ಕೇಂದ್ರಕ್ಕೆ ಬಿಸಿ ಮುಟ್ಟಿಸಿದ ರಾಜ್ಯ

ನವದೆಹಲಿ, ಫೆ. ೭- ಕೇಂದ್ರದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯ, ಅನುದಾನ ತಾರತಮ್ಯದ ವಿರುದ್ಧ ಸಿಡಿದೆದ್ದಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ ದೆಹಲಿಯಲ್ಲಿಂದು ಪ್ರತಿಭಟನೆ ನಡೆಸುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಹೋರಾಟದ ಕಹಳೆ ಮೊಳಗಿಸಿದೆ.
ದೆಹಲಿಯ ಜಂತರ್ ಮಂತರ್‌ನಲ್ಲಿಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಸರ್ಕಾರದ ಎಲ್ಲ ಸಚಿವರು, ಶಾಸಕರು ಪ್ರತಿಭಟನಾ ಹೋರಾಟ ನಡೆಸುವ ಮೂಲಕ ಕೇಂದ್ರದ ವಿರುದ್ಧ ನೇರ ಸಂಘರ್ಷಕ್ಕೆ ಇಳಿದಿದ್ದು ಅನುದಾನ ತಾರತಮ್ಯ ಮಾಡುತ್ತಿರುವ ಕೇಂದ್ರ ಸರ್ಕಾರಕ್ಕೆ ಪ್ರತಿಭಟನೆ ಮೂಲಕ ಬಿಸಿ ಮುಟ್ಟಿಸಿದ್ದಾರೆ.ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನುದಾನ ಹಂಚಿಕೆಯಲ್ಲಿ ಭಾರಿ ತಾರತಮ್ಯವಾಗಿದೆ .ಹಾಗೆಯೇ ತೆರಿಗೆ ಪಾಲಿನಲ್ಲೂ ಕಡಿತವಾಗಿದೆ. ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿ ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿದೆ ಎಂದು ಪ್ರತಿಭಟನೆ ನಡೆಸಿರುವ ರಾಜ್ಯ ಸರ್ಕಾರ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದೆ.ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯ ಸರ್ಕಾರವೊಂದು ಕೇಂದ್ರದ ವಿರುದ್ಧ ಅನುದಾನ ತಾರತಮ್ಯದ ವಿರುದ್ಧ ಧ್ವನಿ ಎತ್ತಿ ಪ್ರತಿಭಟನೆ ನಡೆಸಿದ್ದು ಇದೇ ಮೊದಲ ಬಾರಿಗೆ.ಇಂದು ಬೆಳಗ್ಗೆ ೧೧ ಗಂಟೆಗೆ ಜಂತರ್ ಮಂತರ್‌ನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಸೇರಿದ ಸರ್ಕಾರದ ಎಲ್ಲ ಸಚಿವರು, ಶಾಸಕರು ಒಟ್ಟಾಗಿ ಕೇಂದ್ರದ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ರಾಜ್ಯಕ್ಕೆ ಕೇಂದ್ರದಿಂದ ಆಗಿರುವ ಅನ್ಯಾಯವನ್ನು ಸಾರ್ವಜನಿಕವಾಗಿ ಜಗಜ್ಜಾಹೀರು ಮಾಡುವ ಕೆಲಸ ಮಾಡಿದರು.
ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆ ಸಂಪೂರ್ಣ ಕನ್ನಡಮಯವಾಗಿದ್ದು, ಪ್ರತಿಯೊಬ್ಬ ಸಚಿವರು, ಶಾಸಕರು ಕನ್ನಡ ಧ್ವಜ ಹಿಡಿದು ಪ್ರತಿಭಟಿಸಿದ್ದು ವಿಶೇಷ.
