ಮಣಿಪುರ ಹಿಂಸಾಚಾರಕ್ಕೆ ಕೇಂದ್ರ ಹೊಣೆ

ಮಣಿಪುರ ಹಿಂಸಾಚಾರ ಪ್ರತಿಧ್ವನಿ
ನವದೆಹಲಿ,ಆ.೯- ಕೇಂದ್ರ ಸರ್ಕಾರ ಮಣಿಪುರವನ್ನು ಕೊಲೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ, ಕೋಮು ದಳ್ಳುರಿಗೆ ಸಿಲುಕಿ ನೂರಾರು ಅಮಾಯಕರ ಸಾವು ಸಂಭವಿಸಿದ್ದರೂ ಇದುವರೆಗೂ ಗುಡ್ಡಗಾಡು ರಾಜ್ಯಕ್ಕೆ ನರೇಂದ್ರಮೋದಿ ಅವರು ಭೇಟಿ ನೀಡಿಲ್ಲ ಎಂದು ಕಿಡಿಕಾರಿದ್ದಾರೆ. ಏಕೆಂದರೆ ಮಣಿಪುರವನ್ನು ಭಾರತದ ಭಾಗವೆಂದು ಮೋದಿ ಪರಿಗಣಿಸಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಇಂಡಿಯಾ ಮೈತ್ರಿಕೂಟ ಹಾಗೂ ಎನ್‌ಡಿಎ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆದು ಸದನದಲ್ಲಿ ಕೋಲಾಹಲ ಉಂಟಾಯಿತು. ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.
ಕಳೆದ ಮೂರು ತಿಂಗಳಿನಿಂದಲೂ ಮಣಿಪುರದಲ್ಲಿ ಕುಕಿ ಮತ್ತು ಮೈತೇಹಿ ಸಮುದಾಯದ ನಡುವೆ ವ್ಯಾಪಕ ಹಿಂಸಾಚಾರದಲ್ಲಿ ೧೭೦ಕ್ಕೂಹೆಚ್ಚು ಜನರು ಸಾವನ್ನಪ್ಪಿದ್ದು, ಸಾವಿರಾರು ಜನರು ಗಾಯಗೊಂಡಿದ್ದಾರೆ. ಆದರೆ, ಪ್ರಧಾನಿ ಅವರು ಇದುವರೆಗೂ ಯವುದೇ ಹೇಳಿಕೆ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ನಿನ್ನೆಯಿಂದ ಚರ್ಚೆ ಆರಂಭವಾಗಿದ್ದು, ೨ನೇ ದಿನವಾದ ಇಂದೂ ಮುಂದುವರೆದಿದೆ.ಮೋದಿ ಉಪನಾಮ ಪ್ರಕರಣದಲ್ಲಿ ೧೩೬ ದಿನಗಳ ಕಾಲ ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡು ಸುಪ್ರೀಂಕೋರ್ಟ್ ಶಿಕ್ಷೆಗೆ ತಡೆ ನೀಡಿದ್ದ ಹಿನ್ನೆಲೆಯಲ್ಲಿ ಲೋಕಸಭಾ ಸಚಿವಾಲಯ ಅನರ್ಹತೆ ರದ್ದುಗೊಳಿಸಿ ಮತ್ತೆ ಲೋಕಸಭಾ ಸದಸ್ಯತ್ವ ಮರುಸ್ಥಾಪಿಸಿದ ನಂತರ ಇದೇ ಮೊದಲ ಬಾರಿಗೆ ರಾಹುಲ್ ಅವರು ಲೋಕಸಭೆಯಲ್ಲಿ ಇಂಡಿಯಾ ಮೈತ್ರಿಕೂಟ ಮಂಡಿಸಿರುವ ಅವಿಶ್ವಾಸ ಗೊತ್ತುವಳಿಯ ಮೇಲೆ ಮಾತನಾಡಿ ಪ್ರಧಾನಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ತಮ್ಮ ಅನರ್ಹತೆ ರದ್ದುಪಡಿಸಿ ಮತ್ತೆ ಸಂಸತ್ ಸದಸ್ಯತ್ವ ನೀಡಿದ್ದಕ್ಕಾಗಿ ಲೋಕಸಭಾ ಸ್ಪೀಕರ್ ಓಂಬಿರ್ಲಾ ಅವರಿಗೆ ರಾಹುಲ್‌ಗಾಂಧಿ ಧನ್ಯವಾದ ಅರ್ಪಿಸಿದರು. ಮಣಿಪುರದಲ್ಲಿ ಭುಗಿಲೆದ್ದಿರುವ ಹಿಂಸಾಚಾರವನ್ನು ಭಾರತೀಯ ಸೇನೆ ಒಂದು ದಿನದಲ್ಲಿ ಶಾಂತಿ ಸ್ಥಾಪನೆ ಬಯಸುತ್ತಿದೆ. ಆದರೆ, ಅದು ಸಾಧ್ಯವಿಲ್ಲ ಎಂದು ಹೇಳಿದರು.
