ಕೇಂದ್ರಕ್ಕೆ ಅಧಿಕಾರವಿಲ್ಲದಿದ್ದರೆ ಸರ್ಕಾರ ಏಕೆ

ನವದೆಹಲಿ, ಫೆ. ೭- ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಪಡಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇಲ್ಲವಾದರೆ ಆ ಸರ್ಕಾರ ಯಾಕೆ ಇರಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗಿರುವ ಅನುದಾನ ತಾರತಮ್ಯ ಖಂಡಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ರಾಜ್ಯ ಸರ್ಕಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ರಾಜ್ಯಕ್ಕೆ ಅನುದಾನ ನೀಡುವ ಅಧಿಕಾರ ಹಣಕಾಸು ಆಯೋಗದ ಮುಂದಿದೆ. ಕೇಂದ್ರ ಸರ್ಕಾರದ ಕೈಯಲ್ಲಿಲ್ಲ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಾಲ ಸೀತಾರಾಮನ್ ಹೇಳಿದ್ದಾರೆ. ಕೇಂದ್ರದ ಬಳಿ ಅಧಿಕಾರವೇ ಇಲ್ಲವಾದರೆ ಆ ಸರ್ಕಾರ ಏಕೆ ಇರಬೇಕು ಎಂದರು.
ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸುವುದು ಕೇಂದ್ರ ಸರ್ಕಾರದ ಕೆಲಸ. ಈ ಪ್ರತಿಭಟನೆಯಲ್ಲಿ ರಾಜ್ಯದ ಜನತೆ ಆಯ್ಕೆ ಮಾಡಿರುವ ೧೩೮ ಶಾಸಕರು, ಪರಿಷತ್ ಸದಸ್ಯರು ಪಾಲ್ಗೊಂಡಿದ್ದಾರೆ. ನಮ್ಮ ಜನರ ಬೆವರು, ತೆರಿಗೆ ನಮ್ಮ ಹಕ್ಕು. ಕರ್ನಾಟಕಕ್ಕೆ ನ್ಯಾಯ ಸಿಗಬೇಕು. ನಮ್ಮ ಪಾಲಿನ ಹಣ ನಮಗೆ ಸಿಗಬೇಕು. ಜನರ ಋಣ ತೀರಿಸಲು, ಬಡವರಿಗೆ ನ್ಯಾಯ ಒದಗಿಸಲು, ಬರದಲ್ಲಿ ತತ್ತರಿಸಿರುವ ಜನರ ಸಂಕಷ್ಟಕ್ಕೆ ಸ್ಪಂದಿಸಲು ನಾವು ಈ ಹೋರಾಟ ನಡೆಸಿದ್ದೇವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.