ಕೇಂದ್ರದಲ್ಲಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ

ಲಕ್ನೋ,ಮೇ.೧೫-ದೇಶದಲ್ಲಿ ನಾಲ್ಕು ಹಂತದ ಲೋಕಸಭೆ ಚುನಾವಣೆ ಪೂರ್ಣಗೊಂಡಿದ್ದು ಇಂಡಿಯಾ ಮೈತ್ರಿಕೂಟ ಮತ್ತಷ್ಟು ಗಟ್ಟಿಯಾಗಿದ್ದು, ಜೂನ್ ೪ ರಂದು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಕೇಂದ್ರದಲ್ಲಿ ಸರ್ಕಾರ ರಚಿಸಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದಿಲ್ಲಿ ಹೇಳಿದ್ದಾರೆ.
ಈ ಬಾರಿಯ ಲೋಕಸಭೆ ಚುನಾವಣೆ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿಸುವ ನಿಟ್ಟಿನಲ್ಲಿ ಮುಖ್ಯವಾಗಿದೆ.ಹೀಗಾಗಿ ದೇಶದ ಜನರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮನೆಗೆ ಕಳುಹಿಸಲಿದ್ದಾರೆ. ಇಂಡಿಯಾ ಮೈತ್ರಿಕೂಟ ಹೊಸ ಸರ್ಕಾರ ರಚನೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಪ್ರಚಾರದಲ್ಲಿ ಬ್ಯುಸಿಯಾಗಿರುವ ಮಲ್ಲಿಕಾರ್ಜುನ ಖರ್ಗೆ ಲಕ್ನೋದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,ದೇಶದ ಭವಿಷ್ಯ, ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸಲು ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಇಲ್ಲದಿದ್ದರೆ ನಾವು ಮತ್ತೆ ಗುಲಾಮರಾಗುತ್ತೇವೆ ಎಂದಿದ್ದಾರೆ.
ಪ್ರಜಾಪ್ರಭುತ್ವವಿಲ್ಲದಿದ್ದರೆ ದೇಶದ್ಲಿ ನಿರಂಕುಶಾಧಿಕಾರ ಮತ್ತು ಸರ್ವಾಧಿಕಾರ ತಲೆದೋರುತ್ತದೆ, ಅದಕ್ಕೆ ಕಡಿವಾಣ ಹಾಕಲು ದೇಶದ ಜನರು ನಿರ್ದರಿಸಿದ್ಧಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಮನೆಗೆ ಕಳುಹಿಸಲಿದ್ದಾರೆ ಎಂದು ಹೇಳಿದ್ದಾರೆ.
ದೇಶದಲ್ಲಿ ವಿರೋಧ ಪಕ್ಷದ ನಾಯಕರು ಸ್ಪರ್ಧೆ ಮಾಡಿರುವ ಕ್ಷೇತ್ರಗಳಲ್ಲಿ ನಾಮಪತ್ರ ವಾಪಸ್ ತಗೆಸುವ ಕೆಲಸ ನಡೆಯುತ್ತಿದ್ದು ಇದು ಪ್ರಜಾಪ್ರಭುತ್ವಕ್ಕೆ ದೊಡ್ಡ ಗಂಡಾಂತರ. ಇಂತಹುದನ್ನು ತಡೆಯಬೇಕಾಗಿದೆ. ಇಲ್ಲಿದ್ದರೆ ಉಳಿಗಾಲವಿಲ್ಲ ಎಂದು ತಿಳಿಸಿದ್ದಾರೆ.
ಹೈದರಾಬಾದ್‌ನಲ್ಲಿ ಬಿಜೆಪಿಯ ಮಹಿಳಾ ಅಭ್ಯರ್ಥಿಯೊಬ್ಬರು ಬುರ್ಖಾ ತೊಡಿಸಿ ಮಹಿಳೆಯರ ಗುರುತನ್ನು ಪರಿಶೀಲಿಸುವುದನ್ನು ನೋಡಿದ್ದೇನೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯುವುದು ಎಂದರೆ ಹೀಗೆನಾ ಎಂದು ಅವರು ಪ್ರಶ್ನಿಸಿದ್ದಾರೆ.

ಪತ್ರಿಕಾ ಸ್ವಾತಂತ್ರ್ಯದ ದಿನ
ದೇಶದಲ್ಲಿ ಜೂನ್ ೪ ರಂದು ಇಂಡಿಯಾ ಮೈತ್ರಿಕೂಟ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದ್ದು, ದೇಶದ ಪತ್ರಿಕಾ ಸ್ವಾತಂತ್ರ್ಯದ ದಿನ ಅಂದು ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದ್ದಾರೆ.
ಜೂನ್ ೪ ರಿಂದ ಪ್ರಾರಂಭವಾಗುವ ಸುವರ್ಣ ಅವಧಿಗೆ ಪತ್ರಿಕಾ ಮಾಧ್ಯಮದಿಂದಅಭಿನಂದಿಸಲು ಬಯಸುತ್ತೇನೆ, ಅದು ’ಪತ್ರಿಕಾ ಸ್ವಾತಂತ್ರ್ಯ’ ದಿನವಾಗಿರುತ್ತದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಬಿಜೆಪಿ ತನ್ನದೇ ಆದ ನಕಾರಾತ್ಮಕ ನಿರೂಪಣೆಯಲ್ಲಿ ಸಿಕ್ಕುಹಾಕಿಕೊಂಡಿದೆ. ಉತ್ತರಪ್ರದೇಶದಲ್ಲಿ ಇಂಡಿಯಾ ಮೈತ್ರಿಕೂಟ ೭೯ ಸ್ಥಾನಗಳನ್ನು ಗೆಲ್ಲಲಿದೆ, ಕೇವಲ ಒಂದು ಸ್ಥಾನದಲ್ಲಿ ಹೋರಾಟವಿದೆ ಎಂದು ತಿಳಿಸಿದ್ದಾರೆ.