ಕೇಂದ್ರದ ಮೂರು ಮಾರಕ ಕಾಯ್ದೆಗಳು ರದ್ದಾಗುವವರೆಗೂ ಹೋರಾಟ ನಿಲ್ಲದು: ಸಜ್ಜನ್

ಕಲಬುರಗಿ.ಡಿ.28:ಕೇಂದ್ರ ಸರ್ಕಾರದ ಕೃಷಿ ವಿರೋಧಿ ಮೂರೂ ಕಾಯ್ದೆಗಳನ್ನು ಹಿಂಪಡೆಯುವವರೆಗೂ ಹೋರಾಟ ಮುಂದುವರೆಯಲಿದೆ ಎಂದು ಕಮ್ಯುನಿಸ್ಟ್ ಪಕ್ಷದ ಹಿರಿಯ ಮುಖಂಡ ಎಂ.ಬಿ. ಸಜ್ಜನ್ ಅವರು ಇಲ್ಲಿ ಎಚ್ಚರಿಸಿದರು.
ನಗರದ ಜಗತ್ ವೃತ್ತದಲ್ಲಿ ಕೃಷಿ ವಿರೋಧಿ 3 ಕಾಯ್ದೆಗಳನ್ನು ಮತ್ತು ಕರ್ನಾಟಕ ಜಾನುವಾರುಗಳ ವಧೆ ಪ್ರತಿಬಂಧಕ ಕಾಯ್ದೆಯನ್ನು ಕೈಬಿಡುವುದು ಸೇರಿದಂತೆ ರೈತಪರ ಪ್ರಮುಖ ಬೇಡಿಕೆಗಳಿಗೆ ಒತ್ತಾಯಿಸಿ ಹಲವು ಸಂಘಟನೆಗಳು ಕೈಗೊಂಡಿರುವ ರೈತರ ಹಕ್ಕೋತ್ತಾಯಗಳಿಗಾಗಿ ನಿರಂತರ ಧರಣಿ ನಿಮಿತ್ಯ ಸೋಮವಾರದಂದು 14ನೇ ದಿನದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಕೇಂದ್ರ ಸರ್ಕಾರವು ಹೋರಾಟವನ್ನು ದಾರಿ ತಪ್ಪಿಸಲು ಹಲವಾರು ರೀತಿಯ ಶಡ್ಯಂತ್ರವನ್ನು ನಡೆಸುತ್ತಿದೆ. ಅದಕ್ಕೆ ಹೋರಾಟಗಾರರು ಒಳಗಾಗುವುದಿಲ್ಲ ಎಂದರು.
ಈಗಾಗಲೇ ದೆಹಲಿಯ ಬಳಿ ರೈತರು ಬೃಹತ್ ಪ್ರತಿಭಟನೆ ಆರಂಭಿಸಿದ್ದಾರೆ. ಹರಿಯಾಣಾ, ಗುಜರಾತ್, ರಾಜಸ್ತಾನ್, ಪಂಜಾಬ್, ಮಧ್ಯಪ್ರದೇಶ್, ಕರ್ನಾಟಕ ಸೇರಿದಂತೆ ವಿವಿಧೆಡೆಯಿಂದ ಕೋಟ್ಯಾಂತರ ರೈತರು ಪ್ರತಿಭಟನೆಯಲ್ಲಿ ಧುಮುಕಿದ್ದಾರೆ. ಹರಿಯಾಣಾದಿಂದ 96000 ಟ್ರ್ಯಾಕ್ಟರ್‍ಗಳಲ್ಲಿ ಸುಮಾರು 80 ಲಕ್ಷ ಜನರು ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ರೈತರ ಪ್ರತಿಭಟನೆ ದಿನದಿಂದ ದಿನಕ್ಕೆ ಪ್ರಖರವಾಗುತ್ತಿದೆ ಎಂದು ಅವರು ಹೇಳಿದರು.
ಒಂದು ಕಡೆ ಕೃಷಿ ಸಚಿವರು ರೈತ ಮುಖಂಡರನ್ನು ಮಾತುಕತೆಗೆ ಆಮಂತ್ರಿಸುತ್ತಾರೆ. ಇನ್ನೊಂದು ಕಡೆ ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿಗೆ ಸಂಬಂಧಿಸಿದ ಮೂರು ಕಾಯ್ದೆಗಳು ರೈತರ ಪರವಾಗಿವೆ ಎಂದು ಹೋರಾಟಗಾರರ ವಿರುದ್ಧ ಮಾತನಾಡುತ್ತಾರೆ. ಹೀಗಾಗಿ ಕೇಂದ್ರ ಸರ್ಕಾರವು ರೈತ ಮುಖಂಡರೊಂದಿಗೆ ನಡೆಸುತ್ತಿರುವ ಮಾತುಕತೆ ಕೇವಲ ಕಣ್ಣೊರೆಸುವ ತಂತ್ರವಾಗಿದೆ ಎಂದು ಅವರು ಟೀಕಿಸಿದರು.
ಕೇಂದ್ರ ಗೃಹ ಸಚಿವ ರಾಜನಾಥಸಿಂಗ್ ಅವರು ಕಾಯ್ದೆಗಳು ಒಂದು ವರ್ಷದವರೆಗೆ ಚಾಲ್ತಿಯಲ್ಲಿ ಇರುತ್ತವೆ. ಮಾರಕ ಎಂದು ಕಂಡುಬಂದಲ್ಲಿ ಈ ಕುರಿತು ಪರಿಷ್ಕರಿಸಲು ಕೇಂದ್ರ ಸಿದ್ಧವಿದೆ ಎಂಬ ಹೇಳಿಕೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸಜ್ಜನ್ ಅವರು, ಮೂರು ಕಾಯ್ದೆಗಳು ರೈತ, ಕಾರ್ಮಿಕ ವಿರೋಧಿಯಾಗಿವೆ. ಅವುಗಳನ್ನು ಕೂಡಲೇ ಹಿಂಪಡೆಯಬೇಕು. ಒಂದು ಕ್ಷಣವೂ ಕಾಯ್ದೆ ಇರಬಾರದು ಎಂದರು.
ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಪೌರತ್ವ ನೊಂದಣಿ ಕಾಯ್ದೆ ಹೋರಾಟದ ಇನ್ನೊಂದು ಪ್ರತಿರೂಪವೇ ಮಾರಕ ಕಾಯ್ದೆಗಳ ವಿರುದ್ಧದ ಹೋರಾಟ ಎಂಬುದನ್ನು ಸಂಪೂರ್ಣವಾಗಿ ಅಲ್ಲಗಳೆದ ಸಜ್ಜನ್ ಅವರು, ಕೇಂದ್ರದ ಕೃಷಿ ನೀತಿಗಳ ವಿರುದ್ಧ ದೇಶಾದ್ಯಂತ ರೈತರೇ ಹೋರಾಟ ಮಾಡುತ್ತಿದ್ದಾರೆ. ಪೌರತ್ವ ಕಾಯ್ದೆಗೂ ಈ ಹೋರಾಟಕ್ಕೂ ಥಳುಕು ಹಾಕುವುದು ಸರಿಯಲ್ಲ ಎಂದರು.