ಕೇಂದ್ರದ ಜತೆ ಮಾತುಕತೆ ಮುಂದುವರಿಕೆ; ಟ್ವಿಟರ್ ಸ್ಪಷ್ಟನೆ


ನವದೆಹಲಿ, ಮೇ.೨೭-ಪೊಲೀಸರು ಬೆದರಿಕೆ ತಂತ್ರಗಳನ್ನು ಅನುಸರಿಸುತ್ತಿರುವ ಬಗ್ಗೆ ದೆಹಲಿ ಪೊಲೀಸರ ಹೆಸರನ್ನು ಪ್ರಸ್ತಾಪಿಸದೆ ಟ್ವಿಟರ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ ಎಂದು ಹೇಳಿದೆ.
ದೇಶದ ಜನತೆಗೆ ತನ್ನ ಸೇವೆಯನ್ನು ಮುಂದವರಿಸಲು ಟ್ವಿಟರ್ ಬದ್ಧವಾಗಿದೆ. ಈ ಸಂಬಂಧ ಕೇಂದ್ರ ಸರ್ಕಾರದ ಜತೆ ರಚನಾತ್ಮಕ ಮಾತುಕತೆಗಳನ್ನು ಮುಂದುವರೆಸಲಿದೆ. ಸಾರ್ವಜನಿಕರನ್ನು ರಕ್ಷಿಸುವುದು ಪ್ರತಿಯೊಬ್ಬ ಚುನಾಯಿತ ಪ್ರತಿನಿಧಿಗಳ, ನಾಗರಿಕ ಸಮಾಜ ಮತ್ತು ಕೈಗಾರಿಕೆಗಳ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ತಿಳಿಸಿದೆ.
ಈ ವರ್ಷದ ಜನವರಿ-ಫೆಬ್ರವರಿಯಲ್ಲಿ ಕೇಂದ್ರ ಹಾಗೂ ಟ್ವಿಟರ್ ನಡುವೆ ಸಂಘರ್ಷ ಏರ್ಪಟ್ಟ ಬೆನ್ನಲ್ಲೇ ಟ್ವಿಟರ್‌ನಿಂದ ಈ ಹೇಳಿಕೆ ಹೊರಬಿದ್ದಿದೆ.
ಕೇಂದ್ರ ಸರ್ಕಾರ ಸೂಚಿಸಿದ್ದ ಕೆಲವೊಂದು ಟ್ವಿಟರ್ ಖಾತೆಗಳನ್ನು ಡಿಲಿಟ್ ಮಾಡುವಂತೆ ಹೇಳಿತ್ತು. ಆದರೆ ಆದೇಶವನ್ನು ಗಾಳಿಗೆ ತೂರಿ ತನ್ನ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡಿತ್ತು.
ಫೆ, ೨೫ರಂದು ಕೇಂದ್ರ ಸರ್ಕಾರ ಸಾಮಾಜಿಕ ಜಾಲತಾಣಗಳಿಗೆ ನೂತನ ನೀತಿ ಜಾರಿಗೊಳಿಸಿದ ಬಳಿಕ ಇದೇ ಮೊದಲ ಬಾರಿಗೆ ಟ್ವಿಟರ್ ಅಧಿಕೃತ ಹೇಳಿಕೆ ನೀಡಿದೆ.
ಬಿಜೆಪಿ ವಕ್ತಾರರು ಮಾಡಿದ್ದ ಟ್ವೀಟ್‌ಗೆ ಟ್ವಿಟರ್ ಇಂಡಿಯಾ ಟ್ಯಾಗ್ ಮಾಡಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ದೆಹಲಿ ಪೊಲೀಸರು ಟ್ವಿಟರ್ ಕಚೇರಿಗೆ ತೆರಳಿ ನೋಟೀಸ್ ನೀಡಿದ್ದರು.
ಎರಡೂ ಅಂಶಗಳನ್ನು ಒಟ್ಟುಗೂಡಿಸಿ ಟ್ವಿಟರ್ ಹೇಳಿಕೆ ಬಿಡುಗಡೆ ಮಾಡಿದ್ದು, ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳ ಉಚಿತ ಸಂಭಾಷಣೆಯನ್ನು ತಡೆಯುವ ಅಂಶಗಳನ್ನು ಹೊಂದಿವೆ ಮತ್ತುಪ್ರಸ್ತುತ ದೇಶದಲ್ಲಿ ತನ್ನ ಉದ್ಯೋಗಿಗಳ ಸುರಕ್ಷತೆಗೆ ಒತ್ತು ನೀಡುವುದಾಗಿ ಹೇಳಿದೆ.