ಕೇಂದ್ರದಿಂದ ರೈತ ಸ್ನೇಹಿ ನಿರ್ಧಾರ: ಸ್ವಾಗತ

ದಾವಣಗೆರೆ.ನ.೫; ನೈಟ್ರೋಜನ್, ಫಾಸ್ಪರಸ್, ಪೊಟಾಷ್ ರಸಗೊಬ್ಬರದ ಮೇಲೆ ನೀಡುತ್ತಿರುವ ಸಹಾಯಧನದ ಪ್ರಮಾಣವನ್ನು ಮತ್ತು ಕಬ್ಬಿನಿಂದ ತಯಾರಾಗುವ ಎಥೆನಾಲ್ ದರವನ್ನು ಕೇಂದ್ರದ ಬಿಜೆಪಿ ಸರ್ಕಾರ ಹೆಚ್ಚಳ ಮಾಡಿದೆ. ಇದು ರೈತ ಸ್ನೇಹಿ ನಿರ್ಧಾರವಾಗಿದೆ ಎಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಹಾಗೂ ಮಾಜಿ ಎಪಿಎಂಸಿ ಅಧ್ಯಕ್ಷ ಕೊಳೇನಹಳ್ಳಿ ಬಿ ಎಂ ಸತೀಶ್ ಪತ್ರಿಕಾ ಹೇಳಿಕೆಯಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.ರಸಗೊಬ್ಬರ ಸಹಾಯಧನ ಹೆಚ್ಚಳದಿಂದ ಹಿಂಗಾರು ಬೆಳೆಗಳಿಗಾಗಿ ಕ್ವಿಂಟಾಲ್ ಒಂದರ ಯುರಿಯಾ ರೂ.98.02, ಪೊಟಾಷ್ 23.65 ಮತ್ತು ಫಾಸ್ಪರಸ್ 66.93 ರಷ್ಟು ದರ ಕಡಿಮೆಯಾಗಿದೆ. ಕಬ್ಬಿನಿಂದ ತಯಾರಾಗುವ ಒಂದು ಲೀಟರ್ ಎಥೆನಾಲ್ ದರವನ್ನು 63.45 ರಿಂದ 65.61 ರೂಗಳಷ್ಟು ಹೆಚ್ಚಿಸಿದೆ.ಕೇಂದ್ರ ಸರ್ಕಾರ ನಮ್ಮ ದೇಶದಲ್ಲಿ ಪರ್ಯಾಯ ಇಂಧನ ಬಳಸುವ ಚಿಂತನೆ ನಡೆಸಿ, ಎಥೆನಾಲ್ ಉತ್ಪಾದನೆ ಹೆಚ್ಚಿಸೋಕ್ಕೆ ತೀರ್ಮಾನಿಸಿದೆ. ಮುಂದಿನ 6 ತಿಂಗಳಲ್ಲಿ ಈಗ ಪುಣೆಯಲ್ಲಿರುವ 3 ಎಥೆನಾಲ್ ಬಂಕ್ ಗಳ ಜೊತೆ ದೇಶಾದ್ಯಂತ ಬಂಕ್ ತೆರೆಯಲು ನಿರ್ಧರಿಸಿದೆ.ಪೆಟ್ರೋಲ್ ಮತ್ತು ಎಥೆನಾಲ್ 2ರಲ್ಲೂ ಚಲಿಸುವ ಎಂಜಿನ್ ಗಳ ಅನ್ವೇಷಣೆ ನಡೆಸಲು ಆಟೋಮೊಬೈಲ್ ಕಂಪನಿಗಳಿಗೆ ಸೂಚಿಸಲಾಗಿದೆ.ಬ್ರೆಜಿಲ್ ಎಥೆನಾಲ್ ನ್ನು ಇಂಧನವಾಗಿ ಬಳಸುತ್ತಿರುವ ವಿಶ್ವದ ನಂಬರ್ ಒನ್ ದೇಶವಾಗಿದೆ. ಇದರಂತೆ ನಮ್ಮ ದೇಶದಲ್ಲಿ ಶೇಕಡ 10 ರಷ್ಟು ಎಥೆನಾಲ್ ಬಳಸಿದರೆ 27 ಲಕ್ಷ ಟನ್ ಕಾರ್ಬನ್ ಹೊಗೆಯನ್ನು ನಿಯಂತ್ರಿಸಬಹುದು. ಹೆಚ್ಚುತ್ತಿರುವ ಇಂಧನ ಬೆಲೆ ಮತ್ತು ಭವಿಷ್ಯದಲ್ಲಿ ಇಂಧನ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ಈ ಚಿಂತನೆ ನಡೆಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಕಬ್ಬು, ಮೆಕ್ಕೆಜೋಳ, ಹತ್ತಿಕಾಂಡ, ಗೋಧಿಹುಲ್ಲು ಮತ್ತು ಬಿದಿರಿನಿಂದ ಎಥೆನಾಲ್ ತಯಾರಿಸಬಹುದು. ಆದ್ದರಿಂದ ರೈತರಿಗೆ ಮತ್ತು ಇತರೆ ಬಳಕೆದಾರರಿಗೆ ಎಥೆನಾಲ್ ನ ಪೂರ್ಣ ಪ್ರಯೋಜನ ದೊರೆಯುವಂತಾಗಲು ಕೇಂದ್ರದ ಬಿಜೆಪಿ ಸರ್ಕಾರ ಕ್ರಮ ವಹಿಸಿದೆ ಎಂದು  ಹೇಳಿದ್ದಾರೆ.