ಚು. ಆಯುಕ್ತರ ನೇಮಕ ಕೇಂದ್ರ ಮತ್ತೆ ಸುಪ್ರೀಂ ಚಾಟಿ

ನವದೆಹಲಿ,ನ.೨೪- ಚುನಾವಣಾ ಆಯುಕ್ತರನ್ನು ನೇಮಕ ಮಾಡುವ ಕೇಂದ್ರ ಸರ್ಕಾರದ ಕ್ರಮದ ಬಗ್ಗೆ ಮೇಲಿಂದ ಮೇಲೆ ಚಾಟಿ ಬೀಸಿರುವ ಸುಪ್ರೀಂಕೋರ್ಟ್, ಚುನಾವಣಾ ಆಯುಕ್ತರನ್ನಾಗಿ ನಿವೃತ್ತ ಐಎಎಸ್ ಅಧಿಕಾರಿ ಅರುಣ್ ಗೋಯೆಲ್ ಅವರನ್ನು “ಸೂಪರ್ ಫಾಸ್ಟ್” ಆಗಿ ನೇಮಕ ಮಾಡುವ ಪ್ರಮೇಯ ಏನಿತ್ತು ಎಂದು ಖಡಕ್ ಆಗಿ ಪ್ರಶ್ನಿಸಿದೆ.ಚುನಾವಣಾ ಆಯುಕ್ತರ ನೇಮಕಾತಿಯ ಕುರಿತು ಕೇಂದ್ರ ಸರ್ಕಾರದ ಕ್ರಮಗಳ ವಿರುದ್ದ ಅಸಮಾಧಾನ ಮುಂದುವರಿಸಿರುವ ಸುಪ್ರೀಂಕೋರ್ಟ್, ಯಾವುದೇ ಆಕ್ಷೇಪಣೆ ಇಲ್ಲದೆ ನೇರವಾಗಿ ಯಾಕೆ ನೇಮಕ ಮಾಡಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿದೆ.ನ್ಯಾಯಮೂರ್ತಿ ಕೆ ಎಂ ಜೋಸೆಫ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠ ನಿನ್ನೆಯಷ್ಟೇ ಚುನಾವಣಾ ಆಯುಕ್ತರನ್ನಾಗಿ ಅರುಣ್ ಗೋಯೆಲ್ ಅವರ ನೇಮಕಾತಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು.ಇಂದು ನಡೆದ ಮೂರನೇ ಮುಂದುವರಿದ ವಿಚಾರಣೆಯಲ್ಲಿಯೂ ನಿವೃತ್ತಿಯಾದ ತಕ್ಷಣವೇ ಚುನಾವಣಾ ಆಯೋಗಕ್ಕೆ ನೇಮಕ ಮಾಡಿದ್ದು ಯಾಕೆ ಎಂದು ಖಾರವಾಗಿ ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡಿದೆ.ಶಾರ್ಟ್‌ಲೀಸ್ಟ್ ಮಾಡಲಾದ ನಾಲ್ಕು ಹೆಸರುಗಳ ಪಟ್ಟಿಯಿಂದ ಅರುಣ್ ಗೋಯಲ್ ಅವರನ್ನು ಕಾನೂನು ಸಚಿವರು ಚುನಾವಣಾ ಆಯುಕ್ತರನ್ನಾಗಿ ಮಾಡುವ ಹೆಸರನ್ನು ನವಂಬರ್ ೧೮ ರಂದು ಆಯ್ಕೆ ಮಾಡಿದ ದಿನವೇ ಪ್ರಧಾನಿ ಕೂಡ ಅದೇ ದಿನ ಹೆಸರನ್ನು ಶಿಫಾರಸು ಮಾಡುತ್ತಾರೆ.ಈ ರೀತಿಯ ಸೂಪರ್ ಫಾಸ್ಟ್ ಯಾಕೆ ಎಂದು ನ್ಯಾಯಪೀಠ ಕೇಂದ್ರ ಸರ್ಕಾರಕ್ಕೆ ಚಳಿ ಬಿಡಿಸಿದೆ.ಸರ್ಕಾರದೊಂದಿಗೆ ನ್ಯಾಯಾಲಯ ಘರ್ಷಣೆಗೆ ಇಳಿಯುವುದಿಲ್ಲ ಆದರೆ ಚುನಾವಣಾ ಆಯುಕ್ತರ ವಿಷಯದಲ್ಲಿ ತರಾತುರಿಯಾಗಿ ಹಾಗೂ ಸೂಪರ್ ಫಾಸ್ಟ್ ಆಗಿ ಮಾಡುವ ಜರೂರತ್ತಾದರೂ ಏನು. ಚುನಾವಣಾ ಆಯುಕ್ತರ ಹುದ್ದೆ ಮೇ ೧೫ ರಿಂದ ಖಾಲಿ ಇದೆ.ಅಂದಿನಿಂದ ಈ ಸ್ಥಾನ ತುಂಬಲು ಯಾಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಕೂಡ ನ್ಯಾಯಪೀಠ ಕೇಂದ್ರಕ್ಕೆ ಪ್ರಶ್ನೆಗಳ ಸುರಿಮಳೆ ಗೈದಿದೆ.