ಕೇಂದ್ರದ  ದಮನಕಾರಿ ಕ್ರಮವನ್ನು ವಿರೋಧಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.29: ಹೋರಾಟ ನಿರತ ಕುಸ್ತಿಪಟುಗಳಿಗೆ ಬೆಂಬಲವಾಗಿ ನಿಂತ ಸಂಘಟನೆಗಳ ಮುಖಂಡರನ್ನು ವಶಪಡಿಸಿಕೊಂಡ ಕ್ರಮವನ್ನು ಖಂಡಿಸಿ ಹಾಗೂ ಕೇಂದ್ರದ ದಮನಕಾರಿ ಕ್ರಮವನ್ನು ವಿರೋಧಿಸಿ ಬಳ್ಳಾರಿಯ ರಾಯಲ್ ಸರ್ಕಲ್‍ನ ನಟರಾಜ ಟಾಕೀಸ್ ಹತ್ತಿರ ಎಐಡಿಎಸ್‍ಓ ಎಐಎಂಎಸ್‍ಎಸ್ ಎಐಕೆಕೆಎಂಎಸ್, ಎಐಯುಟಿಯುಸಿ ಸಂಘಟನೆಗಳಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷರು ಡಿ.ನಾಗಲಕ್ಷ್ಮಿ ಮಾತನಾಡಿ., ಕಳೆದ ಒಂದು ತಿಂಗಳಿನಿಂದ ದೇಶದ ಹೆಸರಾಂತ ಕುಸ್ತಿ ಪಟುಗಳಾದ ಸಾಕ್ಷಿ ಮಲಿಕ್, ವಿನೇಶಾ ಪೋಗಟ್, ಬಜರಂಗ್ ಪೂನಿಯಾ ಹಾಗೂ ಇತರರು ತಮ್ಮ ಮೇಲೆ ಭಾರತೀಯ ಕುಸ್ತಿಪಟುಗಳ ಫೆಡರೇಷನ್ ಡಬ್ಲ್ಯೂ.ಎಫ್.ಐ ನ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್‍ಸಿಂಗ್ ಹಾಗೂ ತರಬೇತುದಾರರು ನಡೆಸಿದ ಲೈಂಗಿಕ ಕಿರುಕುಳದ ವಿರುದ್ಧ ಹಾಗೂ ಆತನ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಆ ಪ್ರತಿಭಟನೆಗೆ ದೇಶದ ಹಲವಾರು ಚಿಂತಕರು, ಹೋರಾಟಗಾರರು, ಸಂಘಟನೆಗಳು ಹಾಗೂ ಜನತೆ ಬೆಂಬಲಿಸಿದ್ದಾರೆ. ಆದರೆ ಸರ್ಕಾರ ಆತನನ್ನು ಬಂಧಿಸಲು ಮುಂದಾಗಿಲ್ಲ. ಆ ಹೋರಾಟಕ್ಕೆ ಬೆಂಬಲವಾಗಿ ಇಂದು ದೆಹಲಿಯಲ್ಲಿ ಹೋರಾಟಗಾರರು ಮಹಿಳಾ ಮಹಾಪಂಚಾಯತ್‍ನ್ನು ಕರೆದಿದ್ದಾರೆ. ಆದರೆ ಇಂದು, ಮೇ 28 ರಂದು ಮುಂಜಾನೆ ದೆಹಲಿ ಪೊಲೀಸರು ಆ ಪ್ರತಿಭಟನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ  ಎಐಎಂಎಸ್ಎಸ್ ಮಹಿಳಾ ಸಂಘಟನೆಯ ದೆಹಲಿ ರಾಜ್ಯ ಕಾರ್ಯದರ್ಶಿ ಕಾಮ್ರೇಡ್ ರಿತು ಕೌಶಿಕ್, ಎಸ್.ಯು.ಸಿ. ಐ.