ಕನ್ನಡದ ಧ್ವಜ ಹಿಡಿಯುವ ಮೂಲಕ ಕನ್ನಡ ಅಸ್ಮಿತೆಗೆ ಧಕ್ಕೆಯಾಗಿದೆ ಎಂಬ ಸಂದೇಶವನ್ನು ಸಚಿವರು, ಶಾಸಕರು ಪ್ರತಿಬಿಂಬಿಸಿದ್ದಾರೆ.
ಕೇಂದ್ರದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ರಾಜ್ಯದ ಕೈ ಸರ್ಕಾರ ಧ್ವನಿ ಎತ್ತಿ ಚಲೋ ದಿಲ್ಲಿ ಅಭಿಯಾನವನ್ನು ಹಮ್ಮಿಕೊಂಡಿದ್ದು, ನನ್ನ ತೆರಿಗೆ ನನ್ನ ಹಕ್ಕು ಘೋಷವಾಕ್ಯದಡಿ ದೆಹಲಿಯಲ್ಲಿ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸಿದೆ.
ಭಾಗಿಯಾಗದ ಬಿಜೆಪಿ-ಜೆಡಿಎಸ್ ಸದಸ್ಯರು
ಕೇಂದ್ರದ ವಿರುದ್ಧ ಜಂತರ್ ಮಂತರ್‌ನಲ್ಲಿ ನಡೆಯಲಿರುವ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು, ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ರಾಜ್ಯದ ಎಲ್ಲ ಬಿಜೆಪಿ ಮತ್ತು ಜೆಡಿಎಸ್ ಸಂಸದರಿಗೂ ಪತ್ರ ಬರೆದು, ಆಹ್ವಾನ ನೀಡಿದ್ದರಾದರೂ ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್‌ನ ಏಕೈಕ ಸಂಸದ ಡಿ.ಕೆ. ಸುರೇಶ್ ಬಿಟ್ಟರೆ ರಾಜ್ಯದ ಯಾವುದೇ ಸಂಸದರು ಪ್ರತಿಭಟನೆಯತ್ತ ಸುಳಿಯಲಿಲ್ಲ.
ಸಿಎಂ ಆಕ್ರೋಶ
ಈ ಪ್ರತಿಭಟನೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಕನ್ನಡಿಗರ ಸ್ವಾಭಿಮಾನಕ್ಕೆ ಆಗುತ್ತಿರುವ ಅನ್ಯಾಯ ವಿರೋಧಿಸಿ ಈ ಪ್ರತಿಭಟನೆ ನಡೆದಿದೆ ಎಂದರು.೧೪ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಶೇ. ೪.೭೧ ರಷ್ಟು ಪಾಲಿಸಿದ್ದರೆ ೧೫ನೇ ಹಣಕಾಸು ಆಯೋಗದಲ್ಲಿ ಶೇ. ೩.೬ಕ್ಕೆ ಇಳಿದಿದೆ. ಇದರಿಂದ ನಾಲ್ಕು ವರ್ಷಗಳಲ್ಲಿ ರಾಜ್ಯಕ್ಕೆ ೪೫ ಸಾವಿರ ಕೋಟಿ ರೂ. ತೆರಿಗೆ ಪಾಲು ಕಡಿತಗೊಂಡಿದೆ. ಪ್ರತಿವರ್ಷ ರಾಜ್ಯದಿಂದ ಕೇಂದ್ರಕ್ಕೆ ೪.೩೦ ಲಕ್ಷ ಕೋಟಿ ರೂ. ತೆರಿಗೆ ಹೋಗುತ್ತಿದೆ. ಆದರೆ, ಈ ತೆರಿಗೆ ಪಾಲಿನಲ್ಲಿ ರಾಜ್ಯಕ್ಕೆ ಸಿಗುತ್ತಿರುವುದು ೫೨.೨೫೭ ಕೋಟಿ ಮಾತ್ರ ಎಂದು ಕೇಂದ್ರದ ವಿರುದ್ಧ ಕಿಡಿಕಾರಿದರು.
