ಕೇಂದ್ರಕ್ಕೆ ರಣಾವತ್ ಧನ್ಯವಾದ

ಮುಂಬೈ, ಸೆ. ೧೧- ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಜತೆ ಜಟಾಪಟಿಗೆ ಇಳಿದಿರುವ ನಟಿ ಕಂಗನಾ ರಣಾವತ್ ಅವರಿಗೆ ವೈ-ಪ್ಲಸ್ ಶ್ರೇಣಿಯ ಭದ್ರತೆ ನೀಡಿದ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಕಂಗನಾ ರಣಾವತ್ ಅವರ ತಾಯಿ ಆಶಾ ರಣಾವತ್ ಧನ್ಯವಾದ ಹೇಳಿದ್ದಾರೆ.
ತಮ್ಮ ಮಗಳು ಸದಾ ಸತ್ಯದ ಪರ ನಿಲ್ಲುತ್ತಾಳೆ. ಹಾಗಾಗಿ ಆಕೆಯ ಬಗ್ಗೆ ನನಗೆ ಹೆಮ್ಮೆ ಇದೆ. ಇಡೀ ದೇಶದ ಆಶೀರ್ವಾದ ಆಕೆಯ ಮೇಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಕಂಗನಾ ತಾಯಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ನಾವು ಎಂದೂ ಬಿಜೆಪಿಯ ಬೆಂಬಲಿಗರಲ್ಲ. ಮೂಲತಃ ನಾವು ಕಾಂಗ್ರೆಸ್‌ಗೆ ಸೇರಿದವರು. ನನ್ನ ಮಾವ ಅಂದರೆ ಕಂಗನಾ ಅವರ ತಾತ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದವರು. ಎಂದಿಗೂ ಅವರು ಇಷ್ಟೆಲ್ಲಾ ಇದ್ದರೂ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಂಗನಾ ಅವರಿಗೆ ವೈ-ಪ್ಲಸ್ ಶ್ರೇಣಿಯ ಭದ್ರತೆ ನೀಡಿರುವುದಕ್ಕೆ ಧನ್ಯವಾದ ಎಂದು ಕಂಗನಾ ತಾಯಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಂಗನಾ ಅವರ ಬೆಂಬಲಕ್ಕೆ ನಿಂತು ಅವರಿಗೆ ಭದ್ರತೆ ಒದಗಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಅವರು, ನನ್ನ ಮಗಳಿಗೆ ಭದ್ರತೆಯನ್ನು ಕೇಂದ್ರ ಸರ್ಕಾರ ಒದಗಿಸದಿದ್ದರೆ ಏನಾಗುತ್ತಿತ್ತೋ ಎಂಬುದು ದೇವರಿಗೆ ಗೊತ್ತು ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.