ಪಿರಿಯಾಪಟ್ಟಣ: ಜೂ.05:- ಪಶುಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವರಾದ ಬಳಿಕ ಸ್ವಕ್ಷೇತ್ರ ಪಿರಿಯಾಪಟ್ಟಣಕ್ಕೆ ಮೊದಲ ಬಾರಿಗೆ ಆಗಮಿಸಿದ ಸಚಿವರಾದ ಕೆ.ವೆಂಕಟೇಶ್ ಅವರನ್ನು ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಮುಖಂಡರು ಹಾಗೂ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿ ಸಂಭ್ರಮಾಚರಣೆ ಮಾಡಿದರು.
ಮೈಸೂರಿನಿಂದ ಆಗಮಿಸಿದ ಸಚಿವರನ್ನು ತಾಲೂಕಿನ ಗಡಿಭಾಗ ಕಂಪಲಾಪುರ ಬಳಿ ಪಿರಿಯಾಪಟ್ಟಣ ಹಾಗೂ ಬೆಟ್ಟದಪುರ ಬ್ಲಾಕ್ ಕಾಂಗ್ರೆಸ್ ಪಕ್ಷದ ವತಿಯಿಂದ ಸ್ವಾಗತಿಸಿ ಬೃಹತಾಕಾರದ ಗುಲಾಬಿ ಹೂವಿನ ಹಾರ ಮೈಸೂರು ಪೇಟ ಶಾಲು ಹೊದಿಸಿ ಸನ್ಮಾನಿಸಲಾಯಿತು, ಈ ವೇಳೆ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಪಕ್ಷದ ವರಿಷ್ಠರು ಹಾಗು ನೂತನ ಸಚಿವರಾದ ಕೆ.ವೆಂಕಟೇಶ್ ಪರ ಜೈಕಾರ ಕೂಗಿ ಸಂಭ್ರಮಿಸಿದರು ಬಳಿಕ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು,
ಕಂಪಲಾಪುರದಿಂದ ಪಿರಿಯಾಪಟ್ಟಣಕ್ಕೆ ಆಗಮಿಸುವ ಮಾರ್ಗ ಮಧ್ಯ ಬಸಲಾಪುರ ಗೇಟ್, ಕಿರನಲ್ಲಿ ಹಳ್ಳಿ ಗೇಟ್, ತಾತನಹಳ್ಳಿ ಗೇಟ್ ಸೇರಿದಂತೆ ಹಲವೆಡೆ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ನೂತನ ಸಚಿವರನ್ನು ಅಭಿನಂದಿಸಿದರು, ಈ ವೇಳೆ ಪಟ್ಟಣದ ಹೊರವಲಯದ ತಾತನಹಳ್ಳಿ ಗೇಟ್ ಬಳಿ ಇರುವ ಮಸೀದಿಗೆ ನೂತನ ಸಚಿವರು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ಮುಸ್ಲಿಂ ಸಮಾಜ ವತಿಯಿಂದ ಅಭಿನಂದನೆ ಸ್ವೀಕರಿಸಿದರು ಬಳಿಕ ಪಟ್ಟಣದ ಮಹಾಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ ನಡೆದ ಪಕ್ಷದ ತಾ.ಪಂ ಮಾಜಿ ಸದಸ್ಯ ಶ್ರೀನಿವಾಸ್ ಪುತ್ರ ಉದಯ್ ಕುಮಾರ್ ವಿವಾಹ ಕಾರ್ಯಕ್ರಮದಲ್ಲಿ ಸಚಿವರು ಪಾಲ್ಗೊಂಡರು.
ದೇವಾಲಯಗಳಿಗೆ ಭೇಟಿ: ಪಟ್ಟಣದ ಶಕ್ತಿ ದೇವತೆ ಶ್ರೀ ಕನ್ನಂಬಾಡಿಯಮ್ಮ ನವರ ದೇವಾಲಯಕ್ಕೆ ಸಚಿವರು ಭೇಟಿ ನೀಡಿ ಪೂಜೆ ಸಲ್ಲಿಸಿದರು ಈ ವೇಳೆ ಅರ್ಚಕರಾದ ವೇಣುಗೋಪಾಲ್ ಅವರು ನೂತನ ಸಚಿವರನ್ನು ಅಭಿನಂದಿಸಿದರು ಬಳಿಕ ಮೈಸೂರು ಮಡಿಕೇರಿ ಹೆದ್ದಾರಿಯಲ್ಲಿ ಮಂಗಳವಾದ್ಯ ಹಾಗೂ ನಗಾರಿ ಸದ್ದಿನೊಂದಿಗೆ ತೆರೆದ ವಾಹನದಲ್ಲಿ ಮೆರವಣಿಗೆ ಹೊರಟು ಮಸಣಿಕಮ್ಮ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ನಂತರ ಬಿ.ಎಂ ರಸ್ತೆಯಲ್ಲಿರುವ ಕಾಂಗ್ರೆಸ್ ಪಕ್ಷದ ಕಚೇರಿ ಬಳಿ ಆಗಮಿಸಿದರು ಈ ವೇಳೆ ಪಟ್ಟಣದ ಪುಷ್ಪ ಹಾಗೂ ಭಾರತ ಮಾತಾ ಕ್ರಿಶ್ಚಿಯನ್ ವಿದ್ಯಾಸಂಸ್ಥೆಯ ಮುಖ್ಯಸ್ಥರು ನೂತನ ಸಚಿವರನ್ನು ಸನ್ಮಾನಿಸಿದರು.
