ಕೇಂದ್ರದಿಂದ ತನಿಖಾ ಸಂಸ್ಥೆಗಳ ದುರ್ಬಳಕೆ- ಸಚಿವ ಪ್ರಿಯಾಂಕ್ ಟೀಕೆ

ಕಲಬುರಗಿ,ಮಾ.30: ಇಡಿ, ಐಟಿ ಮೊದಲಾದ ತನಿಖಾ ಸಂಸ್ಥೆಗಳು ಬಿಜೆಪಿಯ ಮುಂಚೂಣಿ ಘಟಕಗಳಾಗಿದ್ದು, ವಿರೋಧಪಕ್ಷಗಳಿಗೆ ಆಗಾಗ ಲವ್ ಲೆಟರ್ ಕಳಿಸುವುದು ತನಿಖಾ ಸಂಸ್ಥೆಗಳ ದುರ್ಬಳಕೆಗೆ ಪುರಾವೆ ಒದಗಿಸುವಂತಿದೆ ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಆದಾಯ ತೆರಿಗೆ ಇಲಾಖೆ ರೂ. 14 ಲಕ್ಷ ದೇಣಿಗೆಯ ಪೂರ್ವ ಅಂದಾಜು ಸಿಗುತ್ತಿಲ್ಲ ಎಂದು 1823.08 ಕೋಟಿ ರೂ. ತೆರಿಗೆ ಡಿಮ್ಯಾಂಡ್ ನೋಟಿಸು ಕೊಟ್ಟಿದ್ದಾರೆ. ಯಾವುದೇ ಅಸೆಸ್ಮೆಂಟ್ ಆರ್ಡರ್ ಇಲ್ಲದೆ. ಯಾವ ಆಧಾರದ ಮೇಲೆ ನೋಟಿಸು ನೀಡಿದ್ದಾರೋ ಗೊತ್ತಿಲ್ಲ ಎಂದರು.
ಎಲ್ಲ ರಾಜಕೀಯ ಪಕ್ಷಗಳಿಗೆ ಆರ್ ಟಿ ಅಧಿನಿಯಮದ ಸೆಕ್ಷನ್ 13 ರ ಅಡಿಯಲ್ಲಿ ರಿಯಾಯಿತಿ ಇರುತ್ತದೆ. ಯಾರಾದರೂ ವ್ಯಕ್ತಿ ದಾನದ ರೂಪದಲ್ಲಿ ಹಣ ಕೊಟ್ಟರೆ ಫಾರಂ 24ರ ಅಡಿ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಬೇಕು. ನಂತರ ಚುನಾವಣಸ ಆಯೋಗ ಮಾಹಿತಿಯನ್ನು ಅಧಿಕೃತ ವೆಬ್ ಸೈಟ್ ಮೂಲಕ ಪ್ರಕಟಿಸುತ್ತಾರೆ. ಹಾಗೆ ಅಧಿಕೃತವಾಗಿ ಪ್ರಕಟಿಸಿದ ಮಾಹಿತಿಯ ಬಗ್ಗೆ ನೋಟಿಸು ಜಾರಿ ಮಾಡಿರುವುದು ಅಚ್ಚರಿ ಉಂಟು ಮಾಡಿದೆ ಎಂದರು.
ಯಡಿಯೂರಪ್ಪ ಸಿಎಂ ಇದ್ದಾಗ ಸಹಾರಾ ಡೈರಿ ಹಾಗೂ ಈಶ್ವರಪ್ಪ ಮನೆಯಲ್ಲಿ ನೋಟು ಎಣಿಸುವ ಮಷಿನ್ ಸಿಕ್ಕಿದ್ದರೂ ತನಿಖೆ ಏಕೆ ನಡೆಸಲಿಲ್ಲ ಎಂದರಲ್ಲದೆ ಬಿಜೆಪಿಯೂ ದೇಣಿಗೆ ಸ್ವೀಕರಿಸಿದೆ. ಆ ಬಗ್ಗೆ ಯಾಕೆ ನೋಟಿಸು ನೀಡಲಿಲ್ಲ ಎಂದು ಆಕ್ಷೇಪಿಸಿದರು.
