ಕೇಂದ್ರದಿಂದ ಉದ್ಯೋಗಾವಕಾಶ ಸೃಷ್ಟಿ: ಖೂಬಾ

ಹುಬ್ಬಳ್ಳಿ, ಜ 20: ದೇಶದಲ್ಲಿ ಉದ್ಯೋಗದ ಅವಕಾಶಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೃಷ್ಟಿಸುತ್ತಿದ್ದಾರೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.
ನಗರದಲ್ಲಿಂದು ಆಯೋಜಿಸಲಾದ ರೋಜಗಾರ್ ಮೇಳ ಕಾರ್ಯಕ್ರಮಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋರೊನಾ ಸಂಕಷ್ಟದ ಸಂದರ್ಭದಲ್ಲಿ ಅನೇಕ ಆರ್ಥಿಕ ಸಮಸ್ಯೆಗಳನ್ನು ಅನೇಕ ಅಭಿವೃದ್ಧಿ ಹೊಂದಿದ ದೇಶಗಳು ಎದುರಿಸಿದ್ದು, ಈ ಮಧ್ಯೆ ಭಾರತದ ಆರ್ಥಿಕ ವ್ಯವಸ್ಥೆ ಸದೃಢವಾಗಿದೆ ಎಂಬುದನ್ನು ನಾವು ಹೇಳುತ್ತಿಲ್ಲ. ಬದಲಾಗಿ ಇದನ್ನು ಅಂತರಾಷ್ಟ್ರೀಯ ಸಂಸ್ಥೆಗಳು ಹೇಳುತ್ತಿವೆ. ಭಾರತದಲ್ಲಿ ಯುವಕರಿಗೆ ಅನೇಕ ಅವಕಾಶಗಳಿವೆ. ಇವನ್ನು ಬಳಸಿಕೊಳ್ಳಬೇಕು ಎಂಬ ಸದುದ್ದೇಶದಿಂದ ರೋಜಗಾರ ಮೇಳವನ್ನು ಸರ್ಕಾರ ಹಮ್ಮಿಕೊಂಡಿದೆ ಎಂದರು.
ಆಂಧ್ರಪ್ರದೇಶ, ಗುಜರಾತ, ಹಿಮಾಚಲ ಪ್ರದೇಶ ಈ ಮೂರು ರಾಜ್ಯಗಳಲ್ಲಿ ಫಾರ್ಮಾ ಪಾರ್ಕ್ ಸ್ಥಾಪನೆಗೆ ಸೂಕ್ತವಾಗಿದೆ ಎಂದು ನೀತಿ ಆಯೋಗ ಆಯ್ಕೆ ಮಾಡಲಾಗಿದೆ ಎಂದರು.
ಬೇರೆ ರಾಜ್ಯಗಳಿಂದಲೂ ಪ್ರಸ್ತಾವನೆಗಳು ಬಂದಿದ್ದವು. ನಮ್ಮ ರಾಜ್ಯದಲ್ಲಿ ಸ್ಥಾಪನೆಗೆ ಬೇಡಿಕೆಯೂ ಇತ್ತು. ಆದರೆ ಹೂಡಿಕೆಯಿಂದ ಭಾರತಕ್ಕೆ ಅನುಕೂಲವಾಗಲು ಈ ಮೂರು ಸ್ಥಾನಗಳನ್ನು ನಿಯಮಾನುಸಾರ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು.
ಇನ್ವೆಸ್ಟ್ ಕರ್ನಾಟಕದಡಿ ಎರಡು ಲಕ್ಷ ಕೋಟಿ ರೂ. ಉತ್ತರ ಕರ್ನಾಟಕದಲ್ಲಿ ಹೂಡಬೇಕೆಂಬ ಅವಕಾಶಗಳು ಬಂದಿವೆ ಎಂದ ಅವರು, ರಸಗೊಬ್ಬರ ಉತ್ಪಾದನಾ ಘಟಕವನ್ನು ಈ ಭಾಗದಲ್ಲಿ ಸ್ಥಾಪನೆ ಮಾಡುವ ಕುರಿತು ಬೇಡಿಕೆ ಇದೆ ಎಂಬುದರ ಕುರಿತು ಪ್ರತಿಕ್ರಿಯಿಸಿ ಹಳೇ ಕಾರ್ಖಾನೆಗಳನ್ನು ಪುನರಾರಂಭ ಮಾಡಿದ್ದೇವೆ. ಸ್ವಾವಲಂಬನೆಗೆ ಎಷ್ಟು ಬೇಕು ಅಷ್ಟು ವ್ಯವಸ್ಥೆ ಮಾಡಲಾಗಿದೆ ಎಂದರು.
ನ್ಯಾನೋ ಯೂರಿಯಾ ಕ್ರಾಂತಿಕಾರಕ ಹೆಜ್ಜೆಯಾಗಿದ್ದು, ರೈತರ ಮಧ್ಯೆ ಇದು ಪ್ರಸಿದ್ಧಿ ಪಡೆಯುತ್ತಿದೆ. ಭಾರತದಲ್ಲಿ ನಿರ್ಮಾಣವಾಗುತ್ತಿದ್ದು, ಬೇರೆ ದೇಶದ ಮೇಲೆ ಅವಲಂಬನೆ ಕಡಿಮೆ ಮಾಡುವುದೇ ಉದ್ದೇಶವಾಗಿದೆ ಎಂದರು.
ರಸಗೊಬ್ಬರ ಬೆಲೆ ಏರಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಏರಿದರೂ, ಕೇಂದ್ರ ಸರ್ಕಾರಕ್ಕೆ ಹೊರೆಯಾದರೂ ಸಹ ಮೊದಲಿನ ಬೆಲೆಗೆನೇ ನಾವು ರೈತರಿಗೆ ಸಮಯಕ್ಕೆ ಸರಿಯಾಗಿ ಗೊಬ್ಬರ ಪೂರೈಕೆ ಮಾಡುತ್ತಿದ್ದು, ಅವರಿಗೆ ಸಂಕಷ್ಟವಾಗದಂತೆ ನೋಡಿಕೊಂಡಿದ್ದೇವೆ ಎಂದರು.
ನ್ಯಾನೊ ಗೊಬ್ಬರದ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರದ ಅಧಿಕಾರಿಗಳು ಹಾಗೂ ಗೊಬ್ಬರ ಕಂಪೆನಿಗಳ ಸಂಯುಕ್ತಾಶ್ರಯದಲ್ಲಿ ಯೋಜನೆಗಳನ್ನು ರೂಪಿಸಲಾಗಿದ್ದು, ಇದಕ್ಕೆ ಸ್ಪಂದನೆಯೂ ಸಿಗುತ್ತಿದೆ ಎಂದು ಅವರು ಹೇಳಿದರು.