ಚುನಾವಣಾ ಆಯುಕ್ತರ ನೇಮಕಕ್ಕೆ ಮೇ.೧೫ ರಿಂದ ಪ್ರಕ್ರಿಯೆ ಆರಂಭಿಸಿದ್ದರೆ ನವೆಂಬರ್‌ವರೆಗೆ ಯಾವೆಲ್ಲಾ ಕ್ರಮ ಕೈಗೊಂಡಿದ್ದೀರಿ ನಮಗೆ ತೋರಿಸಿ ಎಂದು ನೇರವಾಗಿ ತಾಕೀತು ಮಾಡಿದೆ.ಹಲವು ತಿಂಗಳುಗಳಿಂದ ಬಾಕಿ ಇದ್ದ ಚುನಾವಣಾ ಆಯುಕ್ತರ ಹುದ್ದೆ ೨೪ ಗಂಟೆ ಒಳಗೆ ನೇಮಕವಾಗುತ್ತದೆ ಅಂದರೆ ಇದರರ್ಥ ಏನು.ನೇಮಕಾತಿ ಮಾಡಿಕೊಳ್ಳುವಾಗ ಯಾವೆಲ್ಲಾ ಮಾನದಂಡ ಅನಸರಿಸಿದ್ದೀರಿ ಎಂದು ಚಾಟಿ ಬೀಸಿದೆ.ಚುನಾವಣಾ ಆಯೋಗದ ವೆಬ್‌ಸೈಟ್ ಪ್ರಕಾರ, ಅರುಣ್ ಗೋಯೆಲ್ ಅವರು ನವೆಂಬರ್ ೨೧ ರಂದು ಅಧಿಕಾರ ವಹಿಸಿಕೊಂಡಿದ್ದಾರೆ. ಪಂಜಾಬ್ ಕೇಡರ್‍ಸ್‌ನ ೧೯೮೫ ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿ ೩೭ ವರ್ಷಗಳ ಸೇವೆಯ ಸಲ್ಲಿಸಿ ಕೇಂದ್ರ ಭಾರೀ ಕೈಗಾರಿಕಾ ಸಚಿವಾಲಯದ ಕಾರ್ಯದರ್ಶಿಯಾಗಿ ನಿವೃತ್ತರಾದರು.
ಈ ನಡುವೆ ಸರ್ಕಾರಿ ವಕೀಲರಾದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರ ಆಕ್ಷೇಪಣೆಗಳನ್ನು ನ್ಯಾಯಾಲಯ ತಿರಸ್ಕರಿಸಿ, ಕೇಂದ್ರ ಸರ್ಕಾರದ ನಡೆಯನ್ನು ತರಾಟೆಗೆ ತೆಗೆದುಕೊಂಡಿದೆ.ಅರುಣ್ ಗೋಯಲ್ ನೇಮಕಾತಿಯನ್ನು ಸಾಮಾಜಿಕ ಕಾರ್ಯಕರ್ತ ಹಾಗು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.”ಅರುಣ್ ಗೋಯೆಲ್ ಅವರು ಗುರುವಾರದವರೆಗೆ, ಸರ್ಕಾರದಲ್ಲಿ ಕಾರ್ಯದರ್ಶಿ ಮಟ್ಟದ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ, ಅವರಿಗೆ ಶುಕ್ರವಾರ ಸ್ವಯಂ ನಿವೃತ್ತಿ ಯೋಜನೆ ನೀಡಿ ಮರುದಿನ ಚುನಾವಣಾ ಆಯುಕ್ತರಾಗಿ ನೇಮಿಸಲಾಗಿದೆ. ಡಿಸೆಂಬರ್ ೩೧ ರಂದು ೬೦ ನೇ ವಯಸ್ಸಿನಲ್ಲಿ ನಿವೃತ್ತಿ ಹೊಂದುತ್ತಿದ್ದರು ಎಂದು ಶಾಂತಿಭೂಷಣ್ ನ್ಯಾಯಾಲಯ ಗಮನ ಸೆಳೆದಿದ್ದರು.ಫೆಬ್ರವರಿ ೨೦೨೫ ರಲ್ಲಿ ರಾಜೀವ್ ಕುಮಾರ್ ಅಧಿಕಾರ ತ್ಯಜಿಸಿದ ನಂತರ ಅವರು ಈಗ ಮುಖ್ಯ ಚುನಾವಣಾ ಆಯುಕ್ತರಾಗಲು ರೇಸ್‌ನಲ್ಲಿದ್ದಾರೆ

ಕೋರ್ಟ್ ಹಸ್ತಕ್ಷೇಪಕ್ಕೆ ಆಕ್ಷೇಪ
ಚುನಾವಣಾ ಆಯುಕ್ತರ ನೇಮಕ ಮತ್ತು ಕಾರ್ಯವಿಧಾನದ ಬಗ್ಗೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ತಪರಾಕಿ ಹಾಕಿದ ಬೆನ್ನಲ್ಲೇ ನೇಮಕಾತಿಯಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಸರ್ಕಾರ ಹೇಳಿದೆ.