ಕೇಜ್ರಿವಾಲ್ ಅವರನ್ನು ಬಂಧಿಸಿರುವ ಹಿನ್ನೆಲೆಯಲ್ಲಿ ಚುನಾವಣೆ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರನ್ನು ಅರೆಸ್ಟ್ ಮಾಡಿರುವುದಕ್ಕೆ ಜರ್ಮನ್, ಅಮೆರಿಕಾ ಹಾಗೂ ವಿಶ್ವಸಂಸ್ಥೆಯವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಜೆಪಿಯವರಿಗೆ ಭಯ ಪ್ರಾರಂಭವಾಗಿದೆ. ಹಾಗಾಗಿ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆಪಾದನೆ ಮಾಡಿದರು.
ರಾಜ್ಯ ಬಿಜೆಪಿಯಲ್ಲಿ ಬಂಡಾಯ ಪ್ರಾರಂಭವಾಗಿದೆ. ಯಡಿಯೂರಪ್ಪ ಸೇರಿದಂತೆ ನಾಯಕರ ವಿರುದ್ದ ಅವರದೇ ಪಕ್ಷದವರಿಂದ ವಿರೋಧವಾಗುತ್ತಿದೆ. ಟಿಕೆಟ್ ಹಂಚಿಕೆ ವಿಚಾರದಲ್ಲಿ ಆಗಿರುವ ಗೊಂದಲ ಸರಿಪಡಿಸಬೇಕೆಂದು ಆಗ್ರಹಿಸುತ್ತಿದ್ದಾರೆ ಎಂದು ಬಿಜೆಪಿಗೆ ಟಾಂಗ್ ನೀಡಿದರು.
ಬಿಜೆಪಿಗೆ ಸೋಲಿನ ಭೀತಿ ಪ್ರಾರಂಭವಾಗಿದೆ. ಆಂತರಿಕ ಸಮೀಕ್ಷೆ ಪ್ರಕಾರ 200 ಸ್ಥಾನ ಬರುವುದಿಲ್ಲ. ಅಬ್ ಕೀ ಬಾರ್ ಚಾರ್ ಸೌ ಪಾರ್ ಎಂದು ಸುಮ್ಮನೆ ಹೇಳುತ್ತಾರೆ. ಕಾಂಗ್ರೆಸ್ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಖರ್ಗೆ ಸಾಹೇಬರನ್ನು ಸೋಲಿಸಿರುವ ಜಾಧವ್ ಸಂಸದರ ತರ ವರ್ತಿಸುವ ಬದಲು ಮೋದಿ ಅಭಿಮಾನಿ ಬಳಗದ ಘಟಕದ ಅಧ್ಯಕ್ಷರಂತೆ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದ ಅವರು ಜಾಧವ್ 50 ಸಾಧನೆ ಮಾಡಿರುವಾಗಿ ಹೇಳಿದ್ದಾರೆ. ಕೇವಲ ಐದು ಸಾಧನೆ ತಿಳಿಸಲು ಎಂದು ಹೇಳಿದ್ದೆ. ಅದಕ್ಕೆ ಪ್ರತಿಯಾಗಿ ಬಿಜೆಪಿ ಗ್ರಾಮೀಣ ಅಧ್ಯಕ್ಷರು ಫೆಬ್ರವರಿ 10 ರಂದು ನಮ್ಮ ಕಚೇರಿಗೆ ಪತ್ರ ಕಳಿಸಿ ನಮ್ಮ ಸರ್ಕಾರ ಸಾಧನೆ ಬಗ್ಗೆ ಮಾಹಿತಿ ಕೇಳಿ ಪತ್ರ ಬರೆದಿದ್ದರು. ಆಗ ನಮ್ಮ ಸಾಧನೆ ಅವರಿಗೆ ತೋರಿಸಲು ಕಾಂಗ್ರೆಸ್ ಯುವ ಘಟಕದವರು ಅವರ ಕಚೇರಿಯ ಮುಂದೆ ಬಸ್ ತೆಗೆದುಕೊಂಡು ಹೋದರೆ ಯಾರೊಬ್ಬರೂ ಬರಲಿಲ್ಲ ಎಂದು ಟೀಕಿಸಿದರು.
