ಕೇಂದ್ರದಲ್ಲಿ ಮತ್ತೆ ಮೋದಿ ಸರ್ಕಾರಕ್ಕಾಗಿ ಕಲಬುರಗಿ,ಬೀದರಗೆ ಶಿವರಾಜ್‍ಸಿಂಗ್ ಚವ್ಹಾಣ್

ಕಲಬುರಗಿ:ಫೆ.20: ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ಘೋಷಣೆಯಡಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಷ್ಟ್ರೀಯ ನಾಯಕ ಶಿವರಾಜಸಿಂಗ್ ಚವ್ಹಾಣ್ ಅವರು ಫೆಬ್ರವರಿ 21ರಂದು ಬುಧವಾರ ಕಲಬುರ್ಗಿ ಮತ್ತು ಬೀದರ್ ಲೋಕಸಭಾ ಕ್ಲಸ್ಟರ್‍ಗಳಲ್ಲಿ ಪ್ರವಾಸ ಮಾಡಲಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಶಾಸಕ ಪಿ. ರಾಜೀವ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಶಿವರಾಜ್‍ಸಿಂಗ್ ಚವ್ಹಾಣ್ ಅವರು ಬುಧವಾರ ಬೆಳಿಗ್ಗೆ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಮತ್ತೆ ಮೋದಿ ಸರ್ಕಾರ್ ಎನ್ನುವಂತಹ ಗೋಡೆ ಬರಹ ಪ್ರಚಾರಕ್ಕೆ ಚಾಲನೆಗೊಳಿಸಿದ್ದಾರೆ. ಅಲ್ಲಿ ಮೋದಿ ಸರ್ಕಾರದ ಎಲ್ಲ ವಿಚಾರಗಳನ್ನು ಪ್ರಸ್ತುತಪಡಿಸಲಿದ್ದಾರೆ. ನಂತರ ಕಲಬುರ್ಗಿಗೆ ಬಂದು ಹುಮ್ನಾಬಾದ್‍ಗೆ ಹೋಗಿ ಬೂತ್ ಮಟ್ಟದ ಸಭೆಯಲ್ಲಿ ಪಾಲ್ಗೊಳ್ಳುವರು. ಉಭಯ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾರ್ಯತಂತ್ರ ರೂಪಿಸಲಿದ್ದಾರೆ ಎಂದರು.
ಶಾಸಕ ಎಸ್.ಟಿ. ಸೋಮಶೇಖರ್ ಅವರು ಬಿಜೆಪಿಯನ್ನು ಬಿಟ್ಟು ಕಾಂಗ್ರೆಸ್ಸಿಗೆ ಹೋಗುತ್ತಾರೆ ಎಂಬುದನ್ನು ಅಲ್ಲಗಳೆದ ಪಿ. ರಾಜೀವ್ ಅವರು, ಪಕ್ಷದ ಸಿದ್ಧಾಂತವನ್ನು ಒಪ್ಪಿ ಬಂದಿದ್ದಾರೆ. ಅದೇ ರೀತಿ ಅವರು ಮುಂದುವರೆಯುತ್ತಾರೆ. ಯಾವುದೇ ಶಾಸಕರು ಪಕ್ಷವನ್ನು ಬಿಡುವುದಿಲ್ಲ ಎಂದು ಅವರು ಹೇಳಿದರು.
ರಾಜ್ಯದಿಂದ ರಾಜ್ಯಸಭೆ ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ನಮ್ಮ ಬಿಜೆಪಿ ಪಕ್ಷದ ಅಭ್ಯರ್ಥಿ ಗೆಲ್ಲುತ್ತಾರೆ. ನಮಗೆ ಯಾವುದೇ ಅಡ್ಡ ಮತದಾನದ ಭೀತಿಯಿಲ್ಲ. ಬಿಜೆಪಿ ಅಭ್ಯರ್ಥಿಗೆ ಅಗತ್ಯವಾದ ಮತಗಳನ್ನು ಚಲಾಯಿಸಿ, ಬಿಜೆಪಿ ಶಾಸಕರ ಹೆಚ್ಚುವರಿ ಮತಗಳನ್ನು ನಮ್ಮ ಎನ್‍ಡಿಎ ಮೈತ್ರಿಕೂಟದ ಅಭ್ಯರ್ಥಿಗೆ ಹಾಕುವ ಮೂಲಕ ಅವರ ಗೆಲುವಿಗೆ ಪ್ರಯತ್ನಿಸುತ್ತೇವೆ ಎಂದು ಅವರು ತಿಳಿಸಿದರು.
