ಕೇಂದ್ರದ ಅಭಿವೃದ್ಧಿ ಕಾಮಗಾರಿಗೆ ಅಧಿಕಾರಿಗಳು ಒತ್ತು ನೀಡಲಿ

ಕೋಲಾರ, ಜು,೧-ಜಿಲ್ಲೆಯ ಅಧಿಕಾರಿಗಳು ರಾಜ್ಯ ಪುರಸ್ಕೃತ ಯೋಜನೆಗಳಿಗೆ ನೀಡುವಷ್ಟೇ ಮಹತ್ವವನ್ನು ಕೇಂದ್ರ ಪುರಸ್ಕೃತಗಳಿಗೂ ಯೋಜನೆಗಳಿಗೂ ಸಹ ನೀಡಬೇಕು ಎಂದು ಕೋಲಾರ ಲೋಕಸಭಾ ಕ್ಷೇತ್ರದ ಸಂಸದ ಎಸ್.ಮುನಿಸ್ವಾಮಿ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ(ದಿಶಾ) ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು.ಅಧಿಕಾರಿಗಳು ರಾಜಕಾರಣಿಗಳ ಒತ್ತಡಕ್ಕೆ ಮಣಿಯದೆ ಸಾರ್ವಜನಿಕರ ಹಿತ ಕಾಪಾಡಲು ಶ್ರಮಿಸಬೇಕು. ಪ್ರಸ್ತುತ ಸರ್ಕಾರ ಬದಲಾಗಿದೆ. ಅಧಿಕಾರಿ ವೃಂದವೂ ಬದಲಾಗುತ್ತಿದೆ. ಬದಲಾಗುತ್ತಿರುವ ಈ ಸನ್ನಿವೇಶದಲ್ಲಿ ಕೇಂದ್ರ ಸರ್ಕಾರದಿಂದ ಸಾರ್ವಜನಿಕರಿಗೆ ಸಿಗಬೇಕಾದ ಸೌಲಭ್ಯಗಳು ಕುಂಠಿತವಾಗಬಾರದು. ಪರಿಣಾಮಕಾರಿಯಾಗಿ ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವ ಗುರಿಯನ್ನು ಹೊಂದಬೇಕು ಮತ್ತು ಅದರಂತೆ ಪ್ರಾಮಾಣಿಕವಾಗಿ ಪ್ರಯತ್ನ ಪಡಬೇಕೆಂದರು.
ಜಂಟಿ ಕೃಷಿ ನಿರ್ದೇಶಕಿ ರೂಪಾದೇವಿ ಅವರು ಸಭೆಗೆ ಇಲಾಖೆಯ ಪ್ರಗತಿ ಮಾಹಿತಿಯನ್ನು ನೀಡಿ ಮುಂಗಾರು ಪ್ರಾರಂಭವಾಗುವ ಈ ಹಂತದಲ್ಲಿ ಸಾಕಷ್ಟು ಬಿತ್ತನೆ ಬೀಜದ ದಾಸ್ತಾನು ಲಭ್ಯವಿದ್ದು, ಈಗಾಗಲೇ ಬಿತ್ತನೆ ಪ್ರಾರಂಭ ಮಾಡಲು ಆಹಾರ ಧಾನ್ಯಗಳನ್ನು ರೈತರಿಗೆ ವಿತರಣೆ ಮಾಡಲಾಗುತ್ತಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಗೋವಿಂದ ರಾಜು ಅವರು ಕೃಷಿ, ತೋಟಗಾರಿಗೆ ಮತ್ತು ರೇಷ್ಮೆ ಇಲಾಖೆಗಳು ಈ ಜಿಲ್ಲೆಯ ಪ್ರಮುಖ ಮೂರು ಇಲಾಖೆಗಳು ಈ ಭಾಗದ ರೈತರಿಗೆ ಈ ಮೂರು ಇಲಾಖೆಗಳೇ ಜೀವಾಳ. ಮೂರು ಇಲಾಖೆಗಳು ಒಂದಕ್ಕೊಂದು ಸಮನ್ವಯ ಸಾಧಿಸಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಬೇಕು. ಪ್ರಸ್ತುತ ತರಕಾರಿ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಟೊಮ್ಯಾಟೋ ಬೆಳೆಗಾರರಿಗೆ ಅವರ ಕಷ್ಟದ ಫಲ ದೊರೆಯುತ್ತಿಲ್ಲ. ಬೆಳೆಗೆ ಹೊಸ ಮಾದರಿಯ ವೈರಸ್ ಸೋಕಿ ಇಳುವರಿ ಕಡಿಮೆಯಾಗಿದ್ದು, ಮಾರುಕಟ್ಟೆಯಲ್ಲಿ ಬೇಡಿಕೆಯಿದ್ದರೂ ಸಹ ಪೂರೈಸಲಾಗದ ಸ್ಥಿತಿ ಉಂಟಾಗಿದೆ. ಆದ್ದರಿಂದ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಜಂಟಿ ಸಮೀಕ್ಷೆ ನಡೆಸಿ ಶೀಘ್ರವಾಗಿ ಈ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬೇಕು ಎಂದು ಹೇಳಿದರು.
