ಕೇಂದ್ರಕ್ಕೆ ಮುನ್ನ ರಾಜ್ಯದಲ್ಲಿ ಸ್ಟಾರ್ಟ್‌ಪ್ ನೀತಿ: ಸಿಎಂ

ಟೆಕ್ ಶೃಂಗ

ಬೆಂಗಳೂರು, ನ. ೨೯- ಕೇಂದ್ರ ಸರ್ಕಾರಕ್ಕಿಂತ ಮೊದಲೇ ಕರ್ನಾಟಕದಲ್ಲಿ ೨೦೧೫ರಲ್ಲೇ ಸ್ಟಾರ್ಟ್‌ಪ್ ನೀತಿಯನ್ನು ಕಾಂಗ್ರೆಸ್ ಸರ್ಕಾರ ಆರಂಭಿಸಿತ್ತು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.ಬೆಂಗಳೂರು ಅರಮನೆ ಮೈದಾನದಲ್ಲಿಂದು ಮೂರು ದಿನಗಳ ಟೆಕ್ ಶೃಂಗಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ೨೦೧೫ರಲ್ಲೇ ಸ್ಟಾರ್ಟ್‌ಪ್ ನೀತಿಯನ್ನು ಪ್ರಾರಂಭಿಸುವ ಮೂಲಕ ದೂರದೃಷ್ಟಿಯ ಹೆಜ್ಜೆಯನ್ನು ಇಟ್ಟಿತ್ತು ಎಂದರು.ಕೇಂದ್ರ ಸರ್ಕಾರ ರಾಷ್ಟ್ರೀಯ ಮಟ್ಟದಲ್ಲಿ ಸ್ಟಾರ್ಟ್‌ಪ್ ನೀತಿಯನ್ನು ರೂಪಿಸುವ ಮೊದಲೇ ಕರ್ನಾಟಕದಲ್ಲಿ ಸ್ಟಾರ್ಟ್‌ಪ್ ನೀತಿ ಜಾರಿಯಾಗಿತ್ತು. ಹೀಗಾಗಿ ಕರ್ನಾಟಕ ಸ್ಟಾರ್ಟ್‌ಪ್‌ನಲ್ಲಿ ಮುಂಚೂಣಿಯಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.ಕರ್ನಾಟಕ ತಾಂತ್ರಿಕ ಆವಿಷ್ಕಾರದಲ್ಲಿ ರಾಷ್ಟ್ರದಲ್ಲೇ ಮುಂಚೂಣಿಯಲ್ಲಿದೆ. ಸುಮಾರು ೫೫೦೦ ತಂತ್ರಜ್ಞಾನ ಕಂಪನಿಗಳು ಮತ್ತು ಸರಿಸುಮಾರು ೭೬೦ ಬಹುರಾಷ್ಟ್ರೀಯ ಸಂಸ್ಥೆಗಳಿಗೆ ರಾಜ್ಯ ನೆಲೆಯಾಗಿದೆ. ನಮ್ಮ ರಾಜ್ಯವೂ ತಂತ್ರಜ್ಞಾನ ವಲಯದ ಯಶಸ್ಸಿನ ಹಿಂದಿನ ಪ್ರೇರಕ ಶಕ್ತಿಯಾಗಿದೆ. ರಾಷ್ಟ್ರದ ಐಟಿ ರಫ್ತಿನಲ್ಲಿ ೮೫ ಬಿಲಿಯನ್ ಡಾಲರ್ ಕೊಡುಗೆ ನೀಡಿದೆ ಎಂದರು.
ಐಟಿ ಉದ್ಯಮವು ೧೨ ಲಕ್ಷಕ್ಕೂ ಹೆಚ್ಚು ವೃತ್ತಿಪರ ನೇರ ಉದ್ಯೋಗ ಒದಗಿಸಿದೆ. ೩೧ ಲಕ್ಷಕ್ಕೂ ಹೆಚ್ಚು ಮಂದಿಗೆ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ ಎಂದರು.
ಸಾಫ್ಟ್‌ವೇರ್ ರಫ್ತಿನಲ್ಲಿ ಕರ್ನಾಟಕದ ಪಾಲು ದೇಶದ ರಫ್ತಿನಲ್ಲಿ ಶೇ. ೪೦ ರಷ್ಟಿದೆ. ಜಾಗತೀಕವಾಗಿ ಕರ್ನಾಟಕ ಮಾಹಿತಿ ತಂತ್ರಜ್ಞಾನ ಪವರ್ ಹೌಸ್ ಆಗಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದೆ ಎಂದರು.ಕರ್ನಾಟಕ ಆವಿಷ್ಕಾರಗಳಿಗೆ ಹೊಸ ಹೊಸ ಐಡಿಯಾಗಳಿಗೆ ವೇದಿಕೆಯಾಗಿದೆ ಎಂದು ಅವರು ಹೇಳಿದರು.
ಕರ್ನಾಟಕ ಕೇವಲ ಐಟಿ ವಲಯದಲ್ಲಿ ಮಾತ್ರ ಉತ್ತಮವಾಗಿಲ್ಲ. ಹೂಡಿಕೆ ಕ್ಷೇತ್ರದಲ್ಲೂ ಆದ್ಯತಾ ತಾಣವಾಗಿ ಗುರುತಿಸಲ್ಪಟ್ಟಿದೆ.

