ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗಿಲ್ಲ

ಸ್ತಬ್ಧ ಚಿತ್ರ ವಿವಾದ

ಬೆಂಗಳೂರು, ಜ. ೧೦- ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ರಾಜ್ಯದ ಸ್ತಬ್ಧ ಚಿತ್ರಕ್ಕೆ ಅವಕಾಶ ಮಾಡಿಕೊಡುವ ವಿಚಾರದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಯಾವುದೇ ಅನ್ಯಾಯವಾಗಿಲ್ಲ. ನಿರಂತರವಾಗಿ ೧೪ ವರ್ಷಗಳಿಂದ ರಾಜ್ಯಕ್ಕೆ ಅವಕಾಶ ಸಿಕ್ಕಿದೆ. ಬೇರೆ ರಾಜ್ಯಗಳಿಗೆ ಅವಕಾಶ ಕೊಡಬೇಕು ಎಂಬ ಸದುದ್ಧೇಶದಿಂದ ರಾಜ್ಯಕ್ಕೆ ಅವಕಾಶ ನೀಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಲೋಕಸಭಾ ಚುನಾವಣಾ ಸಿದ್ಧತೆ ಬಗ್ಗೆ ಬೆಂಗಳೂರಿನ ಹೊರವಲಯದ ಖಾಸಗಿ ಹೋಟೆಲ್‌ನಲ್ಲಿ ನಡೆದಿರುವ ಸಭೆಯ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಅವಕಾಶ ಸಿಗದ ರಾಜ್ಯಗಳಿಗೆ ಅವಕಾಶ ಮಾಡಿಕೊಡುವ ಸದುದ್ದೇಶದಿಂದ ಈ ಬಾರಿ ರಾಜ್ಯಕ್ಕೆ ಅವಕಾಶ ಸಿಕ್ಕಿಲ್ಲ. ಇದರಲ್ಲಿ ದುರುದ್ದೇಶವಿದೆ ಎಂಬ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಹೇಳಿಕೆ ಸರಿಯಲ್ಲ ಎಂದರು.
ಕಳೆದ ವರ್ಷ ಸಹ ಕರ್ನಾಟಕಕ್ಕೆ ಅವಕಾಶ ಸಿಕ್ಕಿರಲಿಲ್ಲ. ಆಗ ನಮ್ಮ ಪಕ್ಷದ ಹಿರಿಯರು ಪ್ರಯತ್ನ ಮಾಡಿ ಅವಕಾಶ ಲಭಿಸಿತ್ತು. ಈ ಬಾರಿ ಕರ್ನಾಟಕ ಸೇರಿದಂತೆ ನಾಲ್ಕೈದು ರಾಜ್ಯಗಳಿಗೆ ಅವಕಾಶ ಸಿಕ್ಕಿಲ್ಲ. ಎಕ್ಸಿಬಿಷನ್‌ನಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ. ಇದನ್ನು ಗಣನೆಗೆ ತೆಗೆದುಕೊಳ್ಳದೆ ರಾಜ್ಯದ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಸರ್ಕಾರ ಏನೋ ಮಹಾ ತಪ್ಪು ಮಾಡಿದೆ ಎಂದು ಬಿಂಬಿಸಿರುವುದು ಮುಖ್ಯಮಂತ್ರಿಗಳ ಘನತೆಗೆ ತಕ್ಕದಲ್ಲ ಎಂದರು.
ಪ್ರತಿ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜ್ಯದ ವಿರುದ್ಧ ಇದೆ ಎಂದು ಮುಖ್ಯಮಂತ್ರಿಗಳು ಬಿಂಬಿಸುತ್ತಿದ್ದಾರೆ ಇದು ಅವರಿಗೆ ಶೋಭೆ ತರುವುದಿಲ್ಲ. ಮೊಸಳೆ ಕಣ್ಣೀರುಡುವುದನ್ನು ಬಿಟ್ಟು ಎಲ್ಲ ವಿಚಾರಗಳಲ್ಲಿ ರಾಜ್ಯದ ಪರವಾಗಿ ಮುಖ್ಯಮಂತ್ರಿಗಳು ನಿಲುವು ತೆಗೆದುಕೊಳ್ಳಲಿ ಎಂದು ಅವರು ಒತ್ತಾಯಿಸಿದರು.
ನಾಡಿನ ಜನಲ ನೆಲ ವಿಚಾರದಲ್ಲಿ ಕಾಂಗ್ರೆಸ್ ಮುಖಂಡರಿಗೆ ನಿಜವಾದ ಕಾಳಜಿ ಇದ್ದರೆ ಬೆಳಗಾವಿಯನ್ನು ಸ್ವಾತಂತ್ರ್ಯಪೂರ್ವದಲ್ಲಿ ಮಹಾರಾಷ್ಟ್ರಕ್ಕೆ ಸೇರಿತ್ತು ಎಂಬ ಲಕ್ಷ್ಮಿಹೆಬ್ಬಾಳ್ಕರ್ ಅವರ ಹೇಳಿಕೆ ಬಗ್ಗೆ ಮುಖ್ಯಮಂತ್ರಿಗಳು ತಮ್ಮ ಅಭಿಪ್ರಾಯ ತಿಳಿಸಲಿ ಎಂದು ಆಗ್ರಹಿಸಿದರು.
ಕಳೆದ ಆರು ತಿಂಗಳಿಂದ ಕಾವೇರಿ ನದಿ ನೀರು ತಮಿಳುನಾಡಿಗೆ ಬಿಡುತ್ತಿದ್ದಾರೆ. ಈ ಬಗ್ಗೆಯೂ ಒಂದು ದಿಟ್ಟ ನಿರ್ಧಾರ ಕೈಗೊಂಡಿಲ್ಲ. ಹಾಗೆಯೇ ಕನ್ನಡಪರ ಹೋರಾಟಗಾರ ನಾರಾಯಣಗೌಡ ಅವರನ್ನು ಒಂದು ಪ್ರಕರಣದಲ್ಲಿ ಬಿಡುಗಡೆ ಮಾಡಿ, ಮತ್ತೊಂದು ಪ್ರಕರಣದಲ್ಲಿ ಬಂಧಿಸಿದ್ದಾರೆ ಎಂದರು.
ಬಿಜೆಪಿ ಪಕ್ಷವನ್ನು ಮುಂದಿನ ಲೋಕಸಭಾ ಚುನಾವಣೆಗೆ ತಯಾರು ಮಾಡುವ ನಿಟ್ಟಿನಲ್ಲಿ ಕ್ಷೇತ್ರವಾರು ಸಭೆ ಇಂದಿನಿಂದ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.