ನರೇಗಾ ಯೋಜನೆಯಡಿ ಪ್ರಸ್ತುತ ಸಾಲಿನಲ್ಲಿ ೪೦ ಲಕ್ಷ ಮಾನವ ದಿನಗಳ ಸೃಜನೆಗೆ ವಾರ್ಷಿಕ ಗುರಿಯನ್ನು ಹೊಂದಲಾಗಿದ್ದು, ಜೂನ್ ಅಂತ್ಯದ ವೇಳೆಗೆ ೮.೬೭ ಲಕ್ಷ ಮಾನವ ದಿನಗಳ ಸೃಜನೆಯನ್ನು ಮಾಡಲಾಗಿದೆ. ಈ ಮೂಲಕ ಶೇ.೨೧.೬೯ ರಷ್ಟು ಪ್ರಗತಿಯನ್ನು ಸಾಧಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.
ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ೧೭೨೫ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿ ೫೦೯ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಹಾಗೂ ೧೨೧೬ ಶೌಚಾಲಯಗಳ ನಿರ್ಮಾಣ ಪ್ರಗತಿಯಲ್ಲಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ಸಭೆಗೆ ತಿಳಿಸಿದರು.
ಇದಕ್ಕೆ ಸಂಸದರು ಜಿಲ್ಲೆಯಲ್ಲಿನ ಸ್ವಚ್ಛ ಭಾರತ್ ಯೋಜನೆಯಡಿ ನಿರ್ಮಿತವಾಗಿರುವ ಯಾವುದೇ ಶೌಚಾಲಯಗಳ ಮೇಲೆ ಯೋಜನೆಯ ವಿವರಗಳನ್ನು ನಮೂದಿಸಿರುವುದಿಲ್ಲ. ಈ ಕೂಡಲೇ ಕೇಂದ್ರ ಪುರಸ್ಕೃತ ಸ್ವಚ್ಛ ಭಾರತ್ ಯೋಜನೆ ಎಂದು ನಾಮಫಲಕ ಹಾಕಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಜಿಲ್ಲೆಗೆ ನೀಡಲಾಗಿರುವ ೧೫೪ ಸ್ವಚ್ಛತಾ ವಾಹಿನಿಗಳ ಸ್ಥಿತಿಗತಿಗಳನ್ನು ಕೂಡಲೇ ತಿಳಿಸುವಂತೆ ಹಾಗೂ ಎಲ್ಲಾ ವಾಹನಗಳನ್ನು ಪರಿಶೀಲನೆ ಗೊಳಪಡಿಸುವಂತೆ ತಿಳಿಸಿದರು.
ಜಲ್‌ಜೀವನ್ ಮಿಷನ್ ಯೋಜನೆಯಡಿ ಬ್ಯಾಚ್ ೩ ಮತ್ತು ೪ರ ಯೋಜನೆಗಳು ಪ್ರಗತಿಯಲ್ಲಿದ್ದು, ೧೨೯೩ ಹಳ್ಳಿಗಳಲ್ಲಿ ಮನೆ ಮನೆಗೆ ಕುಡಿಯುವ ನೀರು ಒದಗಿಸುವ ಕಾರ್ಯ ಪ್ರಗತಿಯಲ್ಲಿವೆ. ಕೆಲವು ಗ್ರಾಮಗಳಲ್ಲಿ ಓವರ್ ಹೆಡ್ ಟ್ಯಾಂಕ್‌ಗಳಿಂದ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದ್ದು, ಮತ್ತೆ ಕೆಲವು ಕಡೆ ಅಂತರ್ಜಲ ಆಧಾರಿತ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದರು. ಅದಕ್ಕೆ ವಿಧಾನ ಪರಿಷತ್ ಸದಸ್ಯರು ಓವರ್ ಹೆಡ್ ಟ್ಯಾಂಕ್‌ಗಳ ಬಾಳಿಕೆ ಪ್ರಮಾಣ ಕಡಿಮೆಯಿದ್ದು, ಪ್ರಸ್ತುತ ಸ್ಟೋರೇಜ್ ಪಂಪ್ ಮಾದರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿ ಎಂದರು. ಪೈಪ್‌ಲೈನ್ ಹಾಕುವಾಗ ರಸ್ತೆ ಕಟಿಂಗ್ ಮಿಷನ್‌ಗಳನ್ನು ಬಳಸಿ ರಸ್ತೆ ಅಗೆಯುವುದನ್ನು ತಪ್ಪಿಸಿ, ಒಂದು ವೇಳೆ ಈಗಾಗಲೇ ರಸ್ತೆ ಅಗೆದಿದ್ದಲ್ಲಿ ಅದನ್ನು ಸೂಕ್ತ ರೀತಿಯಲ್ಲಿ ಸರಿಪಡಿಸಿ ಎಂದು ಸಂಸದರು ಅಧಿಕಾರಿಗಳಿಗೆ ತಿಳಿಸಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಕಲ್ಲು ಗಣಿಗಾರಿಕೆ ಗ್ರಾಮಗಳಲ್ಲಿ ಕಳೆದ ೪೫ ದಿನಗಳಿಂದ ಗಣಿಗಾರಿಕೆ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಯಂತ್ರಾಧಾರಿತ ಗಣಿಗಾರಿಕೆಗೆ ಸರ್ಕಾರವು ಅನುಮತಿ ನಿರಾಕರಿಸಿದೆ ಎಂದು ತಿಳಿಸಿದರು. ಅದಕ್ಕೆ ಸಂಸದರು ಮಾನವಾಧಾರಿತ ಗಣಿಗಾರಿಕೆಗೆ ಒತ್ತು ನೀಡುವಂತೆ ತಿಳಿಸಿದರು. ಈ ಪ್ರಾಂತ್ಯದಲ್ಲಿ ಎಲ್ಲಾ ಜನಾಂಗದವರು ಕಲ್ಲು ಗಣಿಗಾರಿಕೆ ಮಾಡುವವರಿದ್ದಾರೆ. ಅವರಿಗೆ ಜೀವನೋಪಾಯಕ್ಕೆ ತೊಂದರೆಯಾಗದಂತೆ ಗಣಿಗಾರಿಕೆಗೆ ಸರ್ಕಾರವು ಅವಕಾಶ ಮಾಡಿಕೊಟ್ಟಿದೆ ಎಂದು ತಿಳಿಸಿದರು.
ಸಮಗ್ರ ಶಿಕ್ಷಣ ಯೋಜನೆಯ ಅಧಿಕಾರಿಗಳು ಖಾಸಗಿ ಶಾಲೆಗಳಲ್ಲಿ ಡೊನೇಷನ್ ತೆಗೆದುಕೊಳ್ಳುವ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಮತ್ತು ಇದರ ವಿರುದ್ಧ ಕ್ರಮಕೈಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಸಂಸದರು ಸೂಚಿಸಿದರು.
ಆಹಾರ ಇಲಾಖೆಯಿಂದ ಜಿಲ್ಲೆಯಲ್ಲಿ ೮೧೪೯೫ ಉಜ್ವಲ ಅಡುಗೆ ಅನಿಲ ಸಂಪರ್ಕಗಳನ್ನು ನೀಡಲಾಗಿದೆ. ೨೯೯೭೭ ಅಂತ್ಯೋದಯ ಅನ್ನ ಪಡಿತರ ಚೀಟಿಗಳನ್ನು, ೩,೧೧,೨೬೦ ಆದ್ಯತಾ ಪಡಿತರ ಚೀಟಿಗಳನ್ನು ಒಟ್ಟಾರೆ ಜಿಲ್ಲೆಯಲ್ಲಿ ೩,೪೧,೨೩೭ ಪಡಿತರ ಚೀಟಿಗಳನ್ನು ವಿತರಿಸಲಾಗಿದೆ. ಕೇಂದ್ರ ಸರ್ಕಾರದ ವತಿಯಿಂದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ೧೨,೦೫,೯೩೭ ಸದಸ್ಯರಿಗೆ ಪ್ರತಿ ಮಾಹೆ ೫ ಕೆ.ಜಿ.ಯಂತೆ ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು. ಅದಕ್ಕೆ ಸಂಸದರು ಕೇಂದ್ರ ಸರ್ಕಾರವು ನೀಡುತ್ತಿರುವ ೫ ಕಿಲೋ ಹಾಗೂ ಪ್ರಸ್ತುತ ರಾಜ್ಯ ಸರ್ಕಾರವು ಘೋಷಿಸಿರುವ ೧೦ ಕಿಲೋ ಅಕ್ಕಿಯನ್ನು ಒಟ್ಟಾರೆ ೧೫ ಕಿಲೋ ಅಕ್ಕಿಯನ್ನು ಅಂತ್ಯೋದಯ ಪಡಿತರ ಚೀಟಿದಾರರಿಗೆ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ನಗರಾಭಿವೃದ್ಧಿ ಕೋಶದಿಂದ ೭೮.