ಕೇಂದ್ರದ ಜಲ್‍ಜೀವನ್ ಮಿಷನ್ ಅನುಷ್ಠಾನಕ್ಕೆ ಸಿದ್ಧತೆ ‘ಮನೆ ಮನೆಗೆ ಗಂಗೆ’ ಯೋಜನೆ ಗ್ರಾಮ ಸಭೆ

ಗಂಗಾವತಿ ನ 04 : ಕೇಂದ್ರ ಸರಕಾರ ಅನುಷ್ಟಾನಗೊಳಿಸುತ್ತಿರುವ ಗ್ರಾಮೀಣ ಪ್ರದೇಶದ ಪ್ರತಿಯೊಂದು ಮನೆಗೂ ನೀರು ಒದಗಿಸುವ ಜಲ್‍ಜೀವನ್ ಮಿಷನ್ ಅನುಷ್ಠಾನಕ್ಕೆ ತಾಲೂಕಿನಲ್ಲಿ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಕನಸಿನ ‘ಮನೆ ಮನೆಗೆ ಗಂಗೆ’ ಯೋಜನೆ ಮತ್ತು ಅದರ ಅನುಷ್ಟಾನ ಕುರಿತು ಢಣಾಪುರ ಗ್ರಾಪಂನಲ್ಲಿ ಗ್ರಾಮ ಸಭೆ ನಡೆಸಲಾಯಿತು.
ಜಿಪಂ ಕೊಪ್ಪಳ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕೊಪ್ಪಳ, ಮಹಾತ್ಮಾಗಾಂಧಿ ರೂರಲ್ ಡೆವಲಪ್‍ಮೆಂಟ್ ಆಂಡ್ ಯುಥ ವೆಲ್ಪರ್ ಸೆಂಟರ್ ಕೊಪ್ಪಳ ಇವರ ಸಹಯೋಗದಲ್ಲಿ ಇತ್ತೀಚಿಗೆ ಢಣಾಪುರ ಗ್ರಾಮ ಪಂಚಾಯತ್‍ನಲ್ಲಿ ವಿಶೇಷ ಗ್ರಾಮ ಸಭೆ ನಡೆಸಿ ಯೋಜನೆಯ ತಂಡದ ಮುಖ್ಯಸ್ಥ ವಜೀರ್‍ಸಾಬ್ ತಳಕಲ್ ಮಾತನಾಡಿದರು. 2019 ರಿಂದ 2024ರೊಳಗೆ ಗ್ರಾಮೀಣ ಪ್ರದೇಶದ ಪ್ರತಿಯೊಂದು ಗ್ರಾಮದ ಪ್ರತಿಯೊಂದು ಮನೆಗೆ ಶುದ್ಧ ಕುಡಿಯುವ ನೀರು ಒದಗಿಸುವುದು ಕೇಂದ್ರ ಸರಕಾರ ಮುಖ್ಯ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಶೇ.45 ಮತ್ತು ರಾಜ್ಯ ಸರಕಾರದ ಶೇ.45 ಮತ್ತು ಗ್ರಾಮೀಣ ಸಮುದಾಯದಿಂದ ಶೇ.10 ರಷ್ಟು ವಂತಿಕೆಯ ಮೂಲಕ ಈ ಯೋಜನೆ ಅನುಷ್ಠಾನಗೊಳಿಲಾಗುತ್ತಿದೆ. ಜಲ್‍ಜೀವನ್ ಮಿಷನ್ ಅಡಿ ಮನೆ ಮನೆಗೆ ಗಂಗೆ ಎಂಬ ವಿನೂತನ ಯೋಜನೆ ಇದಾಗಿದ್ದು, ಯಶಸ್ವಿ ಅನುಷ್ಟಾನದಲ್ಲಿ ಗ್ರಾಮದ ಜನರ ಸಹಕಾರ ಮುಖ್ಯವಾಗಿದೆ. ಈ ಯೋಜನೆ ಪ್ರತಿ ಗ್ರಾಮದಲ್ಲೂ ಯಶಸ್ವಿಯಾಗಲು ಮುಂದಾಗಬೇಕು ಎಂದರು. ಯೋಜನಾಧಿಕಾರಿ ಈರಣ್ಣ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯ ಬದುಕಿಗೆ ನೀರು ಅತ್ಯಂತ ಮುಖ್ಯವಾಗಿದೆ. ಶುದ್ಧ ನೀರು ಸೇವಿಸುವುರದಿಂದ ನಮಗೆ ಬರುವ ಹಲವು ರೋಗಗಳನ್ನು ನಿಯಂತ್ರಿಸಬಹುದು. ಗ್ರಾಮದಲ್ಲಿ ಅಶುದ್ಧ ನೀರಿನಿಂದಾಗಿ ಅನಾರೋಗ್ಯ ಸಮಸ್ಯೆ ಉಲ್ಭಣವಾಗುತ್ತದೆ. ಇದನ್ನು ಮನಗಂಡು ಈಗ ಇರುವ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಜಲ ಮೂಲಗಳ ಮೂಲಕ ಸರಕಾರ ಶುದ್ಧ ಕುಡಿಯುವ ನೀರು ಒದಗಿಸಲು ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ. ಜಿಲ್ಲೆಯಲ್ಲಿ ಈ ಯೋಜನೆ ಪ್ರಾರಂಭಿಸಲಾಗುತ್ತಿದ್ದು, ಜನರಲ್ಲಿ ಅರಿವು ಮೂಡಿಸಲು ಗ್ರಾಮ ಸಭೆ ಆಯೋಜಿಸಲಾಗಿದೆ ಎಂದರು. ಗ್ರಾಪಂ ಆಡಳಿತಾಧಿಕಾರಿ ತಿಪ್ಪೇಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ತಾಪಂ ಸದಸ್ಯ ತಿಪ್ಪಯ್ಯ ಮತ್ತಿತರು ಇದ್ದರು. ಎಸ್‍ಡಿಇ ಸಂಯೋಜಕ ಹನುಮಂತಪ್ಪ ನಿರ್ವಹಿಸಿದರು. ಲಕ್ಷ್ಮಣ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಶಫಿ, ನೀರು ಪೂರೈಕೆ ಅಭಿಯಂತರ ರಮೇಶ ಕಟಾಪುರ, ಮುಖಂಡ ಅಯ್ಯಪ್ಪ, ಕೃಷ್ಣ ಸೇರಿದಂತೆ ಗ್ರಾಮದ ಮುಖಂಡರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು, ಪಂಚಾಯತ್ ಸಿಬ್ಬಂದಿಗಳು ಇದ್ದರು.