
ಸಂಜೆವಾಣಿ ವಾರ್ತೆಕೂಡ್ಲಿಗಿ. ಆ 14 :- ತಾಲೂಕಿನ ಗಡಿಭಾಗದ ಗ್ರಾಮವಾದ ಕೆ.ರಾಯಾಪುರದಲ್ಲಿ ದಲಿತ ಕೇರಿಗೆ ಹೋಗಿ ಬರುವ ದಾರಿ ಸಮಸ್ಯೆ ಉಲ್ಬಣಿಸಿದ್ದು, ಇದನ್ನು ಬಗೆಹರಿಸಿ ಗ್ರಾಮದ ದಲಿತರಿಗೆ ನ್ಯಾಯ ಒದಗಿಸಬೇಕೆಂದು ದಲಿತ ಸಂಘರ್ಷ ಸಮಿತಿಯ ವಿಜಯನಗರ ಜಿಲ್ಲಾ ಘಟಕದ ಸಂಚಾಲಕ ಎಸ್ ದುರುಗೇಶ ಹಾಗೂ ಪದಾಧಿಕಾರಿಗಳು ಸಂಬಂದಿಸಿದ ಇಲಾಖೆಗೆ ಆಗ್ರಹಿಸಿದ್ದಾರೆ.ದಾರಿ ಸಮಸ್ಯೆ ಕುರಿತಂತೆ ತಾಲೂಕಿನ ಕೆ.ರಾಯಾಪುರ ಗ್ರಾಮದಲ್ಲಿ ದಲಿತ ಮುಖಂಡರೊಂದಿಗೆ ಶನಿವಾರ ಸಭೆ ನಡೆಸಿ ಮಾತನಾಡುತ್ತಾ ಕೆ.ರಾಯಾಪುರದ ಗ್ರಾಮದ ಎಲ್ಲಾ ಸಮುದಾಯದವರು ಅಣ್ಣ ತಮ್ಮಂದಿರಿಗೂ ಮಿಗಿಲಾಗಿ ವಾಸಮಾಡುತ್ತಿದೆ ಇತ್ತೀಚೆಗೆ ಕೆಲವರು ದಲಿತ ಕೇರಿಗೆ ಹೋಗುವ ದಾರಿಗೆ ಸಮಸ್ಯೆ ಮಾಡಿರುವುದು ಅಲ್ಲಿನ ದಲಿತರಿಗೆ ತೊಂದರೆಯಾಗಿದೆ. ಗ್ರಾಮದ ದಲಿತರ ಪರವಾಗಿ ನಾವು ಕಾನೂನು ಹೋರಾಟಕ್ಕೂ ಸಿದ್ಧವಿದ್ದೇವೆ. ಆದರೂ, ಸೌಹಾರ್ದಯುತವಾಗಿ ಗ್ರಾಮದ ಜನರು ಇರಬೇಕೆಂಬ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತು ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ದಲಿತರ ದಾರಿ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲವಾದರೆ ತಾಲೂಕಾದ್ಯಂತ ಇರುವ ದಸಂಸ ಪದಾಧಿಕಾರಿಗಳು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ಕಾಂಗ್ರೆಸ್ ಎಸ್ಸಿ ಮಹಿಳಾ ಮೋರ್ಚಾದ ವಿಜಯನಗರ ಜಿಲ್ಲಾಧ್ಯಕ್ಷೆ ಗುಡೇಕೋಟೆಯ ವಿಶಾಲಾಕ್ಷಿ ಎಂ.ರಾಜಣ್ಣ ಮಾತನಾಡಿ, ಕೆ.ರಾಯಾಪುರದಲ್ಲಿರುವ ದಲಿತರ ಕೇರಿಗೆ ಹೋಗುವ ದಾರಿ ಸಮಸ್ಯೆಯನ್ನು ಯಾವುದೇ ಗಲಾಟೆ ಗದ್ದಲಕ್ಕೆ ಆಸ್ಪದವಾಗದಂತೆ ಬಗೆಹರಿಸಿಕೊಳ್ಳೋಣ. ಈ ಬಗ್ಗೆ ಅಧಿಕಾರಿಗಳಿಗೆ ಮೊದಲು ತಿಳಿಸುತ್ತೇವೆ. ಗ್ರಾಮದ ಎಲ್ಲಾ ಸಮುದಾಯದವರು ಪರಸ್ಪರ ಸಹೋದರರಂತೆ ಬಾಳೋಣ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಕಂದಗಲ್ಲು ಪರಶುರಾಮ, ಜಿಲ್ಲಾ ಖಜಾಂಚಿ ಮಾಕನಡುಕು ಕುಮಾರ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಗೆದ್ದಲಗಟ್ಟೆ ಹನುಮೇಶ್, ಸಿದ್ದಾಪುರ ಡಿ.ಎಂ.ಈಶ್ವರಪ್ಪ, ಕಾನಮಡುಗು ದುರುಗಪ್ಪ, ತಾಲೂಕು ಸಂಚಾಲಕ ಕಾನಹೊಸಹಳ್ಳಿ ಎಳನೀರು ಗಂಗಣ್ಣ ಸೇರಿ ಕೆ.ರಾಯಾಪುರ ಗ್ರಾಮದ ದಲಿತ ಮುಖಂಡರು ಭಾಗವಹಿಸಿದ್ದರು.