೬೦ ಕೋಟಿಗಳ ವೆಚ್ಚದ ಕಾಮಗಾರಿಗಳನ್ನು ಈಗಾಗಲೇ ಪೂರೈಸಿರುವುದಾಗಿ ತಿಳಿಸಿದರು. ಶೇಕಡ ೫೯ ರಷ್ಟು ಗುರಿ ಸಾಧನೆ ಮಾಡಿರುವುದಾಗಿ ಸಭೆಗೆ ತಿಳಿಸಿದರು. ಜಿಲ್ಲಾದ್ಯಂತ ೩೧,೦೦೦ ವಿದ್ಯುತ್ ದೀಪಗಳ ಅಳವಡಿಕೆ ಹಾಗೂ ಬದಲಾವಣೆ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು. ಅದಕ್ಕೆ ಸಂಸದರು ಸರ್ಕಾರದ ಯೋಜನೆಗಳನ್ನು ಲೋಕಾರ್ಪಣೆ ಮಾಡುವ ಮುನ್ನಾ ಶಿಷ್ಠಾಚಾರ ಪಾಲಿಸಿ ಜನಪ್ರತಿನಿಧಿಗಳ ಗಮನಕ್ಕೆ ತರಬೇಕು. ಕೇಂದ್ರ ಪುರಸ್ಕೃತ ಯೋಜನೆಗಳ ಸೌಲಭ್ಯಗಳನ್ನು ಸಾರ್ವಜನಿಕವಾಗಿ ಅಳವಡಿಸುವಾಗ ಕಡ್ಡಾಯವಾಗಿ ಕೇಂದ್ರದ ನಾಯಕರ ಭಾವಚಿತ್ರಗಳು ಹಾಗೂ ಯೋಜನೆಯ ವಿವರಗಳನ್ನು ಸೌಲಭ್ಯಗಳ ಮೇಲೆ ಬರೆಯಿಸಬೇಕು. ಸಾರ್ವಜನಿಕರಿಗೆ ಸೌಲಭ್ಯವು ಯಾವ ಯೋಜನೆಯ ಮೂಲಕ ತಲಪಿದೆ ಎನ್ನುವ ಮಾಹಿತಿಯನ್ನು ಅಳವಡಿಸಬೇಕು ಎಂದರು.
ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ಮುದ್ರಾ ಯೋಜನೆಯ ಫಲಾನುಭವಿಗಳಿಗೆ ನೀಡಲಾಗುತ್ತಿರುವ ಸಾಲ ಸೌಲಭ್ಯವನ್ನು ಅರ್ಹ ಫಲಾನುಭವಿಗಳಿಗೆ ನೀಡಲು ಕ್ರಮವಹಿಸುವಂತೆ ತಿಳಿಸಿದರು. ಯಾವುದೇ ಕಾರಣಕ್ಕೂ ಕೇಂದ್ರ ಯೋಜನೆಗಳು ಅನರ್ಹರ ಪಾಲಾಗುವುದನ್ನು ಸಹಿಸುವುದಿಲ್ಲ ಎಂದರು. ಲೀಡ್ ಬ್ಯಾಂಕ್‌ನ ಅಧಿಕಾರಿಗಳಿಗೆ ಸಾರ್ವಜನಿಕ ಬಳಕೆ ಸ್ಥಳಗಳಾದ ಆಸ್ಪತ್ರೆ ಆವರಣ ಮತ್ತು ಜನ ಸಂದಣಿ ಇರುವ ಪ್ರದೇಶಗಳಲ್ಲಿ ಜನರಿಗೆ ಅನುಕೂಲವಾಗುವಂತೆ ಎ.ಟಿ.ಎಂ. ಗಳ ಸ್ಥಾಪನೆ ಮಾಡಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿ ಅಕ್ರಂ ಪಾಷ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಭಾಸ್ಕರ್, ದಿಶಾ ಸಮಿತಿ ಸದಸ್ಯರಾದ ಅಪ್ಪಿ ನಾರಾಯಣಸ್ವಾಮಿ, ಸಾಮಾ ಅನಿಲ್ ಬಾಬು, ಸೂರ್ಯನಾರಾಯಣ ರಾವ್, ಎಂ.ವಿ. ವೇಣುಗೋಪಾಲ್, ದಾಕ್ಷಾಯಿಣಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.