ಭರ್ಜರಿ ಊಟದ ವ್ಯವಸ್ಥೆ: ಸಚಿವರಾದ ಬಳಿಕ ಮೊದಲ ಬಾರಿಗೆ ಪಟ್ಟಣಕ್ಕೆ ಆಗಮಿಸಿದ ಕೆ.ವೆಂಕಟೇಶ್ ಅವರನ್ನು ಅಭಿನಂದಿಸಲು ತಾಲೂಕಿನ ವಿವಿದೆಡೆಯಿಂದ ಆಗಮಿಸಿದ್ದ ಸಾವಿರಾರು ಸಂಖ್ಯೆ ಕಾರ್ಯಕರ್ತರಿಗಾಗಿ ಸಸ್ಯಹಾರಿ ಹಾಗೂ ಮಾಂಸಾಹಾರಿ ಭರ್ಜರಿ ಭೋಜನಕ್ಕಾಗಿ ಕಾಂಗ್ರೆಸ್ ಪಕ್ಷದ ಕಚೇರಿ ಬಳಿ ಬೃಹತ್ ಆಕಾರದ ಶಾಮಿಯಾನ ಹಾಕಿಸಿ ಸರತಿ ಸಾಲು ಮಾಡುವ ಮೂಲಕ ಅಚ್ಚುಕಟ್ಟಾಗಿ ಊಟದ ವ್ಯವಸ್ಥೆ ಮಾಡಲಾಗಿತ್ತು ಬಳಿಕ ತಾಲೂಕಿನ ವಿವಿದೆಡೆಯಿಂದ ಆಗಮಿಸಿದ್ದವರು ನೂತನ ಸಚಿವರಿಗೆ ಶುಭ ಕೋರಿ ಅಭಿನಂದಿಸಿದರು.
ಈ ಸಂದರ್ಭ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ ವಿಜಯ್ ಕುಮಾರ್, ಕೆಪಿಸಿಸಿ ಸದಸ್ಯರಾದ ನಿತಿನ್ ವೆಂಕಟೇಶ್, ಅನಿಲ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಟಿ ಸ್ವಾಮಿ, ರೆಹಮತ್ ಜಾನ್ ಬಾಬು, ನಗರ ಘಟಕ ಅಧ್ಯಕ್ಷ ಅಶೋಕ್ ಕುಮಾರ್ ಗೌಡ, ಮುಖಂಡರಾದ ಕೆಲ್ಲೂರು ನಾಗರಾಜ್, ಬಿ.ಜೆ ಬಸವರಾಜ್, ಭುಜಂಗ, ಹೊಲದಪ್ಪ, ವಕೀಲ ಸುಧೀಶ್, ಮುಕೇಶ್ ಕುಮಾರ್, ಪಿ.ಎನ್ ಚಂದ್ರಶೇಖರ್, ಸಂತೋಷ್, ಆವರ್ತಿ ಚಂದ್ರಶೇಖರ್, ಶಿವಯೋಗ, ಪಿ.ಕೆ ಸುರೇಶ್, ಮಂಜು ಆಯಿತನಹಳ್ಳಿ, ಮಲ್ಲಣ್ಣ, ಲೋಹಿತ್, ಸಣ್ಣ ಸ್ವಾಮಿಗೌಡ, ಪುಟ್ಟರಾಜು, ಅಸ್ಲಾಂ ಪಾಷಾ, ಶಿವಕುಮಾರ್, ಶಫಿ ಅಹಮದ್, ಮಹೇಂದ್ರ, ನಂದೀಶ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಪಕ್ಷದ ಮುಖಂಡರು ಕಾರ್ಯಕರ್ತರು ಇದ್ದರು.