ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಲು ಆಗ್ರಹ

ದೇವದುರ್ಗ.ಜು.೨೭- ರಾಜ್ಯದ ವೀರಶೈವ ಲಿಂಗಾಯತ ಸಮುದಾಯವನ್ನ ಕೇಂದ್ರ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಪಾಟೀಲ್ ಒತ್ತಾಯಿಸಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವೀರಶೈವ ಹಾಗೂ ಲಿಂಗಾಯತ ಸಮುದಾಯದಲ್ಲಿ ಹಲವರು ಬಡವರಿದ್ದಾರೆ ಮತ್ತು ಈ ಸಮುದಾಯದಲ್ಲಿ ಬಹುತೇಕ ಪ್ರತಿಭಾವಂತರಿದ್ದರೂ ಕೇಂದ್ರದ ಸರ್ಕಾರಿ ಸೇವೆ, ಐಐಟಿ, ಐಐಎಂ ಹಾಗೂ ನೀಟ್ ಸೇರಿ ವಿಶ್ವವಿದ್ಯಾಲಯಗಳಲ್ಲಿ ಅವಕಾಶ ಸಿಗದಿರುವುದರಿಂದ ಹಿಂದುಳಿಯಂತಾಗಿದೆ ಎಂದು ಹೇಳಿದರು.
ವೀರಶೈವ ಲಿಂಗಾಯತ ಸಮುದಾಯದ ಈಗಾಗಲೇ ರಾಜ್ಯ ಹಾಗೂ ಕೇಂದ್ರದ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿ ಸೇರಿರುವ ತಿಗಳ, ಈಡಿಗ, ಒಕ್ಕಲಿಗ, ದೇವಾಂಗ ಮತ್ತು ಬಲಿಜ ಸಮುದಾಯಗಳಿಗಿಂತ ನಮ್ಮ ಸಮುದಾಯದ ಹಿಂದುಳಿದಿದೆ.
ಹೀಗಾಗಿ, ಕೂಡಲೇ ವೀರಶೈವ ಲಿಂಗಾಯತ ಸಮುದಾಯವನ್ನ ಕೇಂದ್ರದ ಹಿಂದುಳಿದ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು. ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲು ಆಗ್ರಹಿಸಿ ಆ.೧ರಂದು ರಾಯಚೂರಿನ ವೀರಶೈವ ಕಲ್ಯಾಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಹೊರಟು ಡಿಸಿ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಗುವುದು ಎಂದರು.
ಈ ಸಂದರ್ಭ ಮಹಾಸಭಾದ ಭಾನುಪ್ರಕಾಶ್ ಖಣೇದ್, ವೆಂಕಟರಾಯ ಗೌಡ ಬೆನಕನ್, ಪ್ರಕಾಶ್ ಖೇಣೆದ್, ದೇವೀಂದ್ರಪ್ಪ ಗೌಡ ಹಂಚಿನಾಳ, ಶರಣಗೌಡ ಕಾಮದಾಳ, ಸುರೇಶ್, ಶಾಂತಗೌಡ, ಬಸವರಾಜ್ ನಿಲಗಲ್ ಸೇರಿದಂತೆ ಇತರರಿದ್ದರು.