ಕೇಂದ್ರದ ಮಲತಾಯಿ ಧೋರಣೆ ಸರಿಯಲ್ಲ: ಮುನಿ ನರಸಿಂಹಯ್ಯ

ವಿಜಯಪುರ.ಏ.೨೬- ಈ ಹಿಂದೆ ಕಾಂಗ್ರೆಸ್ ಪಕ್ಷವು ಕೇಂದ್ರ ಸರ್ಕಾರದಲ್ಲಿ ಆಡಳಿತ ನಡೆಸಿದ್ದು ರಾಜ್ಯ ಸರ್ಕಾರಗಳಿಗೆ ಸೇರಬೇಕಾದ ಅವರುಗಳ ಪಾಲಿನ ಅಭಿವೃದ್ಧಿ ಹಣ, ಬರಪೀಡಿತ ಪ್ರದೇಶಗಳಿಗೆ ಸೇರಬೇಕಾದ ಹಣ ನೀಡುವಲ್ಲಿ ತಾರತಮ್ಯ ಮಾಡಿರಲಿಲ್ಲ ಆದರೆ ಇದೀಗ ಬಿಜೆಪಿ ಸರ್ಕಾರವು ರಾಜ್ಯ ಸರ್ಕಾರದೊಂದಿಗೆ ಮಾಡುತ್ತಿರುವ ಮಲತಾಯಿ ಧೋರಣೆಯಿಂದ ಜನರು ಬಸವಳಿಯುವಂತಾಗಿದೆ ಎಂದು ಇದಕ್ಕೆ ಜನತೆ ಚುನಾವಣೆಯಲ್ಲಿ ಬುದ್ಧಿ ಕಲಿಸಲಿರುವರೆಂದು ಮಾಜಿ ಶಾಸಕ ಮುನಿ ನರಸಿಂಹಯ್ಯ ತಿಳಿಸಿದರು.
ಕಾಂಗ್ರೆಸ್ ಮುಖಂಡರೊಂದಿಗೆ ಚುನಾವಣೆ ಸಿದ್ಧತೆಗಳ ಕುರಿತು ಚರ್ಚೆ ನಡೆಸಿದ ನಂತರ, ಕಾಂಗ್ರೆಸ್ ಅಭ್ಯರ್ಥಿ ರಕ್ಷಾರಾಮಯ್ಯ ಅವರ ಪರವಾಗಿ ಪ್ರಚಾರ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ದೇಶದ ಭದ್ರತೆಗಾಗಿ ಲೋಕಸಭೆ ಚುನಾವಣೆ ನಡೆಯುತ್ತಿದೆ. ಬುದ್ಧಿಜೀವಿಗಳು, ಚಿಂತಕರು ದೇಶದಲ್ಲಿದ್ದಾರೆ. ದೇಶದಲ್ಲಿನ ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿದ್ದಾರೆ. ೬೦ ವರ್ಷಗಳ ಕಾಲ ಯಾವುದೇ ಸಮಸ್ಯೆಯಿಲ್ಲದೆ ದೇಶವನ್ನು ಮುನ್ನಡೆಸಿಕೊಂಡು ಬಂದಿದ್ದ ಕಾಂಗ್ರೆಸ್ ಉತ್ತಮ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಮಾಜಿ ಶಾಸಕ ಮುನಿನರಸಿಂಹಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಸರ್ವರಿಗೂ ಸಮಪಾಲು- ಸರ್ವರಿಗೂ ಸಮಬಾಳು ಎಂಬ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಕೇಂದ್ರದ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ. ಧರ್ಮಾಧಾರಿತವಾದ ರಾಜಕಾರಣ ಮಾಡುತ್ತಿದೆ. ನಾವು ಕಟ್ಟಿದ ತೆರಿಗೆ ಹಣದಲ್ಲಿ ಒಂದು ರೂಪಾಯಿಯಲ್ಲಿ ಕೇವಲ ೧೩ ಪೈಸೆ ವಾಪಸ್ಸು ಕೊಡುತ್ತಾರೆ. ಆದರೆ, ಬಿಜೆಪಿ ಸರ್ಕಾರ ತೆರಿಗೆ ಹಣ ಬಿಡುಗಡೆ ಮಾಡಲಿಲ್ಲ. ರಾಜ್ಯ ಸರ್ಕಾರ ಪತ್ರ ಬರೆದರೂ, ಪ್ರತಿಭಟನೆ ಮಾಡಿದರೂ ಸ್ಪಂದನೆ ಸಿಗದೆ ಇದ್ದಾಗ, ಸುಪ್ರೀಂ ಕೋರ್ಟ್ ಗೆ ಹೋಗಬೇಕಾಯಿತು.
