ಕೇಂದ್ರದ ಕ್ರಮ ಖಂಡಿಸಿ ಕಾಂಗ್ರೆಸ್‍ನಿಂದ ಬೃಹತ್ ಪ್ರತಿಭಟನೆ

ಹುಬ್ಬಳ್ಳಿ,ಜು.22: ಕೇಂದ್ರ ಸರ್ಕಾರವು ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್‍ಗಾಂಧಿ ಅವರಿಗೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ, ಧಾರವಾಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದಲ್ಲಿಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸ್ಟೇಷನ್ ರಸ್ತೆಯಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿದರು.
ಕಿತ್ತೂರ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಡಿ.ಕೆ. ಶಿವಕುಮಾರ್, ಸ್ವಾತಂತ್ರ್ಯದ ಕಿಚ್ಚು ಹಚ್ಚಲು ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಪ್ರಾರಂಭ ಮಾಡಲಾಗಿತ್ತು, ಐದು ಸಾವಿರ ಶೇರುದಾರರು ಇದ್ದರು. ಬಿಜೆಪಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದು ಕಾಂಗ್ರೆಸ್‍ನವರಿಗೆ ಭಯ ಹುಟ್ಟಿಸುವ ಪ್ರಯತ್ನ ಮಾಡುತ್ತಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಖಂಡಿಸಿದರು.
ಬಿಜೆಪಿ ಸರ್ಕಾರ ಸೋನಿಯಾ ಗಾಂಧಿಯವರ ವಿರುದ್ಧ ಸುಮ್ಮನೆ ಸುಳ್ಳು ಪ್ರಕರಣ ದಾಖಲಿಸಿದ್ದು ಅವರಿಗೆ ಧೈರ್ಯ ತುಂಬಬೇಕಿದೆ ಎಂದು ಅವರು ನುಡಿದರು.
ರಾಜ್ಯ ಸರ್ಕಾರ ದಿನದಿಂದ ದಿನಕ್ಕೆ ಬೆಲೆ ಏರಿಕೆ ಮೂಲಕ ಹಗಲು ದರೋಡೆ ನಡೆಸುತ್ತಿದೆ ಎಂದು ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದರು.
ಬಡವರಿಗೆ ಸಹಾಯ ಮಾಡಬೇಕು ಎಂಬ ಹಿತದೃಷ್ಟಿಯಿಂದ ಸೋನಿಯಾ ಗಾಂಧಿಯವರು ಪ್ರಧಾನಮಂತ್ರಿ ಸ್ಥಾನವನ್ನು ತೊರೆದಿದ್ದು ಇಡಿ ಪ್ರಕರಣದಲ್ಲಿ ಅವರು ಪ್ರಕರಣ ಮುಕ್ತವಾಗಿ ಹೊರ ಬರುತ್ತಾರೆ. ಎಂದು ಡಿ.ಕೆ.ಶಿವಕುಮಾರ ನುಡಿದರು.

ದೇಶದ ಜನರಿಗೆ ಹಕ್ಕು, ಕರ್ತವ್ಯ ಕೊಟ್ಟ ಪಕ್ಷ ನಮ್ಮದು. ಪ್ರತಿಭಟನೆ ಮಾಡುವುದು ನಮ್ಮ ಹಕ್ಕು. ಬೇಕಿದ್ದರೆ ನಮ್ಮನ್ನು ಜೈಲಿಗೆ ಹಾಕಿ ಎಂದು ಅವರು ನುಡಿದರು.

ಸೂರ್ಯ ಮುಳುಗಿದ ಹಾಗೆ ಬಿಜೆಪಿ ಪಕ್ಷ ಮುಳುಗುತ್ತದೆ. ಸರ್ಕಾರದ ದುರಾಡಳಿತದಿಂದ ಜನತೆ ಬೇಸತ್ತು ಹೋಗಿದ್ದು, ಸರ್ಕಾರದ ಕೊನೆಯ ದಿನಗಳು ಬರುತ್ತಾ ಇದೆ ಎಂದ ಅವರು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದೇ ಬರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕ ಪ್ರಸಾದ್ ಅಬ್ಬಯ್ಯ ಮಾತನಾಡಿ, ಬಿಜೆಪಿ ಸರ್ಕಾರ ರಾಜಕೀಯ ದ್ವೇಷ ಸಾಧಿಸುತ್ತಿದ್ದು, ಕಾಂಗ್ರೆಸ್ ಮೇಲೆ ಸುಖಾ ಸುಮ್ಮನೆ ದಾಳಿ ಮಾಡುತ್ತಿದೆ ಎಂದು ನುಡಿದರು.
ಮೆರವಣಿಗೆಯಲ್ಲಿ ಶಾಸಕರಾದ ಕುಸುಮಾವತಿ ಶಿವಳ್ಳಿ, ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ್ ಪಾಟೀಲ್, ಹು-ಧಾ ಅವಳಿನಗರ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ, ಬಸವರಾಜ ಮಲಕಾರಿ, ಬಸವರಾಜ ಗುರಿಕಾರ, ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ, ದೀಪಕ್ ಚಿಂಚೋರೆ, ಮಾಜಿ ಶಾಸಕ ಎನ್. ಹೆಚ್.ಕೋನರಡ್ಡಿ, ದೊರಾಜ ಮನ್ನೆಕುಂಟ್ಲಾ, ಸುಧಾ ಮನ್ನೆಕುಂಟ್ಲಾ, ಮೋಹನ್ ಹಿರೇಮನಿ, ಹಲ್ ಹಾಜ್ ಮೆಹಬೂಬ್ ಭಾಷಾ, ಗಿರೀಶ ಗದಿಗೆಪ್ಪಗೌಡರ, ಮಹಮೂದ ಕೊಳೂರು ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.