ಮಣಿಪುರವನ್ನು ಕೇಂದ್ರ ಸರ್ಕಾರ ಎರಡು ಭಾಗಗಳನ್ನಾಗಿ ಮಾಡುತ್ತಿದೆ. ಕೆಲವು ದಿನಗಳ ಹಿಂದೆ ತಾವು ಮಣಿಪುರಕ್ಕೆ ಭೇಟಿ ನೀಡಿ ಅಲ್ಲಿನ ವಸ್ತುಸ್ಥಿತಿಯನ್ನು ಪರಿಶೀಲಿಸಿದ್ದೇ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರ ಸಂಭವಿಸಿದ್ದರೂ ಪ್ರಧಾನಿ ಇಲ್ಲಿಯವರೆಗೂ ಭೇಟಿ ಕೊಟ್ಟಿಲ್ಲ. ಪ್ರಧಾನಿ ಅವರು ಕೇವಲ ಮಣಿಪುರ ಮಾತ್ರವಲ್ಲ ಭಾರತವನ್ನೇ ಕೊಂದಿದ್ದಾರೆ.ಅವರ ರಾಜಕೀಯವು ಮಣಿಪುರವನ್ನು ಕೊಂದಿಲ್ಲ. ಆದರೆ ಅದು ಮಣಿಪುರದಲ್ಲಿ ಭಾರತವನ್ನು ಕೊಂದಿದೆ. ನಾನು ಮಣಿಪುರ ಪದ ಬಳಸಿದ್ದೇನೆ, ಅದು ಈಗ ಮಣಿಪುರವಾಗಿ ಉಳಿದಿಲ್ಲ ಎಂಬುದು ಸತ್ಯ ಎಂದು ಹರಿಹಾಯ್ದರು.ನೀವು ರಾಜಸ್ತಾನಕ್ಕೆ ಯಾವಾಗ ಹೋಗುತೀರಿ ಎಂದು ಬಿಜೆಪಿ ಸಂಸದರು ಕೇಳಿದಾಗ ಇಂದು ಹೋಗುತ್ತಿದ್ದೇನೆ ಎಂದು ಹೇಳಿದರು. ಭಾರತ ಒಂದು ಧ್ವನಿ, ಭಾರತ ನಮ್ಮ ಜನರ ಧ್ವನಿ, ಹೃದಯದ ಧ್ವನಿ, ಆ ಧ್ವನಿಯನ್ನು ಮಣಿಪುರದಲ್ಲಿ ನೀವು ಹತ್ಯೆ ಮಾಡಿದ್ದೀರಿ. ಇದರ ಅರ್ಥ ಮಣಿಪುರದಲ್ಲಿ ಭಾರತ ಮಾತೆಯ ಹತ್ಯೆ ಮಾಡಿದ್ದೀರಿ, ಈ ಮೂಲಕ ನೀವು ದೇಶ ಪ್ರೇಮಿಗಳಲ್ಲ, ದೇಶ ದ್ರೋಹಿಗಳು ಎಂದು ರಾಹುಲ್ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ರಾಹುಲ್ ಮಾಡಿದ್ದ ಆರೋಪಗಳಿಗೆ ತಿರುಗೇಟು ನೀಡಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಮಣಿಪುರವನ್ನು ಇಬ್ಭಾಗ ಮಾಡಲಾಗಿದೆ ಎಂಬ ಆರೋಪಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು. ಈ ವೇಳೆ ಸಂಸತ್‌ನಲ್ಲಿ ಕಾವೇರಿದ ಚರ್ಚೆಗೆ ಕಾರಣವಾಯಿತು. ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪ ಮೊಳಗಿದವು.
ಗಾಂಧಿ ಕುಟುಂಬ ಕಾಶ್ಮೀರವನ್ನು ಹೇಗೆ ಇಬ್ಭಾಗ ಮಾಡಿತು ಎಂಬ ಬಗ್ಗೆ ರಾಹುಲ್ ಪ್ರತಿಕ್ರಿಯೆ ನೀಡಬೇಕು ಎಂದು ಸವಾಲು ಹಾಕಿದರು. ರಾಹುಲ್ ಅವರೇ ನೀವು ಭಾರತದಲ್ಲಿಲ್ಲ. ದೇಶದಲ್ಲಿ ಭ್ರಷ್ಟಾಚಾರವನ್ನು ಸಮರ್ಥಿಸಿಕೊಳ್ಳುತ್ತೀರಾ ಎಂದು ಖಾರವಾಗಿ ಪ್ರಶ್ನಿಸಿದರು.

ಭಾರತ್ ಜೋಡೊ ಯಾತ್ರೆ ಮುಗಿದಿಲ್ಲ
ತಾವು ಕೈಗೊಂಡಿದ್ದ ಭಾರತ್ ಜೋಡೊ ಯಾತ್ರೆ ಮುಗಿದಿಲ್ಲ. ಇನ್ನುಚಾಲನೆಯಲ್ಲಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್‌ಗಾಂಧಿ ಹೇಳಿದರು. ಲೋಕಸಭೆಯಲ್ಲಿಂದು ಅವಿಶ್ವಾಸ ನಿರ್ಣಯದ ಮೇಲೆ ಮಾತನಾಡಿದ ಅವರು, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕೈಗೊಂಡಿದ್ದ ಭಾರತ್ ಜೋಡೊ ಯಾತ್ರೆಯನ್ನು ಮೆಲುಕು ಹಾಕಿದರು.
ಭಾರತ್ ಜೋಡೊ ಯಾತ್ರೆಯನ್ನು ಏಕೆ ಪ್ರಾರಂಭಿಸಿದ್ದೀರಿಎಂದು ಜನರು ಕೇಳುತ್ತಿದ್ದರು. ನಾನು ಏಕೆ ಯಾತ್ರೆ ಆರಂಭಿಸಿದೆ ಎಂಬುದೇ ನನಗೆ ಗೊತ್ತಿಲ್ಲ. ಆದರೆ, ಯಾತ್ರೆ ವೇಳೆ ಜನರ ನೋವು, ಸಂಕಟ, ಸಮಸ್ಯೆಗಳು ನನ್ನ ಸಮಸ್ಯೆಗಳಾದವು. ಈ ಸಂದರ್ಭದಲ್ಲಿ ನನ್ನಲ್ಲಿದ್ದ ಅಹಂಕಾರ ಭಾವನೆ ಮಾಯವಾಯಿತು. ತಾವು ಪ್ರತಿದಿನ ೧೦ ಕಿ.ಮೀ ಓಡಲು ಸಾಧ್ಯವಾದರೆ ೨೫ ಕಿ.ಮೀ ನಡೆಯುವುದು ದೊಡ್ಡ ವಿಷಯವಲ್ಲ ಎಂಬುದು ತಮ್ಮ ಮನಸ್ಸಿನಲ್ಲಿತ್ತು.ನನ್ನಹೃದಯದಲ್ಲಿ ದುರಹಂಕಾರವಿತ್ತು. ಆದರೆ, ದುರಹಂಕಾರವನ್ನು ಒಂದು ಸೆಕೆಂಡಿನಲ್ಲಿ ಅಳಿಸಿ ಹಾಕುತ್ತದೆ. ಯಾತ್ರೆ ಕೈಗೊಂಡ ೨-೩ ದಿನಗಳಲ್ಲೆ ಮೊಣಕಾಲಿನಲ್ಲಿ ನೋವು ಕಾಣಿಸಿಕೊಂಡಿತು. ಅದು ಹಳೆಯ ಗಾಯವಾಗಿತ್ತು ಎಂದ ಅವರು, ಭಾರತ ಜನರ ಧ್ವನಿ, ಈ ಧ್ವನಿಗಳನ್ನಾಲಿಸಲು ನಮ್ಮ ಆಸೆಗಳನ್ನು ತ್ಯಾಗ ಮಾಡಬೇಕು ಎಂದು ಹೇಳಿದರು.