತರ ವಿಷಯ ಸೇರಿದಂತೆ ಹಲವು ವಿಷಯಗಳ ಕುರಿತು ವಿರೋಧ ಪಕ್ಷಗಳು ಒಗ್ಗೂಡಿ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸಲಿದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳು ಸೇರಿದಂತೆ ಇನ್ನಿತರ ವಿಷಯಗಳ ಕುರಿತು ವಿರೋಧ ಪಕ್ಷಗಳು ಒಗ್ಗೂಡಿ ಹೋರಾಟ ಮಾಡಲು ಇದರಲ್ಲಿ ಯಾರಿಗೂ ಅನುಮಾನ ಬೇಡ ಎಂದು ಅವರು ತಿಳಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ನೇತೃತ್ವದಲ್ಲಿ ನಡೆದ ಪಕ್ಷದ ಸಂಸದೀಯ ಸಭೆಯಲ್ಲಿ ಯೂ ಕೂಡ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳು ಹಾಗೂ ಬೆಲೆ ಏರಿಕೆ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಹೋರಾಟ ಮಾಡಲು ನಿರ್ಧರಿಸಲಾಗಿದೆ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳೊಂದಿಗೆ ಚರ್ಚಿಸಿ ಎಲ್ಲರ ಸಹಕಾರದಿಂದ ಹೋರಾಟ ಮುಂದುವರಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ಕಾಯ್ದೆಗಳಿಂದ ರೈತರಿಗೆ ಆಗಿರುವ ಅನ್ಯಾಯದ ಕುರಿತು ವಿಷಯ ಪ್ರಸ್ತಾಪ ಮಾಡಿಲ್ಲ. ಈ ಕಾಯ್ದೆಗಳಿಂದ ರೈತರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಎನ್ನುವುದು ಗೊತ್ತಿದ್ದರೂ ಅದನ್ನು ಸದನದಲ್ಲಿ ಜಾರಿಗೆ ತಂದು ಕೆಲವೇ ದಿನಗಳಲ್ಲಿ ನಡೆಯಲಿರುವ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಹಿಂದಕ್ಕೆ ಪಡೆಯಲಾಗಿದೆ ಎಂದು ಅವರು ದೂರಿದ್ದಾರೆ.
ರೈತರಿಗೆ ಕೃಷಿ ಕಾಯ್ದೆಗಳಿಂದ ಅನುಕೂಲವಾಗಲಿದೆ ಎಂದು ಪದೇ ಪದೇ ಹೇಳುತ್ತಿದ್ದ ಕೇಂದ್ರ ಸರ್ಕಾರ ಈಗ ಏಕಾಏಕಿ ಅವುಗಳನ್ನು ಹಿಂದಕ್ಕೆ ಪಡೆದಿದೆ. ಇದರ ಹಿಂದಿರುವ ಮರ್ಮವನ್ನು ಎಲ್ಲರೂ ಅರ್ಥ ಮಾಡಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ರೈತರು ಕನಿಷ್ಠ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದಾರೆ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಈಡೇರಿಸಬೇಕು ಇಲ್ಲದಿದ್ದರೆ ರೈತರ ಹೋರಾಟದಲ್ಲಿ ಪಕ್ಷ ಕೂಡಾ ಬೆಂಬಲ ನೀಡಲಿದೆ ಎಂದು ಅವರು ಹೇಳಿದ್ದಾರೆ.
ಉತ್ತರಪ್ರದೇಶದ ಲಖಿಂಪುರ ಖೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕಾರು ಹತ್ತಿಸಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಮತ್ತು ಅವರ ಪುತ್ರನ ವಿರುದ್ಧ ಇದುವರೆಗೂ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಹೇಳಿದರು.
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಬೆಲೆಏರಿಕೆಯಿಂದ ಗಗನಮುಖಿ, ಪೆಗಾಸಿಸ್ ಪ್ರಕರಣ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಲಾಗುವುದು ಜೊತೆಗೆ ವಿರೋಧ ಪಕ್ಷಗಳು ಒಗ್ಗೂಡಿ ಹೋರಾಟ ಮಾಡುವುದಾಗಿ ಅವರು ತಿಳಿಸಿದ್ದಾರೆ.

