(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಜು.೧೩:ಕೇಂದ್ರ ಬಿಜೆಪಿ ಸರ್ಕಾರ ವರ್ಷಕ್ಕೆ ೨ ಕೋಟಿ ಉದ್ಯೋಗ ನೀಡುವ ಭರವಸೆ ನೀಡಿತ್ತು. ಅದರಂತೆ ೯ ವರ್ಷದಲ್ಲಿ ೧೮ ಕೋಟಿ ಮಂದಿಗೆ ಉದ್ಯೋಗ ದೊರಕಬೇಕಾಗಿತ್ತು. ಆದರೆ, ಯಾರಿಗಾದರೂ ಉದ್ಯೋಗ ನೀಡಿದೆಯೇ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್ ಮುನಿಯಪ್ಪ ವಿಧಾನಸಭೆಯಲ್ಲಿ ಪ್ರಶ್ನಿಸಿದರು.
ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಸುತ್ತಿದ್ದ ಕಾಂಗ್ರೆಸ್‌ನ ಶಿವಲಿಂಗೇಗೌಡ ಮಾತನಾಡಿ ಕೇಂದ್ರವನ್ನು ತರಾಟೆಗೆ ತೆಗೆದುಕೊಳ್ಳುವ ವೇಳೆ ಬಿಜೆಪಿ ಸದಸ್ಯರು ಎದ್ದು ನಿಂತ ವಿರೋಧ ವ್ಯಕ್ತಪಡಿಸುತ್ತಿದ್ದಾಗ ಮಧ್ಯ ಪ್ರವೇಶಿಸಿದ ಮುನಿಯಪ್ಪರವರು ಕಳೆದ ಯುಪಿಎ ಸರ್ಕಾರ ಆಹಾರ ಭದ್ರತಾ ಕಾಯ್ದೆ, ನರೇಗಾದಂತಹ ಯೋಜನೆಗಳನ್ನು ತಂದು ರೈತರು ಕೂಲಿಕಾರ್ಮಿಕರನ್ನು ಬದುಕನ್ನು ಹಸನು ಮಾಡಲು ಪ್ರಯತ್ನ ನಡೆಸಿತ್ತು ಎಂದರು. ಆದರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನೀಡಿದ್ದ ಭವಸೆಗಳನ್ನೆಲ್ಲ ಈಡೇರಿಸದೆ ದೇಶದ ಜನತೆಯನ್ನು ವಂಚಿಸಿದೆ.
ಸಂಸತ್ ಸದಸ್ಯನಾಗಿದ್ದ ನನಗೆ ಬಿಜೆಪಿ ಸರ್ಕಾರದ ಪ್ರತಿ ಅಂಕಿ-ಅಂಶಗಳು ಗೊತ್ತು ಎಂದು ತಿರುಗೇಟು ನೀಡಿದರು. ಸಚಿವರ ಮಾತಿಗೆ ವಿರೋಧ ವ್ಯಕ್ತಪಡಿಸಿದ ಬಿಜೆಪಿಯ ಅಶ್ವತ್ಥನಾರಾಯಣ, ಸಿ.ಸಿ ಪಾಟೀಲ್, ಸುನಿಲ್‌ಕುಮಾರ್, ಅಶೋಕ್ ಮತ್ತಿತರರು ಪ್ರಧಾನಿ ಮೋದಿ ಅವರಿಂದ ದೇಶದ ಬಡತನ ಬಹುತೇಕ ನಿರ್ಮೂಲನೆಯಾಗುತ್ತಿದೆ. ವಿಶ್ವಸಂಸ್ಥೆಯೇ ಅದನ್ನು ಹೇಳಿದೆ. ಇದು ಬಿಜೆಪಿ ಸರ್ಕಾರ ಹೆಮ್ಮೆ ಎಂದು ತಿರುಗೇಟು ನೀಡಿದರು.
ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷದ ನಡುವೆ ಮಾತಿನ ಚಕಮಕಿ ಗದ್ದಲ ಉಂಟಾದಾಗ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿಗಳು, ಶಾಸಕ ಶಿವಲಿಂಗೇಗೌಡ ಅವರು ರಾಜ್ಯಪಾಲರ ಭಾಷಣದ ಬಗ್ಗೆ ಸರಿಯಾಗಿ ಚರ್ಚೆ ಮಾಡುತ್ತಿದ್ದಾರೆ. ಅವರಿಗೆ ಮಾತನಾಡಲು ಅವಕಾಶ ಕೊಡಿ, ಅವರ ಚರ್ಚೆಯಲ್ಲಿ ಏನಾದರೂ ವ್ಯತ್ಯಾಸಗಳಿದ್ದರೆ ಅದನ್ನು ನಿಮಗೆ ಮಾತನಾಡಲು ಅವಕಾಶ ಸಿಕ್ಕಾಗ ಅದನ್ನು ಪ್ರಶ್ನಿಸಿ ಎಂದು ಸಲಹೆ ನೀಡಿದರು.
ಬಿಜೆಪಿಯ ಸದಸ್ಯರು ಶಿವಲಿಂಗೇಗೌಡ ಅವರು ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಮಾಡುವುದನ್ನು ಬಿಟ್ಟು ಚುನಾವಣಾ ಭಾಷಣ ಮಾಡುತ್ತಿದ್ದಾರೆ. ಕೂಡಲೇ ಅದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಚರ್ಚೆ ಮುಂದುವರೆಸಿದ ಶಿವಲಿಂಗೇಗೌಡ ಅವರು ರಾಜ್ಯಸರ್ಕಾರದ ಶಕ್ತಿ ಗ್ಯಾರಂಟಿಯಿಂದ ಲಕ್ಷಾಂತರ ಮಹಿಳೆಯರಿಗೆ ಅನುಕೂಲವಾಗಿದೆ. ಇದನ್ನು ಪ್ರತಿಪಕ್ಷಗಳ ಸದಸ್ಯರು ಸ್ವಾಗತಿಸಬೇಕು, ಅದನ್ನು ಬಿಟ್ಟು ತಕಾರರು ತೆಗೆದರೆ ಹೇಗೆ ಎಂದು ಪ್ರಶ್ನಿಸಿದರು.