ನಗರದ ಅರಮನೆ ಮೈದಾನದಲ್ಲಿ ಇಂದು ನಡೆದ “ಬೆಂಗಳೂರು ಟೆಕ್ ಸಮ್ಮಿಟ್” ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯರವರು ಉದ್ಘಾಟಿಸಿದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಪ್ರಿಯಾಂಕ್ ಖರ್ಗೆ, ಎಂ.ಬಿ. ಪಾಟೀಲ್, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಹಾಗೂ ಡಾ. ಕಿರಣ್ ಮಜುಂದಾರ್, ಮಾರ್ಕ್ ಪೇಪರ್ ಮಾಸ್ಟರ್, ನಿವೃತ್ತಿ ರೈ, ಮತ್ತಿತರರು ಉಪಸ್ಥಿತರಿದ್ದರು.

ಸರ್ಕಾರವು ಹೂಡಿಕೆ ಪ್ರತಿಭೆ ಮತ್ತು ಅವಕಾಶಗಳನ್ನು ಆಕರ್ಷಿಸುವ ವ್ಯವಸ್ಥೆಯನ್ನು ರೂಪಿಸುವತ್ತ ಗಮನಹರಿಸಿದೆ. ನೀತಿ ನಿಯಂತ್ರಕ ಪ್ರಕ್ರಿಯೆಗಳನ್ನು ಸರಳೀಕರಣಗೊಳಿಸಲಾಗಿದೆ. ಉದ್ಯಮಿಸ್ನೇಹಿ ವಾತಾವರಣವನ್ನು ಸೃಷ್ಟಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.ಕರ್ನಾಟಕ ರಾಜ್ಯದ ನೀತಿಗಳನ್ನು ಉದ್ಯಮ ತ್ತು ಆಕಾಡೆಮಿ ನಡುವಿನ ಸಹಯೋಗದೊಂದಿಗೆ ರೂಪಿಸಲಾಗಿದೆ. ಉದ್ಯಮದ ದಿಗ್ಗಜರು ಮತ್ತು ನಾಯಕರನ್ನು ಒಳಗೊಂಡ ಐಟಿ ಬಯೋಟೆಕ್ ಸ್ಟಾರ್ಟ್‌ಪ್‌ಗಳ ಮಿಷನ್ ಗ್ರೂಪ್‌ಗಳು ರಾಜ್ಯದ ಅಭಿವೃದ್ಧಿಯ ಪಥ ರೂಪಿಸುವ ಥಿಂಕ್ ಟ್ಯಾಂಕ್‌ಗಳಾಗಿ ಕಾರ್ಯನಿರ್ವಹಿಸುತ್ತವೆ ಎಂದು ಅವರು ಹೇಳಿದರು.
ಬೆಂಗಳೂರು ಹೊರತುಪಡಿಸಿ ಹೊರಗಿನ ನಗರಗಳಲ್ಲೂ ಉದ್ಯಮ ಆರಂಭಿಸಲು ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದರು.
ಈ ಶೃಂಗಸಭೆ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಬಯೋ ತಂತ್ರಜ್ಞಾನ ನೀತಿಯನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೈಗಾರಿಕಾ ಸಚಿವ ಬಿ.ಆರ್. ಪಾಟೀಲ್, ಐಟಿಬಿಟಿ ಮತ್ತು ಗ್ರಾಮೀಣಾಭಿವೃದ್ಘಿ ಸಚಿವ ಪ್ರಿಯಾಂಕ ಖರ್ಗೆ, ಸರ್ಕಾರದ ಐಟಿ ಕಾರ್ಯದರ್ಶಿ ಏಕರೂಪ್ ಕೌರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.