ಇನ್ನು ಸರ್ಕಾರಿ ವಿದ್ಯಾರ್ಥಿಗಳ ವಸತಿ ಶಾಲೆಯಲ್ಲಿ ಕೈ ಮುಗಿದು ಒಳಗೆ ಬಾ ಎಂಬ ಸಂದೇಶವನ್ನು ತೆರವುಗೊಳಿಸಿ ಜ್ಞಾನ ದೇಗುಲವಿದು, ಧೈರ್ಯದಿಂದ ಪ್ರಶ್ನಿಸಿ ಎಂಬ ಸಂದೇಶ ಬದಲಾಯಿಸಿದ್ದರ ಕುರಿತು ಆಕ್ರೋಶ ಹೊರಹಾಕಿದ ಪಿ. ರಾಜೀವ್ ಅವರು, ಕಾಂಗ್ರೆಸ್ ಪಕ್ಷವು ಅರಾಜಕತೆಯನ್ನು ಪ್ರತಿಪಾದಿಸುತ್ತಿದೆ. ಆ ಪಕ್ಷದ ಧೋರಣೆಯೇ ಭಾರತ ಭಾಗವಾಗುವುದಕ್ಕೆ ಮೂಲ ಕಾರಣವಾಗಿದೆ. ಈಗಲೂ ಸಹ ಅದೇ ನೀತಿ ಮುಂದುವರೆಸಿದೆ. ತುಷ್ಠಿಕರಣ, ವಂಶವಾದ ಆಯಿತು. ಈಗ ಅರಾಜಕತೆಯನ್ನು ಹುಟ್ಟುಹಾಕಲು ಕೈ ಮುಗಿದು ಒಳಗೆ ಬಾ ಕುವೆಂಪು ಅವರ ಸಂದೇಶವನ್ನು ರದ್ದುಪಡಿಸಿ ಕುವೆಂಪು ಅವರಿಗೆ ಅವಮಾನ ಮಾಡಿದ್ದಾರೆ ಎಂದು ದೂರಿದರು.
ಒಟ್ಟು ಕುಟುಂಬದ ಮಗು ಯಾವ ನೈತಿಕ ಮೌಲ್ಯಗಳನ್ನು ಬೆಳೆಸುವುದಕ್ಕೆ ಮೂಲದಲ್ಲಿಯೇ ಚಿವುಟಿ ಹಾಕುವಂತಹ ಕೆಟ್ಟ ಕೃತ್ಯವನ್ನು ಕಾಂಗ್ರೆಸ್ ಮಾಡುತ್ತಿದೆ. ನೈತಿಕತೆಯನ್ನು ಚಿವುಟಿ ಹಾಕುವುದು ಯಾರಿಗೂ ಒಳ್ಳೆಯದಲ್ಲ. ಅದನ್ನು ಪ್ರತಿಯೊಬ್ಬರೂ, ಪಾಲಕರು, ಪೋಷಕರು, ನಾಗರಿಕರು ಉಗ್ರವಾಗಿ ಖಂಡಿಸುತ್ತಾರೆ. ಸರ್ಕಾರಕ್ಕೆ ಛೀ ತೂ ಎನ್ನುತ್ತಿದ್ದಾರೆ. ತನ್ನ ಆದೇಶವನ್ನು ಸರ್ಕಾರವು ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದರು.
ನಂತರ ಪಿ. ರಾಜೀವ್ ಅವರು ಬಿಜೆಪಿ ಪಕ್ಷದ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ಅವರ ಪ್ರವಾಸದ ಹಿನ್ನೆಲೆಯಲ್ಲಿ ಪೂರ್ವ ಭಾವಿ ಸಿದ್ಧತಾ ಸಭೆಯನ್ನು ಮಾಡಿದರು. ಪಕ್ಷದ ಮುಖಂಡರು, ಮಾಜಿ ಶಾಸಕರು ಉಪಸ್ಥಿತರಿದ್ದರು.