ನಗದು ಹಂಚಿಕೆಯಲ್ಲಿನ ಅನ್ಯಾಯ ಸರಿಪಡಿಸಲು ರಾಜ್ಯಕ್ಕೆ ೫೪೯೨ ಕೋಟಿ ರೂ. ವಿಶೇಷ ಅನುದಾನ ನೀಡುವಂತೆ ಆಯೋಗ ಶಿಫಾರಸ್ಸು ಮಾಡಿದ್ದರೂ ಕೇಂದ್ರ ಹಣ ಬಿಡುಗಡೆ ಮಾಡಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.ಜಿಎಸ್‌ಟಿಯಿಂದ ರಾಜ್ಯಕ್ಕೆ ನಷ್ಟವಾಗಿದೆ. ಜಿಎಸ್‌ಟಿ ಪರಿಹಾರ ನೀಡುವುದನ್ನು ಕೇಂದ್ರ ಸರ್ಕಾರ ೨೦೨೨ ರ ಜೂನ್‌ನಿಂದ ನಿಲ್ಲಿಸಿದೆ. ಇದರಿಂದಲೂ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.ಕಳೆದ ಐದು ವರ್ಷಗಳಲ್ಲಿ ರಾಜ್ಯಕ್ಕೆ ಕೇಂದ್ರದಿಂದ ೧ ಲಕ್ಷ ೮೭ ಸಾವಿರ ರೂ. ನಷ್ಟವಾಗಿದೆ. ಕೇಂದ್ರ ಪ್ರಾಯೋಜಿತ ಯೋಜನೆಗಳಲ್ಲೂ ಅನುದಾನ ನೀಡಿಕೆಯಲ್ಲಿ ತಾರತಮ್ಯವಾಗಿದೆ ಎಂದು ಕೇಂದ್ರದ ವಿರುದ್ಧ ಹರಿಹಾಯ್ದರು.ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರದ ಈ ನಡೆ ಖಂಡನೀಯ. ಕೂಡಲೇ ಕೇಂದ್ರ ಸರ್ಕಾರ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಅವರು ಆಗ್ರಹಿಸಿದರು.

ಡಿಸಿಎಂ- ಸಚಿವರು- ಶಾಸಕರು ಭಾಗಿ
ಜಂತರ್ ಮಂತರ್‌ನಲ್ಲಿ ಇಂದು ನಡೆದ ಪ್ರತಿಭಟನೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆದಿಯಾಗಿ ರಾಜ್ಯದ ಎಲ್ಲ ಸಚಿವರು, ಕಾಂಗ್ರೆಸ್‌ನ ೧೩೬ ಶಾಸಕರು ಭಾಗಿಯಾಗಿದ್ದರು.ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ನಿನ್ನೆಯೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಎಲ್ಲ ಸಚಿವರು, ಶಾಸಕರು ದೆಹಲಿಗೆ ತೆರಳಿದ್ದರು.
ಇಂದು ಪ್ರತಿಭಟನೆಯನ್ನು ಮುಗಿಸಿಕೊಂಡು ರಾತ್ರಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಎಲ್ಲ ಸಚಿವರು, ಶಾಸಕರು ರಾಜ್ಯಕ್ಕೆ ವಾಪಸ್ಸಾಗುವರು.

ನಾಳೆ ಕೇರಳ-ತಮಿಳುನಾಡು ಹೋರಾಟ
ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮೊದಲಿಗೆ ಧ್ವನಿ ಎತ್ತಿ ಕೇಂದ್ರದ ವಿರುದ್ಧ ಇಂದು ಪ್ರತಿಭಟನೆ ನಡೆಸಿದ ಬೆನ್ನಲ್ಲೆ, ನಾಳೆ ಜಂತರ್ ಮಂತರ್‌ನಲ್ಲಿ ಕೇರಳ ಮತ್ತು ತಮಿಳುನಾಡು ಸರ್ಕಾರಗಳು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿವೆ.