ಈಗ ಸುಪ್ರೀಂ ಕೋರ್ಟ್‌ನಲ್ಲಿ ನಮ್ಮ ರಾಜ್ಯಕ್ಕೆ ನ್ಯಾಯ ಸಿಕ್ಕಿದೆ. ಕೇಂದ್ರದಲ್ಲಿ ಅಧಿಕಾರ ನಡೆಸಿದ್ದ ಕಾಂಗ್ರೆಸ್ ಯಾವತ್ತೂ ವಿರೋಧ ಪಕ್ಷಗಳಿರುವ ರಾಜ್ಯಗಳಿಗೆ ಅನ್ಯಾಯ ಮಾಡಿರಲಿಲ್ಲ. ಬಡವರಿಗೆ ಅಕ್ಕಿ ಕೊಡಬೇಕೆಂದು ಕೇಂದ್ರಕ್ಕೆ ಅಕ್ಕಿ ಕೇಳಿದೆವು ನಮಗೆ ಕೊಡಲಿಲ್ಲ. ನಾವು ಪ್ರತಿ ಕೆ.ಜಿ.ಅಕ್ಕಿಗೆ ೩೪ ರೂಪಾಯಿಯಂತೆ ಜನರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರ ಜನರಿಗೆ ದ್ರೋಹ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ದೇಶದಲ್ಲಿ ಕಾಂಗ್ರೆಸ್ ಪಕ್ಷದ ಪರವಾದ ಅಲೆಯಿರುವ ಕಾರಣ, ಆದಾಯ ತೆರಿಗೆ ಇಲಾಖೆ, ಹಾಗೂ ಜಾರಿ ನಿರ್ದೇಶನಾಲಯದಿಂದ ದಾಳಿ ಮಾಡಿಸಿ, ಕಾಂಗ್ರೆಸ್ ಪಕ್ಷದ ಹಣವನ್ನೆಲ್ಲಾ ಮುಟ್ಟುಗೋಲು ಹಾಕಿಕೊಳ್ಳುವಂತೆ ಮಾಡಿ, ಪ್ರಚಾರಕ್ಕೂ ಹಣವಿಲ್ಲದಂತೆ ಬಿಜೆಪಿಯವರು ಮಾಡಿದ್ದಾರೆ. ನಮ್ಮ ಬಳಿ ಹಣವಿಲ್ಲ, ಜನರ ಪ್ರೀತಿ ವಿಶ್ವಾಸಗಳಿಸಿಕೊಂಡಿದ್ದೇವೆ. ಕೈಮುಗಿದು ದೇಶದ ಹಿತಕ್ಕಾಗಿ ಜನರ ಬಳಿ ಮತ ಕೇಳುತ್ತೇವೆ ಎಂದು ಮಾಜಿ ಶಾಸಕ ಮುನಿನರಸಿಂಹಯ್ಯ ಹೇಳಿದರು.

ಪುರಸಭೆ ಸದಸ್ಯ ವಿ.ನಂದಕುಮಾರ್ ಮಾತನಾಡಿ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಸ್ಥಾನಗಳನ್ನು ತಂದು ಕೊಡುತ್ತವೆ. ಕಾಂಗ್ರೆಸ್ ಪಕ್ಷವು ಸಹಾ ಹಲವು ಗ್ಯಾರಂಟಿಗಳನ್ನು ಕೇಂದ್ರದಲ್ಲಿ ನೀಡಿದ್ದು, ಪಕ್ಷಕ್ಕೆ ವರದಾನವಾಗಲಿದೆ ಎಂದರು.
ಪುರಸಭೆ ಸದಸ್ಯ ಎಂ.ಸತೀಶ್ ಕುಮಾರ್, ಮುಖಂಡರಾದ ಕೆ.ಎಂ.ಮಧುಮಹೇಶ್, ಆರ್.ಮುನಿರಾಜು, ಸೈಪುಲ್ಲಾ, ನರಸಿಂಹಮೂರ್ತಿ, ಮುಂತಾದವರು ಹಾಜರಿದ್ದರು.