ಕೆ. ಸುರೇಂದ್ರನ್‌ ವಿರುದ್ಧ ಪ್ರಕರಣ ದಾಖಲಿಸಲು ಕೋರ್ಟ್‌ ಅನುಮತಿ

ಕಾಸರಗೋಡು, ಜೂ.೮- ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಣ ಹಾಗೂ ಆಮಿಷ ನೀಡಿ ನಾಮಪತ್ರ ಹಿಂದೆಗೆದುಕೊಂಡ ಬಗ್ಗೆ ಬಿಎಸ್ಪಿ ಅಭ್ಯರ್ಥಿಯಾಗಿದ್ದ ಕೆ. ಸುಂದರ ಅವರ ಹೇಳಿಕೆ ಹಿನ್ನೆಲೆಯಲ್ಲಿ ಇದೀಗ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ವಿರುದ್ಧ ಪ್ರಕರಣ ದಾಖಲಿಸಲು ಕಾಸರಗೋಡು ಜಿಲ್ಲಾ ನ್ಯಾಯಾಲಯ ಪೊಲೀಸರಿಗೆ ಅನುಮತಿ ನೀಡಿದೆ.

ಎಲ್‌ಡಿಎಫ್ ಅಭ್ಯರ್ಥಿಯಾಗಿದ್ದ ವಿ.ವಿ. ರಮೇಶನ್ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿ ಕಾಸರಗೋಡು ಪ್ರಥಮ ದರ್ಜೆ ನ್ಯಾಯಾಲಯ ಅನುಮತಿ ನೀಡಿದೆ. ರವಿವಾರ ಸುಂದರ ಅವರನ್ನು ಠಾಣೆಗೆ ಕರೆಸಿ ಬದಿಯಡ್ಕ ಪೊಲೀಸರು ಮಾಹಿತಿ ಕಲೆ ಹಾಕಿದ್ದರು. ಆದರೆ ಸುರೇಂದ್ರನ್ ವಿರುದ್ಧ ಕೇಸು ದಾಖಲಿಸಿಕೊಳ್ಳಲು ನ್ಯಾಯಾಲಯದ ಅನುಮತಿ ಅಗತ್ಯ ಇತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಪೊಲೀಸರ ಅರ್ಜಿಯನ್ನು ಇಂದು ಬೆಳಗ್ಗೆ ನ್ಯಾಯಾಲಯ ತಿರಸ್ಕರಿಸಿದ್ದು, ವಿ.ವಿ. ರಮೇಶನ್ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿ ಈ ಆದೇಶ ನೀಡಿದೆ. ಸುರೇಂದ್ರನ್ ಅಲ್ಲದೆ ಇತರ ಇಬ್ಬರು ಬಿಜೆಪಿ ಸ್ಥಳೀಯ ಮುಖಂಡರ ವಿರುದ್ಧವೂ ಪ್ರಕರಣ ದಾಖಲಿಸಲು ಅನುಮತಿ ನೀಡಲಾಗಿದ್ದು, ಅಭ್ಯರ್ಥಿಯ ಅಪಹರಣ, ದಿಗ್ಬಂಧನ, ಲಂಚ ನೀಡಿ ನಾಮಪತ್ರವನ್ನು ಹಿಂಪಡೆಯಲಾಗಿದೆ ಎಂದು ರಮೇಶನ್ ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ನಾಮಪತ್ರ ಹಿಂಪಡೆಯಲು ಬಿಎಸ್ಪಿ ಅಭ್ಯರ್ಥಿಗೆ ಹಣ ನೀಡಿದ ದೂರಿನಂತೆ ಕೇರಳ ಬಿಜೆಪಿ ಘಟಕ ಅಧ್ಯಕ್ಷ ಕೆ.ಸುರೇಂದ್ರನ್ ವಿರುದ್ಧ ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚುನಾವಣೆಯನ್ನು ಬುಡಮೇಲುಗೊಳಿಸುವ ಯತ್ನ, ಅಪಹರಣ, ದಿಗ್ಬಂಧನ, ಬೆದರಿಕೆಯೊಡ್ಡಿದ ಪ್ರಕರಣಗಳನ್ನು ದಾಖಲಿಸಲಾಗು ವುದು ಎಂದು ಪೊಲೀಸರು ತಿಳಿಸಿದ್ದಾರೆ. ಇದಲ್ಲದೆ ಹಣ ತಲಪಿಸಿದ ಹಾಗೂ ಆಮಿಷವೊಡ್ಡಿದ ಮೂವರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.