ಕೆ.ಸಿ.ರೆಡ್ಡಿ ಶಿಲಾ ಪ್ರತಿಮೆ ಸ್ಥಾಪನೆಗೆ ಕ್ರಮ ವಹಿಸಲು ಅಗ್ರಹ

ಕೋಲಾರ,ಜೂ,೧: ಕೋಲಾರ ಜಿಲ್ಲೆಯ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಕೋಲಾರದ ಹೆಮ್ಮೆಯ ಪುತ್ರ ಹಾಗೂ ಕರ್ನಾಟಕ ರಾಜ್ಯದ ಪ್ರಪ್ರಥಮ ಮುಖ್ಯಮಂತ್ರಿ ದಿವಂಗತ ಕೆ.ಸಿ.ರೆಡ್ಡಿ ಅವರ ಶಿಲಾ ಪ್ರತಿಮೆಯನ್ನು ಸರ್ಕಾರದ ವತಿಯಿಂದ ಸ್ಥಾಪಿಸಬೇಕೆಂದು ಕರ್ನಾಟಕ ಬಹುಜನ ಸಂಘ ಮತ್ತು ಕರ್ನಾಟಕ ರಾಜ್ಯ ಡಾ.ಬಿ.ಆರ್.ಅಂಬೇಡ್ಕರ್ ನಾಗರೀಕ ಹಿತರಕ್ಷಣಾ ಸಂಘದ ಸಂಸ್ಥಾಪಕ ಅಧ್ಯಕ್ಷ ಬೆಗ್ಲಿಹೊಸಹಳ್ಳಿ ದಲಿತ ಕೆ.ವೆಂಕಟೇಶಪ್ಪ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.
ಮನವಿ ಪತ್ರದ ಮೂಲಕ ಮುಖ್ಯಮಂತ್ರಿಗಳಿಗೆ ತಮ್ಮ ಸಂಘಟನೆಯು ರಾಜ್ಯಾದ್ಯಂತ ಅನೇಕ ಶಾಖೆಗಳನ್ನು ಹೊಂದಿದ್ದು, ತಮ್ಮ ನೇತೃತ್ವದಲ್ಲಿ ರಾಜ್ಯಾದ್ಯಂತ ನಾಡಿನ ನೆಲ, ಜಲ, ಭಾಷೆ ಮತ್ತು ಪರಿಶಿಷ್ಟ ದಲಿತ ಸಮುದಾಯಗಳ ಹಕ್ಕುಗಳ ರಕ್ಷಣೆ ಹಾಗೂ ಸರ್ಕಾರದ ಸೌಲತ್ತುಗಳನ್ನು ಇವರುಗಳ ಮನೆ ಬಾಗಿಲಿಗೆ ತಲುಪಿಸುವಂತಹ ಜನಪರ ಹೋರಾಟಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದು, ಮುಂದೆಯೂ ಇದನ್ನು ಮುಂದುವರೆಸಲಾಗುವುದು ಎಂದರು.
ಕರ್ನಾಟಕದ ಹೆಮ್ಮೆಯ ಪ್ರಥಮ ಮುಖ್ಯಮಂತ್ರಿಯಾದ ದಿವಂಗತ ಕೆ.ಸಿ.ರೆಡ್ಡಿ ಅವರು ಕೋಲಾರ ಜಿಲ್ಲೆಯವರಾಗಿದ್ದು, ಇಂತಹ ಚರಿತ್ರಾರ್ಹ ವ್ಯಕ್ತಿಗೆ ನ್ಯಾಯ ಸಮ್ಮುತವಾಗಿ ಸಲ್ಲಬೇಕಾಗಿದ್ದ ಪ್ರಾಮುಖ್ಯತೆ ಮತ್ತು ಮನ್ನಣೆ ಸರ್ಕಾರದ ವತಿಯಿಂದ ಸಿಗುತ್ತಿಲ್ಲವೇನೋ ಎಂಬ ಅನುಮಾನ ಜಿಲ್ಲೆಯ ಜನರಲ್ಲಿ ಮೂಡುತ್ತಿದೆ.
ಇದಕ್ಕೆ ಕಾರಣ ಈವರೆಗೆ ಈ ಮಹನೀಯನ ಶಿಲಾಪ್ರತಿಮೆಗಳನ್ನು ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಸ್ಥಾಪಿಸುವ ಆಸಕ್ತಿಯನ್ನು ತೋರದೇ ಇರುವುದೇ ಮೂಲ ಕಾರಣವಾಗಿದೆ.
ಆದ ಕಾರಣ ಜನಪ್ರಿಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ತಮ್ಮ ಈ ಆಡಳಿತಾವಧಿಯಲ್ಲಾದರೂ ಕೋಲಾರ ಜಿಲ್ಲೆಯ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಸರ್ಕಾರದ ವತಿಯಿಂದ ದಿವಂಗತ ಕೆ.ಸಿ.ರೆಡ್ಡಿ ಅವರ ಶಿಲಾಪ್ರತಿಮೆಗಳನ್ನು ಸ್ಥಾಪಿಸುವ ಕೆಲಸಕ್ಕೆ ತಕ್ಷಣ ಚಾಲನೆಯನ್ನು ನೀಡಿ ಅನುಷ್ಟಾನಗೊಳಿಸಲು ಕ್ರಮ ವಹಿಸುವಂತೆ ಕೋರಿರುತ್ತಾರೆ.
ಈ ಕಾರ್ಯದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹೆಚ್.ಡಿ.ಕುಮಾರಸ್ವಾಮಿ, ಕೋಲಾರ ಜಿಲ್ಲೆಯ ಎಲ್ಲಾ ಚುನಾಯಿತ ಶಾಸಕರುಗಳು, ವಿಧಾನಪರಿಷತ್ ಸದಸ್ಯರುಗಳು, ಸಂಸದರು ಹಾಗೂ ಮಾಜಿ ಶಾಸಕ ಹಾಗೂ ವಿಧಾನಪರಿಷತ್ ಸದಸ್ಯರುಗಳನ್ನು ಮನವಿ ಪತ್ರ ಮುಖೇನ ಈ ಕುರಿತು ಸರ್ಕಾರದ ಮೇಲೆ ಪ್ರಭಾವವನ್ನು ಬೀರಿ ಶಿಲಾಪ್ರತಿಮೆ ಸ್ಥಾಪನೆಗೆ ಕೈಜೋಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ.