
ಕಂಪ್ಲಿ ಡಿ 25: ಪಟ್ಟಣದ ಎಪಿಎಂಸಿ ಆವರಣದಲ್ಲಿ ಶುಕ್ರವಾರದಂದು ಬಿಜೆಪಿ ಕಂಪ್ಲಿ ಮಂಡಲ ವತಿಯಿಂದ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ ಹಾಗು ಅಂತರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಬಿಜೆಪಿ ಕಂಪ್ಲಿ ಮಂಡಲ ಅಧ್ಯಕ್ಷ ಅಳ್ಳಳ್ಳಿ ವೀರೇಶ್ ಮಾತನಾಡಿ, ಮಾಜಿ ಪ್ರಧಾನಿ ಹಾಗೂ ರಾಷ್ಟ್ರ ರಾಜಕಾರಣದ ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನವಾಗಿದ್ದು ದೇಶಾದ್ಯಂತ ಕಿಸಾನ್ ಸಮ್ಮಾನ್ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೃಹತ್ ಹಾಗು ರೈತರಿಗೆ ಪ್ರಮುಖ ಆದ್ಯತೆ ನೀಡಿರುವ ಕಿಸಾನ್ ಸಮ್ಮಾನ್ ಕಾರ್ಯಕ್ರಮದಡಿ ದೇಶದ ಒಟ್ಟು 9 ಕೋಟಿಗೂ ಹೆಚ್ಚು ಫಲಾನುಭವಿ ರೈತ ಕುಟುಂಬಗಳಿಗೆ 18 ಸಾವಿರ ಕೋಟಿಗೂ ಹೆಚ್ಚು ಕಂತನ್ನು ಪ್ರಧಾನಿ ಮೋದಿ ಬಿಡುಗಡೆಗೊಳಿಸಿದ್ದಾರೆ. ಸದ್ಯ ಕೃಷಿ ಸಂಬಂಧಿತ ಮೂರು ನೂತನ ಮಸೂದೆ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದು, ಅದರ ಮಹತ್ವವನ್ನು ರೈತರಿಗೆ ಸ್ಪಷ್ಟಪಡಿಸುವ ಕಾರ್ಯ ದೇಶಾದ್ಯಂತ ನಡೆದಿದೆ. ಆದರೆ ನೂತನ ಮಸೂದೆಗಳ ವಿಚಾರದಲ್ಲಿ ವಿಪಕ್ಷಗಳು ಅನಾವಶ್ಯಕವಾಗಿ ರೈತರಲ್ಲಿ ಗೊಂದಲ,ಆತಂಕ ಸೃಷ್ಟಿಸಿ ಕೇಂದ್ರ ಸರ್ಕಾರ ವಿರುದ್ಧ ಎತ್ತಿಕಟ್ಟುವ ಹುನ್ನಾರ ನಡೆಸುತ್ತಿರುವುದು ಖಂಡನೀಯ ಎಂದರು.
ಬಿಜೆಪಿ ಜಿಲ್ಲಾ ಒಬಿಸಿ ಘಟಕ ಉಪಾಧ್ಯಕ್ಷ ಪಿ.ಬ್ರಹ್ಮಯ್ಯ ಮಾತನಾಡಿ, ಸದ್ಯ ಪ್ರಧಾನಿ ಮೋದಿ ಅವರು ಆರು ರಾಜ್ಯಗಳ ರೈತರೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸುತ್ತಿದ್ದಾರೆ. ನೇರವಾಗಿಯೆ ರೈತರ ಕಷ್ಟಗಳಿಗೆ ಸ್ಪಂದಿಸುವ, ಸಮಸ್ಯೆ ಪರಿಹರಿಸುವ ಮಹತ್ತರ ಕಾರ್ಯಕ್ಕೆ ಮುಂದಾಗಿದ್ದಾರೆ. ರೈತರು ಆರ್ಥಿಕವಾಗಿ ಮತ್ತಷ್ಟು ಪ್ರಗತಿ ಹೊಂದುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮಹತ್ತರ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ರೈತರ ಹಿತಾಸಕ್ತಿ ಕಾಪಾಡುವ ಕಾರ್ಯ ಮುಂದಿನ ದಿನಗಳಲ್ಲು ಸಹ ನಿರಂತರವಾಗಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕಂಪ್ಲಿಹಾಗು ತಾಲೂಕಿನ ವಿವಿಧ ಗ್ರಾಮಗಳ ಪ್ರಗತಿಪರ ರೈತರಾದ ರಾಘವರೆಡ್ಡಿ, ಮಲ್ಲಪ್ಪ, ಪಾಂಡುರಂಗಪ್ಪ, ಕೊನೇರು ರಂಗಯ್ಯ, ಕೆ.ವೈ.ತಿಪ್ಪೇಸ್ವಾಮಿ, ವೆಂಕಟೇಶ್, ರೈತ ಮಹಿಳೆ ನರಸಮ್ಮ ಅವರನ್ನು ಕಿಸಾನ್ ಸಮ್ಮಾನ್ ದಿನಾಚರಣೆ ಅಂಗವಾಗಿ ಮಂಡಲ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕಂಬತ್ ರಮೇಶ್ ಕಾರ್ಯಕ್ರಮದಲ್ಲಿ ನಿರೂಪಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಕಂಪ್ಲಿ ಮಂಡಲ ಪ್ರ.ಕಾರ್ಯದರ್ಶಿ ಜಿ.ಸುಧಾಕರ್, ಎನ್.ರಾಮಾಂಜಿನೇಯ,ಬಿ.ಸಿದ್ದಪ್ಪ,ಸಣ್ಣ ಹುಲುಗಪ್ಪ,ಡಾ.ವಿ.ಎಲ್.ಬಾಬು,ಸಿ ಆರ್ ಹನುಮಂತ, ಆಂಜನೇಯ, ಹೂವಣ್ಣ, ಬಿಜೆಪಿ ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಚಂದ್ರಕಾಂತ್ ರೆಡ್ಡಿ, ಬಿಜೆಪಿ ಕಂಪ್ಲಿ ನಗರ ಘಟಕಧ್ಯಕ್ಷ ಕೊಡಿದಲ ರಾಜು, ಎನ್.ಕೃಷ್ಣ ನಾಯಕ್,ಹರೀಶ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.