(ಸಿ) ಕಮ್ಯುನಿಸ್ಟ್ ಪಕ್ಷದ ಹರಿಯಾಣ ರಾಜ್ಯ ಸಮಿತಿಯ ಪ್ರಮುಖ ಸದಸ್ಯ ರಾಜೇಂದರ್ ಸಿಂಗ್ ಅವರನ್ನು ವಶಪಡಿಸಿಕೊಂಡಿದ್ದಾರೆ. ಎಐಕೆಕೆಎಂಎಸ್ ರೈತ ಸಂಘಟನೆಯ ಹರಿಯಾಣ ರಾಜ್ಯ ಕಾರ್ಯದರ್ಶಿ ಕಾಮ್ರೇಡ್ ಜೈಕರನ್ ಮಂಡೋತಿ ಅವರ ಮನೆಗೆ ಪೊಲೀಸರು ಘೇರಾವ್ ಹಾಕಿದ್ದಾರೆ. ಪೊಲೀಸರ ಈ ಎಲ್ಲಾ ದಮನಕಾರಿ ಕ್ರಮಗಳು ಇಂದು ಸಂಸತ್ತಿನ ಮುಂದೆ ನಡೆಯಲಿದ್ದ ಮಹಾಪಂಚಾಯತ್‍ನ್ನು ವಿಫಲಗೊಳಿಸುವುದೇ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಎಐಎಂಎಸ್ಎಸ್  ಜಿಲ್ಲಾ ಅಧ್ಯಕ್ಷರು ಕೆ.ಎಮ್. ಈಶ್ವರಿ ಮಾತನಾಡಿ, ಲೈಂಗಿಕ ಕಿರುಕುಳ ನೀಡಿರುವ ಆರೋಪಿಯನ್ನು ಬಂಧಿಸುವುದನ್ನು ಬಿಟ್ಟು, ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವವರನ್ನು ಬಂಧಿಸಿರುವ ಕ್ರಮ ಅತ್ಯಂತ ಖಂಡನೀಯ. ನ್ಯಾಯಕ್ಕಾಗಿ ನಡೆಯುವ ಹೋರಾಟಗಳನ್ನು ಈ ರೀತಿ ಅಪ್ರಜಾತಾಂತ್ರಿಕವಾಗಿ ಸದೆಬಡಿಯಲಾಗುತ್ತಿದೆ. ಆಳುವ ಕೇಂದ್ರ ಸರ್ಕಾರ ಅಂತರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ದೇಶದ ಕೀರ್ತಿ ಪತಾಕೆಯನ್ನು ಎತ್ತಿಹಿಡಿದಿರುವ ಮಹಿಳಾ ಕುಸ್ತಿಪಟುಗಳ ಪರವಾಗಿ ನಿಲ್ಲುವ ಬದಲು, 40ಕ್ಕೂ ಹೆಚ್ಚು ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವ ಡಬ್ಲ್ಯೂ.ಎಫ್.ಐ ನ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್‍ಸಿಂಗ್ ಪರವಾಗಿ ನಿಂತಿರುವುದು ನಿಜಕ್ಕೂ ಹೇಯ ಕೃತ್ಯವಾಗಿದೆ ಎಂದು ಆರೋಪಿಸಿದರು.
ಎಐಕೆಕೆಎಂಎಸ್ ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ಮಾತನಾಡಿ, ಎಲ್ಲರೂ ಕೇಂದ್ರ ಸರ್ಕಾರದ ಈ ಅಪ್ರಜಾತಾಂತ್ರಿಕ ನಡೆಯನ್ನು ಖಂಡಿಸಿ, ಅನಗತ್ಯವಾಗಿ ವಶಪಡಿಸಿಕೊಂಡಿರುವ ಸಂಘಟನೆಗಳ ಮುಖಂಡರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯ ಅದ್ಯಕ್ಷತೆಯನ್ನು ಎಐಡಿಎಸ್‍ಓ ಜಿಲ್ಲಾ ಉಪಾಧ್ಯಕ್ಷರು ಜೆ.ಸೌಮ್ಯ ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ಎ.ದೇವದಾಸ್, ಆರ.ಸೋಮಶೇಖರ್ ಗೌಡ, ಎ.ಶಾಂತಾ, ವಿದ್ಯಾ, ಗಿರಿಜಾ, ರೇಖಾ, ಕೆ.ಈರಣ್ಣ, ಶಾಂತಿ, ಉಮಾ, ಸಿದ್ದು, ಇನ್ನಿತರರು ಭಾಗವಹಿಸಿದ್ದರು.