ಕೇಂದ್ರದ ನಾಯಕರು ತಿಳಿಸಿದಾಗ ಸಂಪುಟ ವಿಸ್ತರಣೆ:ಯಡಿಯೂರಪ್ಪ

ಕೊಪ್ಪಳ. ಜ.೦೯ ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಕೇಂದ್ರದ ನಾಯಕರು ತಿಳಿಸಿದಾಗ ಮಾಡಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಕೊಪ್ಪಳದ ಏರ್‌ಸ್ಟ್ರಿಪ್‌ನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ಪುನರ್ ರಚನೆ ಅಲ್ಲ, ವಿಸ್ತರಣೆ ಸಂಕ್ರಾಂತಿ ಹಬ್ಬದ ನಂತರ ಆಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದ ಬಿಜೆಪಿ ಸಚಿವರು, ಶಾಸಕರ ಜೊತೆ ಯುವರಾಜ್ ಫೋಟೋ ತೆಗೆಸಿಕೊಂಡದ್ದು ಅಪರಾಧವೇನಲ್ಲ. ಪ್ರಕರಣ ತನಿಖೆ ಹಂತದಲ್ಲಿದೆ. ತನಿಖೆ ಮುಗಿದ ನಂತರ ಸತ್ಯಾಸತ್ಯತೆ ಹೊರಬೀಳಲಿದೆಂದರು.
ಕೋವಿಡ್ ಕಾರಣ, ಅತಿವೃಷ್ಟಿ, ಬರಗಾಲದ ಆಪತ್ತುಗಳಿಂದಾಗಿ ರಾಜ್ಯದ ಜನತೆವ ನಿರೀಕ್ಷಿಸಿದಷ್ಟು ಸರಕಾರದಿಂದ ಕೆಲಸ ಮಾಡಲಾಗಿಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ. ೪೦-೫೦ ಸಾವಿರ ಕೋಟಿ ರೂ ಬಜೆಟ್ ಖೋತಾ ಆಗಿದೆ. ಇವೆಲ್ಲವೂ ರಾಜ್ಯದ ಜನತೆಗೆ ಗೊತ್ತಿದೆ. ಜನರು ಸರಕಾರಕ್ಕೆ ಸಹಕಾರ ನೀಡಬೇಕಾಗಿದೆಂದರು.
ದೇಶದಲ್ಲಿ ಮೊದಲ ಟಾಯ್ಸ್ ಕ್ಲಸ್ಟರ್ ಕಾರ್ಯಕ್ರಮಕ್ಕೆ ಭೂಮಿ ಪೂಜೆ ಮಾಡ್ತಿದಿವಿ. ಕೆಲಸ ಆರಂಭವಾದ ಬಳಿಕ ಪ್ರಧಾನಿ ಮೋದಿಯವರಿಂದ ಉದ್ಘಾಟನೆ ಮಾಡಿಸುವ ಅಪೇಕ್ಷೆ ಇದೆ ಎಂದರು.
ಈ ಸಂದರ್ಭದಲ್ಲಿ ಸಚಿವರಾದ ಬಿ.ಸಿ.ಪಾಟೀಲ, ಆನಂದ್ ಸಿಂಗ್, ಸಂಸದ ಕರಡಿ ಸಂಗಣ್ಣ, ಶಾಸಕ ಹಾಲಪ್ಪ ಆಚಾರ್, ಪರಣ್ಣ ಮುನವಳ್ಳಿ, ಬಸವರಾಜ ದಡೆಸೂಗುರು ಮತ್ತಿತರರು ಇದ್ದರು.