ರಾಜ್ಯಸಭೆಯಲ್ಲಿ ವಿಪಕ್ಷಗಳ ಸಭಾತ್ಯಾಗ
ಸಂಸತ್ತಿನ ಮುಂಗಾರು ಅಧಿವೇಶನದ ಕಡೆಯ ದಿನ ೧೨ ಸದಸ್ಯರನ್ನು ಅಮಾನತು ಮಾಡಿರುವ ಕ್ರಮವನ್ನು ಕೂಡಲೇ ಹಿಂಪಡೆಯಬೇಕು ಎಂದು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಯಲ್ಲಿಂದು ಆಗ್ರಹಿಸಿದ್ದಾರೆ. ಈ ಮಧ್ಯೆ ೧೨ ಮಂದಿಯ ಸದಸ್ಯರ ಅಮಾನತ್ತು ಪಡೆಯದ ಸಭಾಪತಿ ವೆಂಕಯ್ಯನಾಯ್ಡು ಅವರ ನಿಲುವನ್ನು ಖಂಡಿಸಿ ಪ್ರತಿಪಕ್ಷಗಳು ಸಭಾತ್ಯಾಗ ನಡೆಸಿದವು.
ಅಮಾನತು ಕ್ರಮವನ್ನು ಹಿಂಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಪ್ರತಿಪಕ್ಷಗಳು ಈ ಕ್ರಮ ಸಂಸತ್ತಿಗೆ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಸಭೆಯ ೧೨ ಸದಸ್ಯರನ್ನು ನಿಯಮ ಬಾಹೀರವಾಗಿ ಅಮಾನತು ಮಾಡಲಾಗಿದೆ. ನಿಯಮಗಳ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
೧೨ ಸದಸ್ಯರನ್ನು ಅಮಾನತು ಮಾಡುವ ಪ್ರಕ್ರಿಯೆಯನ್ನು ಸಚಿವರು ಮಾಡುವ ಸಂದರ್ಭದಲ್ಲಿ ಕ್ರಿಯಾಲೋಪ ಎತ್ತಿದ್ದರೂ ತಮಗೆ ಅವಕಾಶ ಮಾಡಿಕೊಡಲಿಲ್ಲ ಎಂದು ಅವರು ದೂರಿದ್ದಾರೆ.
ನಾವೇ ಮಾಡಿಕೊಂಡ ನಿಯಮಗಳು ಮತ್ತು ಸಂಪ್ರದಾಯಗಳ ಪ್ರಕಾರ, ಪ್ರತಿಯೊಬ್ಬ ಸದಸ್ಯರಿಗೂ ಅನುಮತಿ ನೀಡಬೇಕು ಆದರೆ ನಿಯಮಗಳನ್ನು ಪಾಲಿಸಿಲ್ಲ ಎಂದು ಅವರು ತಿಳಿಸಿದ್ದಾರೆ.
ಅಮಾನತುಗೊಂಡಿರುವ ೧೨ ಸದಸ್ಯರ ಅಮಾನತು ಪ್ರಕ್ರಿಯೆಯನ್ನು ವಾಪಸ್ ಪಡೆಯುವವರೆಗೂ ಹೋರಾಟವನ್ನು ಮುಂದುವರಿಸುವುದಾಗಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಸಭಾಪತಿಗಳು ಸದಸ್ಯರಿಗೆ ಮಾತನಾಡಲು ಅವಕಾಶ ಮಾಡಿಕೊಡದೆ ಅಮಾನತು ಮಾಡಿದ್ದಾರೆ ಇದು ಸಂಸದೀಯ ವ್ಯವಸ್ಥೆಯ ಮೂಲಕ ಬೆಳವಣಿಗೆಯಲ್ಲ ಎಂದು ಅವರು ತಿಳಿಸಿದ್ದಾರೆ.