ಕೇಂದ್ರದ ತರಾಟೆಗೆ ವಿಪಕ್ಷಗಳ ಸಜ್ಜು

ನವದೆಹಲಿ,ಜು.೧೬- ಸೋಮವಾರದಿಂದ ಆರಂಭವಾಗಲಿರುವ ಸಂಸತ್ತಿನ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಒಗ್ಗೂಡಿ ಹೋರಾಟ ಮಾಡಲು ನಿರ್ಧರಿಸಿವೆ.
ಮೋದಿ ಸರ್ಕಾರದ ವಿರುದ್ಧ ಒಗ್ಗೂಡಿ ಹೋರಾಟ ಮಾಡುವ ಕುರಿತು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಜೊತೆ ಮಾತುಕತೆ ನಡೆಸಿದ್ದಾರೆ.
ನಾಳೆ ನಡೆಯಲಿರುವ ವಿರೋಧ ಪಕ್ಷಗಳ ಸಭೆಗೂ ಮುನ್ನ ಚಂದ್ರಶೇಖರ್ ರಾವ್ ಅವರು ಸಂಸತ್ತಿನ ಮುಂಗಾರು ಅಧಿವೇಶನಲ್ಲಿ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಆಡಳಿತ ಪಕ್ಷದ ವಿರುದ್ಧ ಪ್ರತಿಪಕ್ಷಗಳ ದಾಳಿ ತೀವ್ರಗೊಳಿಸಲು ಮತ್ತು ಕಾರ್ಯತಂತ್ರವನ್ನು ಬಲಪಡಿಸಲು ಇತರ ರಾಜ್ಯಗಳಲ್ಲಿನ ತಮ್ಮ ಸಹವರ್ತಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ.
ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ವಿರೋಧ ಪಕ್ಷದ ನಾಯಕರು ಒಗ್ಗೂಡಿ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ, ಚಂದ್ರಶೇಖರ ರಾವ್ ಅವರು ದೇಶದಲ್ಲಿ ಪರ್ಯಾಯ ರಾಜಕೀಯ ಗುಂಪಾಗಿ ವಿಕಸನಗೊಳ್ಳುವ ಮೂಲಕ ಭಾರತೀಯ ಜನತಾ ಪಕ್ಷ ಮತ್ತು ಕಾಂಗ್ರೆಸೇತರ ಪಕ್ಷಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ.
ಮೂಲಗಳ ಪ್ರಕಾರ, ತೆಲಂಗಾಣ ಮುಖ್ಯಮಂತ್ರಿ “ದೇಶದಲ್ಲಿ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಕೇಂದ್ರ ಸರ್ಕಾರವನ್ನು ಬಹಿರಂಗಪಡಿಸಲು ಈಗ ದೊಡ್ಡ ಕಸರತ್ತು ನಡೆಸಿದ್ದಾರೆ.”
ಕೇಂದ್ರದ ನಿರಂತರ ಅಸಡ್ಡೆ ಮತ್ತು ಜನವಿರೋಧಿ ನೀತಿಗಳನ್ನು ಬಹಿರಂಗಪಡಿಸುವ ಪ್ರಯತ್ನದ ಭಾಗವಾಗಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ.
ಕೋವಿಡ್ -೧೯ ಸೋಂಕಿಗೆ ಒಳಗಾಗಿ ಆಸ್ಪತ್ರೆಯಲ್ಲಿದ್ದ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಅವರ ಆಪ್ತರೊಂದಿಗೆ ಕೆಸಿಆರ್ ಮಾತನಾಡಿದ್ದು ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್, ಉತ್ತರ ಪ್ರದೇಶದ ವಿರೋಧ ಪಕ್ಷದ ನಾಯಕ ಅಖಿಲೇಶ್ ಯಾದವ್ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಸೇರಿದಂತೆ ಇತರ ಪಕ್ಷದ ಮುಖ್ಯಸ್ಥರಲ್ಲಿ ಕೆಸಿಆರ್ ಅವರು ತಮ್ಮ ಕಾರ್ಯಯೋಜನೆಯನ್ನು ಚರ್ಚಿಸಿದ್ದಾರೆ.