ಮಲ್ಲಿಕಾರ್ಜುನ ಖರ್ಗೆ ಅವರು ಸಂಸದರಾಗಿದ್ದ ವೇಳೆ ಮಾಡಿದ ಅಭಿವೃದ್ದಿ ಕಾರ್ಯಗಳ ಪಟ್ಟಿ ಓದಿದ ಸಚಿವರು ಆರ್ಟಿಕಲ್ 371 (ಜೆ), ಕೇಂದ್ರೀಯ ವಿಶ್ವವಿದ್ಯಾಲಯ, ಇಎಸ್ ಐಸಿ, ರಾಷ್ಟ್ರೀಯ ಹೆದ್ದಾರಿಗಳು, ಗುಲಬರ್ಗಾ ಗುತ್ತಿ- ರಾಷ್ಟ್ರೀಯ ಹೆದ್ದಾರಿ, ರೇಲ್ವೆ ಸ್ಟೇಷನ್ ಉನ್ನತೀಕರಣ, ಓವರ್ ಬ್ರಿಜ್, ಕಲಬುರಗಿ- ಹೊಟಗಿ ಡಬ್ಲಿಂಗ್, 27 ಹೊಸ ರೇಲ್ವೆಗಳು, ವಾಡಿ ಗುಲಬರ್ಗಾ ವಿದ್ಯುದೀಕರಣ, ಸರ್ಕಾರ ವಸತಿ ನಿಲಯಗಳು, ಕಡೇಚೂರು ರೇಲ್ವೆ ಕೋಚ್ ಫ್ಯಾಕ್ಟರಿ, ಯಾದಗಿರಿ ಬಸ್ ಕೋಚ್ ನಿರ್ಮಾಣ ಕಾರ್ಯಾಗಾರ, ಮುಲ್ಲಾಮಾರಿ, ಸನ್ನತಿ ಬ್ಯಾರೇಜ್, ಉಚ್ಛ ನ್ಯಾಯಾಲಯ, ಏಕಲವ್ಯ ಹಾಗೂ ಮೊರಾರ್ಜಿ ದೇಸಾಯಿ ವಸತಿ ನಿಲಯಗಳು, ಯಾತ್ರಿ ನಿವಾಸಗಳು, ನಾಗಾವಿ ಎಜುಕೇಷನ್ ಇಸ್ಟಿಟ್ಯೂಷನ್ ಇನ್ನೂ ಅನೇಕ ಅಭಿವೃದ್ದಿ ಕಾಮಗಾರಿಗಳನ್ನು ಮಾಡಲಾಗಿದೆ. ಇಂತಹ ಯಾವುದಾರೊಂದು ಯೋಜನೆ ಇದ್ದರೆ ಹೇಳಲಿ ಎಂದು ಸವಾಲು ಹಾಕಿದರು.
ರೀನೇಮಿಂಗ್, ರಿಪ್ಯಾಕೇಜಿಂಗ್, ರೀಲಾಂಚಿಂಗ್ ಎನ್ನುವ ಮೂರು ಆರ್ ಗಳನ್ನು ಬಿಜೆಪಿ ಸರ್ಕಾರ ಪಾಲಿಸುತ್ತಿದೆ. ಕಾಂಗ್ರೆಸ್ ಅಧಿಕಾರದ ಯೋಜನೆಗಳನ್ನೇ ಪುನರ್ ನಾಮಕರಣ ಮಾಡಲಾಗಿದೆ. ಮೋದಿ ಸರ್ಕಾರದ ಯಾವ ಯೋಜನೆಗಳು ಹೊಸವಲ್ಲ. ಈಗ ಮೋದಿ ಗ್ಯಾರಂಟಿ ಎನ್ನುತ್ತಿದ್ದಾರೆ. ಬಿಜೆಪಿಯವರೇ ಗಮನಸಿ ನೀವು ಏನೇ ಮಾಡಿದರು ಅದರಲ್ಲಿ ಕನ್ನಡಿಗರ ಪಾಲು ಇರುತ್ತದೆ. ಯಾವುದಾದರೂ ಹೊಸ ಯೋಜನೆ ಇದ್ದರೆ ಹೇಳಲಿ ಎಂದು ಚಾಲೆಂಜ್ ಮಾಡುತ್ತೇನೆ. ಮೋದಿ ಗ್ಯಾರಂಟಿ ಎಂದು ಹೇಳಿಕೊಳ್ಳುವ ಕೇಂದ್ರದ ಪ್ರಾಯೋಜಿಕ ಯೋಜನೆಗಳಲ್ಲಿ ರಾಜ್ಯ ಸರ್ಕಾರದ ಸಮಪಾಲು ಇರುವಾಗ ಅದ್ಹೇಗೆ ಮೋದಿ ಗ್ಯಾರಂಟಿ ಆಗುತ್ತದೆ ಎಂದು ಪ್ರಶ್ನಿಸಿದರು.
ಬಿಜೆಪಿ ಸರ್ಕಾರದ ಸಾಧನೆಗಳ ಬಗ್ಗೆ ಅವರು ಹೇಳಲಿ. ನಮ್ಮ ಸರ್ಕಾರದ ಸಾಧನೆ ಬಗ್ಗೆ ನಾನು ಹೇಳುತ್ತೇನೆ. ನಾನೇ ವೇದಿಕೆ ಸಿದ್ದಪಡಿಸುತ್ತೇನೆ ಹಾಗೂ ಬಹಿರಂಗ ಚರ್ಚೆಗೆ ಸಿದ್ದನಿದ್ದೇನೆ. ಅವರ ಕಡೆಯಿಂದ ಯಾರೂ ಬೇಕಾದರೂ ಬರಲಿ ಅಥವಾ ನಮ್ಮ ಅಭಿವೃದ್ದಿ ನೋಡಬೇಕಿದ್ದರೆ ಎಸಿ ಸೌಲಭ್ಯ ಹೊಂದಿರುವ ಬಸ್ ವ್ಯವಸ್ಥೆ ಮಾಡುತ್ತೇನೆ ಜೊತೆಗೆ ಒಬ್ಬ ಗೈಡ್ ವ್ಯವಸ್ಥೆ ಮಾಡುತ್ತೇನೆ ಬಿಜೆಪಿಗರು ನಮ್ಮೊಂದಿಗೆ ಬರಲಿ ಎಂದು ಪಂಥ್ಯಾಹ್ವಾನ ನೀಡಿದರು.
ಮನುವಾದಿಗಳಿಂದ ನನಗೆ ಜೀವ ಬೆದರಿಕೆ ಇದೆ ಎಂದು ಹೇಳಿದ್ದೇನೆ. ಆದರೆ ಅದಕ್ಕೆ ಜಾಧವ್ ಪ್ರತಿಕ್ರಿಯಿಸಿದ್ದಾರೆ. ನಾನು ಮನುವಾದಿಗಳು ಎಂದಿದ್ದೇನೆ ಅದಕ್ಕೆ ಜಾಧವ ಯಾಕೆ ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿನೋಡಿಕೊಳ್ಳಬೇಕು ? ನಾನೇನಾದರೂ ಜಾಧವ ಹೆಸರು ಹೇಳಿದ್ದೇನಾ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷ ಏನು ಮಾಡಿದೆ ಎಂದು ಜಾಧವ್ ಕೇಳುತ್ತಾರೆ, ಕಾಂಗ್ರೆಸ್ ಸರ್ಕಾರ ನಿರ್ಮಿಸಿದ್ದ ಕಾಲೇಜಿನಲ್ಲಿ ಓದಿ, ಸರ್ಕಾರದ ಆಸ್ಪತ್ರೆಯಲ್ಲಿ ಕೆಲಸ ಮಾಡಿ. ಮುಂದೆ ಕೆಲಸಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿಕೊಂಡಿದ್ದಕ್ಕೆ ಅವರನ್ನು ನಾಯಕರನ್ನಾಗಿ ಮಾಡಿದೆ ಎಂದು ಕುಟುಕಿದರು.
ಭೀಮಾ ನದಿಗೆ ನೀರು ಹರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಜಾಧವ್ ಸರಿಯಾಗಿ ವರ್ತಿಸಬೇಕು. ಹೋರಾಟಗಾರರ ಬಿಪಿ ಚೆಕ್ ಮಾಡುವ ಕೆಲಸ ಬೇರೆಯವರು ಮಾಡುತ್ತಾರೆ. ಅದರ ಬದಲಿ ಮಹಾರಾಷ್ಟ್ರ ದಲ್ಲಿ ಅವರದೇ ಸರ್ಕಾರ ಇದೆಯಲ್ಲ ಅವರೊಂದಿಗೆ ಮಾತನಾಡಲಿ ಎಂದು ಕಿವಿಮಾತು ಹೇಳಿದರು.
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರೂ1000 ಕೋಟಿ ವೆಚ್ಚದಲ್ಲಿ ಗ್ರಾಮೀಣ ಭಾಗದ ರಸ್ತೆಗಳನ್ನು ಅಭಿವೃದ್ದಿ ಪಡಿಸಲಾಗುವುದು ಎಂದರು.
ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ್, ಶಾಸಕ ಅಲ್ಲಮಪ್ರಭುಪಾಟೀಲ್, ಡಾ. ಕಿರಣ್ ದೇಶಮುಖ, ಪ್ರವೀಣ ಹರವಾಳ ಹಾಗೂ ಮತ್ತಿತರಿದ್ದರು.