ಕೇಂದ್ರದ ವಿರುದ್ದ ಕಾಂಗ್ರೆಸ್ ಪ್ರತಿಭಟನೆ

ತುಮಕೂರು, ನ. ೨- ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಕೇಂದ್ರ ಸರ್ಕಾರದ ಭ್ರಷ್ಟಾಚಾರ, ರೈತ, ದಲಿತ ಮತ್ತು ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಕಾಂಗ್ರೆಸ್ ಪಕ್ಷದ ವಕೀಲರ ಘಟಕದ ಟಿ.ಎಸ್. ನಿರಂಜನ್, ಕೇಂದ್ರ ಸರ್ಕಾರದ ಹಲವಾರು ರೈತರ ವಿರೋಧಿ ಕಾನೂನುಗಳಾದ ಎಪಿಎಂಸಿ ತಿದ್ದುಪಡಿ ಕಾಯ್ದೆ, ನೋಟು ಅಮಾನೀಕರಣ, ಅವೈಜ್ಞಾನಿಕ ಜಿ.ಎಸ್.ಟಿ.ಯಿಂದಾಗಿ ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ.ಇದನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ನ್ಯಾಯಯುತವಾಗಿ ದೊರೆಯುತ್ತಿದ್ದ ಅಷ್ಟೋ ಇಷ್ಟೋ ಬೆಲೆಯೂ ಇಲ್ಲದಂತಾಗಿದೆ. ಯಾರು ಎಲ್ಲಿ ಬೇಕಾದರೂ ರೈತರ ಉತ್ಪನ್ನಗಳನ್ನು ಕೊಳ್ಳಬಹುದು ಎಂಬ ಕಾನೂನಿನಿಂದ ಕಾಳಸಂತೆಕೋರರ ಹಾವಳಿ ಹೆಚ್ಚಾಗಲಿದ್ದು, ಭವಿಷ್ಯದ ಮಾರುಕಟ್ಟೆ (ಪ್ಯೂಚರ್ ಮಾಕೇರ್ಟ್) ಹೆಸರಿನಲ್ಲಿ ಉಳ್ಳವರು ಅಕ್ರಮ ದಾಸ್ತಾನು ಮಾಡಿ, ಕೃತಕ ಅಭಾವ ಸೃಷ್ಠಿಸಿ ಗ್ರಾಹಕರಿಗೆ ಇನ್ನಿಲ್ಲದ ಕಿರುಕುಳ ನೀಡುವ ಸಾಧ್ಯತೆ ತಳ್ಳಿ ಹಾಕಲಾಗದು. ಇಂತಹ ಜನ ವಿರೋಧಿ ನೀತಿಯನ್ನು ದೇಶದ ಜನರು ಖಂಡಿಸಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದರು.
ಹಿರಿಯ ಮುಖಂಡ ಹೆಚ್.ಸಿ. ಹನುಮಂತಯ್ಯ ಮಾತನಾಡಿ, ನೋಟು ಅಮಾನೀಕರಣ ಮತ್ತು ಅವೈಜ್ಞಾನಿಕ ಜಿ.ಎಸ್.ಟಿ. ಯಿಂದಾಗಿ ದೇಶದ ಲಕ್ಷಾಂತರ ಜನ ಉದ್ಯೋಗ ಕಳೆದುಕೊಳ್ಳುವಂತಾಯಿತು. ಅಲ್ಲದೆ ಲಕ್ಷಾಂತರ ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರು ವ್ಯವಹಾರ ನಡೆಸಲು ಹಣವಿಲ್ಲದೆ ಬಾಗಿಲು ಮುಚ್ಚಿದ ಪರಿಣಾಮ ಕೋಟ್ಯಂತರ ಜನ ಅಸಂಘಟಿತ ವಲಯದ ಕಾರ್ಮಿಕರು ಬೀದಿಗೆ ಬಿದ್ದರು. ಇದರ ಪರಿಣಾಮ ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ. ಇದರ ಬಗ್ಗೆ ತಲೆಕೆಡಿಸಿಕೊಳ್ಳದ ಪ್ರಧಾನಿ, ಪದವೀಧರರ ಪಕೋಡ ಮಾರಾಟ ಮಾಡಿ ಎಂದು ಹೇಳುವ ಮೂಲಕ ಯುವಜನತೆಯನ್ನು ಅವಹೇಳನ ಮಾಡಿದ್ದಾರೆ. ಇದರ ವಿರುದ್ದ ದೇಶದ ಯುವಜನರು ಹೋರಾಟ ನಡೆಸಬೇಕಾಗಿದೆ ಎಂದು ಪ್ರತಿಭಟನಾನಿರತ ಮುಖಂಡರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಮಂಜುನಾಥ್, ಶಿವಾಜಿ, ಶ್ರೀನಿವಾಸ್ ಪುಟ್ಟರಾಜು, ಅಂಬರೀಷ್, ರುದ್ರೇಶ್, ಜಾತ, ನಟರಾಜು, ಗೀತಾರುದ್ರೇಶ್, ಗಿರಿಜಾಂಬ, ಮುಬೀನಾ, ಪ್ರಕಾಶ್, ಗೂಳರಿವೆ ನಾಗರಾಜು, ಜಾರ್ಜ್, ಸತೀಶ್ ಮತ್ತಿತರರು ಭಾಗವಹಿಸಿದ್ದರು.