ಚುನಾವಣಾ ಆಯುಕ್ತರು ಮತ್ತು ಮುಖ್ಯ ಚುನಾವಣಾ ಆಯುಕ್ತರ ನೇಮಕಾತಿ ಮತ್ತು ಕಾರ್ಯವಿದಾನದಲ್ಲಿ ಸುಪ್ರೀಂಕೋರ್ಟ್ ಮಧ್ಯ ಪ್ರವೇಶಿಸುವುದು ಸರಿಯಲ್ಲ ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.
ನಿನ್ನೆಯಷ್ಟೇ ಸುಪ್ರೀಂಕೋರ್ಟ್ ಚುನಾವಣಾ ಆಯುಕ್ತರ ಕಾರ್ಯವಿಧಾನ ನೇಮಕಾತಿ ಪ್ರಕ್ರಿಯೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಅತೃಪ್ತಿ ಹೊರಹಾಕಿತ್ತು.ಸುಪ್ರೀಂಕೋರ್ಟ್ ನ ಅತೃಪ್ತಿಗೆ ವಿವರ ನೀಡಿರುವ ಕೇಂದ್ರ ಸರ್ಕಾರ, ಚುನಾವಣಾ ಆಯುಕ್ತರು ಮತ್ತು ಮುಖ್ಯ ಚುನಾವಣಾ ಆಯುಕ್ತರ ಕುರಿತು ನೇಮಕಾತಿಯಲ್ಲಿವ ನ್ಯಾಯಾಂಗ ಮೌನ ವಹಿಸುವುದು ಸೂಕ್ತ. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದೆ.ಚುನಾವಣಾ ಆಯುಕ್ತ ಮತ್ತು ಸಾಂವಿಧಾನಿಕ ಮೌನವನ್ನು ನ್ಯಾಯಾಂಗವು ತುಂಬಲು ಸಾಧ್ಯವಿಲ್ಲ ಕಾರ್ಯಾಂಗದ ಸ್ವಾತಂತ್ರ್ಯವನ್ನು ಅತಿಕ್ರಮಣ ಮಾಡಲು ಬರದೆ ಗೌರವಿಸಬೇಕು ಎಂದು ನ್ಯಾಯಾಲಯಕ್ಕೆ ತಿಳಿಸಿದೆ.
ಪ್ರಸ್ತುತ ವ್ಯವಸ್ಥೆಯಡಿಯಲ್ಲಿ ಸಂವಿಧಾನ ಪೀಠ ವ್ಯಕ್ತಪಡಿಸಿದ ಆತಂಕಕ್ಕೆ ಪ್ರತಿಕ್ರಿಯಿಸಿದ ಸರ್ಕಾರ ಚುನಾವಣಾ ಆಯೋಗಕ್ಕೆ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಲಾಗುತ್ತದೆ ಎಂದು ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಕೇಂದ್ರ ಸರ್ಕಾರದ ಕ್ರಮವನ್ನು ನ್ಯಾಯಾಲಯದಲ್ಲಿ ಸಮರ್ಥನೆ ಮಾಡಿಕೊಂಡಿದ್ದಾರೆ.ಚುನಾವಣಾ ಆಯುಕ್ತರು ಮತ್ತು ಮುಖ್ಯ ಆಯುಕ್ತರ “ಆಯ್ಕೆ ಮತ್ತು ಆಯ್ಕೆ ವಿಧಾನ” ಸರ್ಕಾರ ಮತ್ತು ನೇಮಕಾತಿಗಳನ್ನು ಅಳವಡಿಸಿಕೊಂಡಿಲ್ಲ. ಅಧಿಕಾರಿಗಳ ಹಿರಿತನದ ಆಧಾರದ ಮೇಲೆ ನೇಮಕ ಮಾಡಲಾಗುತ್ತದೆ. ಪಕ್ಷಪಾತಕ್ಕೂ ಅವಕಾಶ ಮಾಡಿಕೊಟ್ಟಿಲ್ಲ .ಹೀಗಾಗಿ ನ್ಯಾಯಾಲಯ ಈ ವಿಷಯದಲ್ಲಿ ಮಧ್ಯ ಪ್ರವೇಶ ಮಾಡಬಾರದು ಎಂದು ತಿಳಿಸಿದ್ದಾರೆ.