ಕೇಂದ್ರದ ಪ್ರಸಾದ ಯೋಜನೆಗೆ ಬೀದರ್‍ನ ಪಾಪನಾಶ ದೇವಸ್ಥಾನ ಆಯ್ಕೆ

ಬೀದರ್:ಸೆ.24: ಕೇಂದ್ರದ ಪ್ರಸಾದ ಯೋಜನೆ ಅಡಿಯಲ್ಲಿ ಅಭಿವೃದ್ಧಿಗಾಗಿ ನಗರದ ಕೋಟಿ ಪಾಪನಾಶ ಲಿಂಗ ದೇವಸ್ಥಾನ ಆಯ್ಕೆಯಾಗಿದೆ ಎಂದು ಕೇಂದ್ರದ ನವೀಕರಿಸಬಹುದಾದ ಇಂಧನ ಮತ್ತು ರಸಾಯನಿಕ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಪ್ರಸಾದ ಯೋಜನೆಯಡಿ, ರಾಜ್ಯದಲ್ಲಿಯೇ ಬೀದರ್ ಜಿಲ್ಲೆಯ ಕೋಟಿ ಪಾಪನಾಶ ದೇವಸ್ಥಾನ ಮಾತ್ರ ಆಯ್ಕೆಯಾಗಿದ್ದು, ಅಭಿವೃದ್ದಿಗೆ ? 20 ರಿಂದ ? 25 ಕೋಟಿ ಹೆಚ್ಚುವರಿ ಅನುದಾನ ಬರಲಿದೆ.

ಈ ನಿಟ್ಟಿನಲ್ಲಿ ಇನ್ನು ಹೆಚ್ಚಿನ ಅಭಿವೃದ್ದಿ ಕಾರ್ಯಗಳು ಮಾಡಬಹುದಾಗಿದೆ ಎಂದು ಹೇಳಿದರು.

ಕೇಂದ್ರ ಪ್ರವಾಸೋದ್ಯಮ ಇಲಾಖೆ ಮಹಾನಿರ್ದೇಶಕರು, ರಾಜ್ಯದ ಹೆಚ್ಚುವರಿ ಮುಖ್ಯಕಾರ್ಯದರ್ಶಿಗಳಿಗೆ (ಪ್ರವಾಸೋದ್ಯಮ ಇಲಾಖೆ) ಪತ್ರ ಬರೆದು ಅಗತ್ಯ ಅಭಿವೃದ್ಧಿಗೆ ವಿವರವಾದ ಡಿ.ಪಿ.ಆರ್. ಸಿದ್ಧಪಡಿಸಿ ಸಲ್ಲಿಸುವಂತೆ ತಿಳಿಸಿದ್ಧಾರೆ. ಈಗಾಗಲೆ ? 5 ಕೋಟಿ ಅನುದಾನದಲ್ಲಿ ಪಾಪನಾಶ ದೇವಸ್ಥಾನದಲ್ಲಿ 1 ಶೌಚಾಲಯ, 20 ಕೊಠಡಿಗಳು, ಸಭಾಂಗಣ, ಸೋಲಾರ್ ಪ್ಯಾನಲ್, ಭಕ್ತರಿಗೆ ಮಾಹಿತಿ ಕೇಂದ್ರ ಮತ್ತು ಭಕ್ತರಿಗೆ ಕಾಯುವ ಕೊಠಡಿ ನಿರ್ಮಿಸಲು ಅಗತ್ಯ ಡಿ.ಪಿ.ಆರ್. ಸಿದ್ಧವಾಗಿ ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ’ ಎಂದು ತಿಳಿಸಿದರು.

‘ಸರ್ಕಾರದ ಎಲ್ಲ ಪ್ರಕ್ರಿಯೆಗಳು ಮುಗಿದ ಬಳಿಕ, ಪಾಪನಾಶ ದೇವಸ್ಥಾನದ ಅಭಿವೃದ್ಧಿಯ ಕಾಮಗಾರಿಗಳು ಶೀಘ್ರದಲ್ಲಿ ಪ್ರಾರಂಭವಾಗಲಿವೆ. ಜತೆಗೆ ಹಂತಹಂತವಾಗಿ ಬೀದರ್ ಲೋಕಸಭಾ ಕ್ಷೇತ್ರದ ಎಲ್ಲ ಐತಿಹಾಸಿಕ ದೇವಸ್ಥಾನಗಳ, ಸ್ಥಳಗಳ ಅಭಿವೃದ್ಧಿಗೆ ನನ್ನ ನಿರಂತರ ಪರಿಶ್ರಮವಿರಲಿದೆ’ ಎಂದು ಹೇಳಿದರು.