ತೆರಿಗೆ ಪಾಲಿನ ಹಂಚಿಕೆಯ ಅನ್ಯಾಯ, ಅನುದಾನ ತಾರತಮ್ಯ ವಿರೋಧಿಸಿ ಕೇರಳದ ಮುಖ್ಯಮಂತ್ರಿ, ಸಚಿವರು, ಶಾಸಕರು ಹಾಗೂ ಸಂಸದರು ಪ್ರತಿಭಟನೆ ನಡೆಸಲಿದ್ದು, ಕೇರಳದ ಪ್ರತಿಭಟನೆ ಬೆಂಬಲಿಸಿ ತಮಿಳುನಾಡಿನ ಆಡಳಿತರೂಢಾ ಡಿಎಂಕೆ ಪಕ್ಷ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲಿದೆ.

ಕನ್ನಡಿಗರ ಹಿತಕ್ಕಾಗಿ ಚಳವಳಿ
ದೆಹಲಿಯ ಜಂತರ್ ಮಂತರ್‌ನಲ್ಲಿ ರಾಜ್ಯ ಸರ್ಕಾರ ನಡೆಸಿರುವ ಹೋರಾಟ ಕರ್ನಾಟಕದ ಕನ್ನಡಿಗರ ಹಿತ ಕಾಪಾಡುವ ಚಳವಳಿ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಬಣ್ಣಿಸಿದರು.ನವದೆಹಲಿ ಜಂತರ್ ಮಂತರ್‌ನಲ್ಲಿ ಕಾಂಗ್ರೆಸ್ ಸರ್ಕಾರ ಕೇಂದ್ರ ಸರ್ಕಾರದ ವಿರುದ್ಧ ಹಮ್ಮಿಕೊಂಡಿರುವ ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಮಾಡಿರುವ ಅನ್ಯಾಯ, ಅನುದಾನ ತಾರತಮ್ಯದ ವಿರುದ್ಧ ಜಂತರ್ ಮಂತರ್‌ನಲ್ಲಿ ಚಳವಳಿ ನಡೆಸಿದ್ದವೆ. ಇದು ರಾಜಕೀಯ ಚಳವಳಿ ಅಲ್ಲ. ಕನ್ನಡಿಗರ ಹಿತಕಾಯುವ ಚಳವಳಿ ಎಂದರು.
ಕಳೆದ ಐದಾರು ವರ್ಷಗಳಲ್ಲಿ ಕೇಂದ್ರದಿಂದ ರಾಜ್ಯಕ್ಕೆ ನ್ಯಾಯಯುತವಾಗಿ ಬರಬೇಕಾಗಿದ್ದ ೧ ಲಕ್ಷ ೮೭ ಸಾವಿರ ಕೋಟಿ ರೂ.ಗಳ ಅನುದಾನ ಬಂದಿಲ್ಲ. ಈ ಅನ್ಯಾಯದ ವಿರುದ್ಧ ಪ್ರತಿಭಟನೆ ನಡೆಸಿದ್ದೇವೆ ಎಂದರು.
ಜಂತರ್ ಮಂತರ್ ಐತಿಹಾಸಿಕ ಸ್ಥಳವಾಗಿದ್ದು ಅನೇಕ ಚಳವಳಿಗಳಿಗೆ ಸಾಕ್ಷಿಯಾದ ಸ್ಥಳ. ಈ ಸ್ಥಳದಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಎಲ್ಲ ಸಚಿವರು, ಶಾಸಕರು ಹೋರಾಟ ನಡೆಸಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧದ ಈ ಹೋರಾಟವನ್ನು ಪಕ್ಷಾತೀತ ಹೋರಾಟವಾಗಿದೆ ಎಂದು ಹೇಳಿದರು.
