ಕೆ.ಹೆಚ್.ಮುನಿಯಪ್ಪ ಮನವೊಲಿಸುವಲ್ಲಿ ಸಿದ್ದು ಯಶಸ್ವಿ

ಕೋಲಾರ,ಜ,೧೦-ಮುನಿಯಪ್ಪ ಮುನಿಸು ಶಮನ ಮಾಡುವಲ್ಲಿ ಸಿದ್ದು ಯಶಸ್ವಿಯಾಗಿ ಕೋಲಾರದ ಕಾರ್ಯಕ್ರಮಕ್ಕೆ ಇಬ್ಬರೂ ಒಂದೇ ಕಾರಿನಲ್ಲಿ ಪ್ರಯಾಣ ಬೆಳೆಸಿದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಸೋಮವಾರ ಬೆಳಿಗ್ಗೆ ೧೧.೩೦ ಗಂಟೆ ಸುಮಾರಿಗೆ ಕೇಂದ್ರದ ಮಾಜಿ ಸಚಿವ ಕೆ.ಹೆಚ್ ಮುನಿಯಪ್ಪರ ಬೆಂಗಳೂರಿನ ಮನೆಗೆ ಭೇಟಿ ಮಾಡಿ ಈ ದಿನ ಕೋಲಾರದಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸದೆ ಹೋದರೆ ಪಕ್ಷದ ಬಗ್ಗೆ ಜನತೆಗೆ ತಪ್ಪು ಸಂದೇಶ ಹೋಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟರು.
ಏನೇ ಗೊಂದಲಗಳಿದ್ದರೂ ಸರಿಪಡಿಸಿಕೊಳ್ಳೋಣ ಈಗ ಸಭೆಗೆ ಬನ್ನಿ ಎಂದು ಅತ್ಯಂತ ಆತ್ಮೀಯವಾಗಿ ಮನವಿ ಮಾಡಿದರು. ಕೆಲವು ಷರತ್ತುಗಳನ್ನು ಹಾಕಿದ ಕೆ.ಹೆಚ್.ಮುನಿಯಪ್ಪ ಸಭೆಗೆ ಬರಲು ಒಪ್ಪಿದರು.
ಎಐಸಿಸಿ ಹಾಗೂ ಕೆಪಿಸಿಸಿರನ್ನು ಒಳಗೊಂಡು ಕೋಲಾರ ಕಾಂಗ್ರೆಸ್‌ನಲ್ಲಿ ಇರುವ ಸಮಸ್ಯೆಗಳ ಪರಿಹಾರ ಆದಷ್ಟು ಬೇಗ ಬಗೆಹರಿಸುವುದು ನನ್ನ ಜವಾಬ್ದಾರಿ ಎಂದು ಸಿದ್ದರಾಮಯ್ಯ ಮನವರಿಕೆ ಮಾಡಿದರು.
ಕೋಲಾರ ಕ್ಷೇತ್ರಕ್ಕೆ ಸಂಬಂಧಿಸಿದವರು ಮಾತ್ರ ಪಕ್ಷದ ಜವಾಬ್ದಾರಿ ಹೊರಬೇಕು, ಮಿಕ್ಕವರು ಅವರವರ ಕ್ಷೇತ್ರಗಳ ಜವಾಬ್ದಾರಿ ನೋಡಿಕೊಳ್ಳಬೇಕು ಇತ್ಯಾದಿ ಷರತ್ತುಗಳನ್ನು ವಿಧಿಸಿದ ಕೆ.ಹೆಚ್.ಮುನಿಯಪ್ಪ ಸಭೆಯಲ್ಲಿ ಭಾಗವಹಿಸಲು ಒಪ್ಪಿದರು.
ಮಾತುಕತೆ ಫಲಪ್ರದವಾದ ಕೋಡಲೆ ಕೆ.ಹೆಚ್.ಮುನಿಯಪ್ಪರನ್ನು ಸಿದ್ದರಾಮಯ್ಯ ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಕೋಲಾರಕ್ಕೆ ಕರೆತರುತ್ತಿದ್ದಾರೆ. ಆ ಮೂಲಕ ಕೆ.ಹೆಚ್.ಮುನಿಯಪ್ಪ ಸಭೆಯಲ್ಲಿ ಭಾಗವಹಿಸುವರೆ ಇಲ್ಲವೆ ಎಂಬ ಅನುಮಾನ ಶಮನಗೊಂಡಂತಾಯಿತು.