ಮೈಸೂರು: ಜೂ.16:- ಬಡವರಿಗೆ ಕೊಡುವ ಅಕ್ಕಿಯನ್ನು ನಿರಾಕರಿಸಿ ಪತ್ರ ಬರೆದಿರುವ ಕೇಂದ್ರ ಸರ್ಕಾರದ ನಿಲುವನ್ನು ಖಂಡಿಸ್ತೇವೆ, ಪ್ರತಿಭಟಿಸ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಖಾಸಗಿ ಕಾರ್ಯಕ್ರಮ ನಿಮಿತ್ತ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಮಾತನಾಡಿದ ಅವರು, ‘ನಾವು ಕೇಂದ್ರ ಸರ್ಕಾರದಿಂದ ಅಕ್ಕಿಯನ್ನು ಉಚಿತವಾಗೇನೂ ಕೇಳಿರಲಿಲ್ಲ. ಆದರೆ, ಕೊಡುವುದಿಲ್ಲ ಎಂದು ಹೇಳಿದೆ. ಇದರ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟವನ್ನೇ ರೂಪಿಸುತ್ತೇವೆ. ಈ ಬಗ್ಗೆ ಶುಕ್ರವಾರ ಬೆಂಗಳೂರಿನಲ್ಲಿ ಮಾಹಿತಿ ನೀಡುತ್ತೇನೆ’ ಎಂದರು.
ನಾವು ಘೋಷಿಸಿದಂತೆ 10 ಕೆಜಿ ಅಕ್ಕಿ ಕೊಡುತ್ತೇವೆ. ಈಗಾಗಲೇ ಕೇಂದ್ರದಿಂದ ನಿರಾಕರಣೆ ಪತ್ರ ಬಂದ ಹಿನ್ನೆಲೆಯಲ್ಲಿ ತೆಲಂಗಾಣ, ಆಂಧ್ರ ರಾಜ್ಯದ ಮುಖ್ಯಮಂತ್ರಿ ಗಳೊಂದಿಗೆ ಸಿಎಂ ಚರ್ಚಿಸುತ್ತಿದ್ದಾರೆ. ಇನ್ನೂ ರಾಜ್ಯ ರೈತರಿಂದಲೇ ಖರೀದಿಸಿ ಎಂಬ ಹೇಳಿಕೆ ಕುರಿತು ಪ್ರತಿಕ್ರಯಿಸಿ, ಕೆಲವೊಂದು ನಿಯಮಗಳಿವೆ. ಸರ್ಕಾರದ ಅಧೀನದಲ್ಲಿರುವ ಸಂಸ್ಥೆಗಳ ಮೂಲಕವೇ ಅಕ್ಕಿ ವಿತರಿಸಬೇಕಾಗಿರುವುದರಿಂದ ಆ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.
ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ. ಅಕ್ಕಿಯನ್ನು ಜುಲೈ 1ರಿಂದ ಕೊಡಬೇಕೆಂದು ತೀರ್ಮಾನಿಸಿದ್ದೇವೆ. ನಮ್ಮ ಬಳಿ ಅಕ್ಕಿ ಇಲ್ಲ ಎಂದು ಕೇಂದ್ರ ಸರ್ಕಾರದವರು ಕಾಗದ ಬರೆದಿದ್ದಾರೆ. ಹೀಗಾಗಿ, ನಮಗೇನೂ ಉಳಿದಿಲ್ಲ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚತ್ತೀಸ್‍ಗಡ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯದವರ ಜೊತೆ ಮಾತನಾಡಿದ್ದಾರೆ. ಯಾವ ರೀತಿ ಖರೀದಿ ಮಾಡಬೇಕು ಎನ್ನುವುದನ್ನು ನೋಡುತ್ತಿದ್ದಾರೆ’ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ನಡೆಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ. ಈ ತಾರತಮ್ಯವನ್ನು ವಿರೋಧಿಸುತ್ತೇವೆ. ನಮಗೆ ಕೊಡಬೇಕಾಗುತ್ತದೆ ಎಂಬ ಕಾರಣಕ್ಕೆ ಎಲ್ಲ ರಾಜ್ಯಗಳಿಗೂ ವಿತ್ ಡ್ರಾ ಮಾಡಿದೆ. ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಸಲು ಸಾಧ್ಯವಿಲ್ಲ. ಕೆಲವು ಸಂಸ್ಥೆಗಳು, ಬೇರೆ ಬೇರೆ ಏಜೆನ್ಸಿಗಳ ಮೂಲಕ ಖರೀದಿಸಬೇಕಾಗುತ್ತದೆ. ಯಾರ ಬಳಿಯೂ ಬೆರಳು ತೋರಿಸುಕೊಳ್ಳುವ ರೀತಿ ಕೆಲಸ ಮಾಡುವುದಿಲ್ಲ. ತಿನ್ನುವ ಅಕ್ಕಿ ಹಾಗೂ ಬಡವರ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮುನ್ನಲೆಯಲ್ಲಿ ಕಾಣಿಸಿಕೊಂಡ ವಾಸು
ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ತಪ್ಪಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‍ನಿಂದ ಅಂತರ ಕಾಯ್ದುಕೊಂಡು ಎಲ್ಲಾ ಪ್ರಚಾರದಿಂದ ದೂರವೇ ಉಳಿದಿದ್ದ ಮಾಜಿ ಶಾಸಕ ವಾಸು ಪಕ್ಷ ಕ್ಷೇತ್ರ ಹಾಗೂ ರಾಜ್ಯದಲ್ಲಿ ಗೆದ್ದಿದ್ದರೂ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಆದರೆ, ಉಪಮುಖ್ಯಮಂತ್ರಿಯಾದ ಬಳಿಕ ಮೈಸೂರಿಗೆ ಆಗಮಿಸಿದ ವೇಳೆ ಮಾಜಿ ಶಾಸಕ ವಾಸು ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು. ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಬಂದಾಗಲೂ ಕಾಣಿಸಿಕೊಳ್ಳದ ವಾಸು ಅವರು ಡಿಕೆಶಿಯವರೊಟ್ಟಿಗೆ ಕಾಣಿಸಿಕೊಂಡಿದ್ದು ಹಲವು ಚರ್ಚೆಗಳಿಗೂ ಕಾರಣವಾಗಿತ್ತು.
ಶಾಸಕ ಹರೀಶ್‍ಗೌಡ, ಮಾಜಿ ಶಾಸಕಿ ಸುನೀತಾ ವೀರಪ್ಪಗೌಡ, ಜಿಲ್ಲಾಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಕಾಗಲವಾಡಿ ಶಿವಣ್ಣ. ಶ್ರೀನಾಥ್‍ಬಾಬು, ಕೂರ್ಗಳ್ಳಿ ಮಹದೇವು ಇನ್ನಿತರರು ಉಪಸ್ಥಿತರಿದ್ದರು.