ಇದು ಐತಿಹಾಸಿಕ ಪ್ರತಿಭಟನೆ. ೧೪ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ತೆರಿಗೆ ಪಾಲು ಶೇ. ೪.೭೧ ರಷ್ಟು ಬಂದಿತ್ತು. ೧೫ನೇ ಹಣಕಾಸು ಆಯೋಗದಲ್ಲಿ ಇದು ಶೇ. ೩.೬೪ ಕ್ಕೆ ಇಳಿಯಿತು. ಇದರಿಂದ ರಾಜ್ಯಕ್ಕೆ ಬರುವ ತೆರಿಗೆ ಪಾಲಿನಲ್ಲಿ ಶೇ. ೪೦ ರಿಂದ ೪೫ ರವರೆಗೆ ಕಡಿತವಾಗಿದೆ ಎಂದರು.
೧೪ನೇ ಹಣಕಾಸು ಯೋಜನೆಯ ಶಿಫಾರಸ್ಸಿನಲ್ಲೇ ೧೫ನೇ ಹಣಕಾಸು ಆಯೋಗದಲ್ಲಿ ಅನುಸರಿಸಿದ್ದರೆ ರಾಜ್ಯಕ್ಕೆ ೬೨೯೮ ಕೋಟಿ ರೂ. ಬರುತ್ತಿತ್ತು ಎಂದರು.
ರಾಜ್ಯದಿಂದ ಒಟ್ಟು ೪ ಕೋಟಿ ೩೦ ಲಕ್ಷ ರೂ. ತೆರಿಗೆ ಮೊತ್ತವನ್ನು ಕೇಂದ್ರಕ್ಕೆ ನೀಡಲಾಗುತ್ತಿದೆ. ಆದರೆ, ೧೦೦ ರೂ. ತೆರಿಗೆಯಲ್ಲಿ ರಾಜ್ಯಕ್ಕೆ ಕೇವಲ ೧೨ ರಿಂದ ೧೪ ರೂ.ದೊರೆಯುತ್ತಿದೆ. ಇದು ರಾಜ್ಯಕ್ಕೆ ಆದ ಅನ್ಯಾಯ ಎಂದರು
ರಾಜ್ಯದಿಂದ ಬಿಜೆಪಿಯ ೨೫ ಸಂಸದರು ಆಯ್ಕೆಯಾಗಿದ್ದರೂ ಒಬ್ಬರೂ ಕೇಂದ್ರದ ಮುಂದೆ ಮಾತನಾಡಿಲ್ಲ. ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪರಾಗಲೀ, ಬಸವರಾಜಬೊಮ್ಮಾಯಿ ಯಾಗಲಿ ಅನ್ಯಾಯವನ್ನು ಸರಿಪಡಿಸುವ ಕೆಲಸ ಮಾಡಿಲ್ಲ. ಈ ಎಲ್ಲ ಕಾರಣಗಳಿಂದಾಗಿ ಇಂದು ದೆಹಲಿಯಲ್ಲಿ ಹೋರಾಟ ನಡೆದಿದೆ ಎಂದರು.
ರಾಜ್ಯದ ಬಿಜೆಪಿ ಸಂಸದರು ಕೋಲೆ ಬಸವಗಳು ಮೋದಿ ಹೇಳಿದ್ದಕ್ಕೆಲ್ಲ ತಲೆ ಆಡಿಸುತ್ತಾರೆ ಎಂದು ಟೀಕಿಸಿದರು.
ಉತ್ತರ ಪ್ರದೇಶ ರಾಜ್ಯಕ್ಕೆ ೨ ಲಕ್ಷ ೮೦ ಸಾವಿರ ಕೋಟಿ ರೂ. ಕೇಂದ್ರ ನೀಡುತ್ತಿದೆ. ಅಂತೆಯೇ ಬಿಹಾರ, ಮಧ್ಯಪ್ರದೇಶ ರಾಜಸ್ಥಾನಗಳಿಗೂ ಹೆಚ್ಚಿನ ಹಣ ನೀಡಲಾಗುತ್ತಿದೆ. ಜನಸಂಖ್ಯೆ ತಲಾ ಆದಾಯ ಸಮುದಾಯ ಅಭಿವೃದ್ಧಿ ಸೇರಿದಂತೆ ಹಲವು ಮಾನದಂಡಗಳಿಂದ ಅನುದಾನ ಹಂಚಿಕೆಯನ್ನು ನಿರ್ಧರಿಸಲಾಗುತ್ತಿದೆ. ಈ ರಾಜ್ಯಗಳು ಜನಂಸಖ್ಯಾ ನಿಯಂತ್ರಣದ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ ಅವರು, ೧೫ನೇ ಹಣಕಾಸು ಯೋಜನೆಯಲ್ಲಿ ೨೦೧೧ರ ಜನಗಣತಿಯನ್ನು ಪರಿಗಣಿಸುತ್ತಿದ್ದಾರೆ ಎಂದರು.
ಅತೀ ಹೆಚ್ಚು ತೆರಿಗೆ ನೀಡುವ ರಾಜ್ಯಗಳಿಗೆ ನ್ಯಾಯಯುತವಾದ ಪಾಲನ್ನು ರಾಜ್ಯಸರ್ಕಾರ ನೀಡಬೇಕು. ಹಾಗೆಂದು ನಾವು ಬಡ ಮತ್ತು ಹಿಂದುಳಿದ ರಾಜ್ಯಗಳಿಗೆ ಅನುದಾನ ಹಂಚಿಕೆ ನೀಡಬೇಕು ಎಂದು ಹೇಳಲ್ಲ ಎಂದರು.
s

ಅಧಿಕಾರವಿಲ್ಲದಿದ್ದರೆ ಸರ್ಕಾರ ಏಕೆ? ಡಿಕೆಶಿ
ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಪಡಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇಲ್ಲವಾದರೆ ಆ ಸರ್ಕಾರ ಯಾಕೆ ಇರಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗಿರುವ ಅನುದಾನ ತಾರತಮ್ಯ ಖಂಡಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ರಾಜ್ಯ ಸರ್ಕಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ರಾಜ್ಯಕ್ಕೆ ಅನುದಾನ ನೀಡುವ ಅಧಿಕಾರ ಹಣಕಾಸು ಆಯೋಗದ ಮುಂದಿದೆ. ಕೇಂದ್ರ ಸರ್ಕಾರದ ಕೈಯಲ್ಲಿಲ್ಲ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಾಲ ಸೀತಾರಾಮನ್ ಹೇಳಿದ್ದಾರೆ. ಕೇಂದ್ರದ ಬಳಿ ಅಧಿಕಾರವೇ ಇಲ್ಲವಾದರೆ ಆ ಸರ್ಕಾರ ಏಕೆ ಇರಬೇಕು ಎಂದರು.
ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸುವುದು ಕೇಂದ್ರ ಸರ್ಕಾರದ ಕೆಲಸ. ಈ ಪ್ರತಿಭಟನೆಯಲ್ಲಿ ರಾಜ್ಯದ ಜನತೆ ಆಯ್ಕೆ ಮಾಡಿರುವ ೧೩೮ ಶಾಸಕರು, ಪರಿಷತ್ ಸದಸ್ಯರು ಪಾಲ್ಗೊಂಡಿದ್ದಾರೆ. ನಮ್ಮ ಜನರ ಬೆವರು, ತೆರಿಗೆ ನಮ್ಮ ಹಕ್ಕು. ಕರ್ನಾಟಕಕ್ಕೆ ನ್ಯಾಯ ಸಿಗಬೇಕು. ನಮ್ಮ ಪಾಲಿನ ಹಣ ನಮಗೆ ಸಿಗಬೇಕು. ಜನರ ಋಣ ತೀರಿಸಲು, ಬಡವರಿಗೆ ನ್ಯಾಯ ಒದಗಿಸಲು, ಬರದಲ್ಲಿ ತತ್ತರಿಸಿರುವ ಜನರ ಸಂಕಷ್ಟಕ್ಕೆ ಸ್ಪಂದಿಸಲು ನಾವು ಈ ಹೋರಾಟ ನಡೆಸಿದ್ದೇವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.