
ಸಂಜೆವಾಣಿ ವಾರ್ತೆ
ದಾವಣಗೆರೆ. ಸೆ.೬; ಯಕ್ಷಗಾನ ಕಲಾವಿದ ಕೆ.ರಾಘವೇಂದ್ರ ನಾಯರಿಯವರಿಗೆ ವಿಜಯನಗರ ಜಿಲ್ಲೆಯ ಹಗರಿಬೊಬ್ಬನಹಳ್ಳಿ ತಾಲೂಕಿನ ಹಂಪಾಪಟ್ಟಣದ ಜನನಿ ಸೇವಾ ಮತ್ತು ಸಾಂಸ್ಕೃತಿಕ ಸಂಘ(ರಿ.) ಮತ್ತು ಜನನಿ ಸೇವಾ ಟ್ರಸ್ಟ್ (ರಿ) ನ ವತಿಯಿಂದ ನೀಡಲಾಗುವ 2023 ರ ಸಾಲಿನ “ಜನನಿ ಯಕ್ಷಗಾನ ರತ್ನ” ರಾಜ್ಯ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.ಸಮಾರಂಭದ ದಿವ್ಯ ಸಾನಿಧ್ಯವನ್ನು ಸಂಡೂರಿನ ಶ್ರೀ ಪ್ರಭುದೇವರ ಸಂಸ್ಥಾನ ವಿರಕ್ತ ಮಠದ ಪ್ರಭು ಮಹಾಸ್ವಾಮೀಜಿಯವರು ವಹಿಸಿದ್ದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಹಾಯಕ ಕುಲ ಸಚಿವ ಹಾಗೂ ಲೇಖಕ ಎಂ.ಎಂ.ಶಿವಪ್ರಕಾಶ್ ಸಮಾರಂಭವನ್ನು ಉದ್ಘಾಟಿಸಿ ಸಾಧಕರಿಗೆ ನೀಡುವ ಪ್ರಶಸ್ತಿಗಳು ಅವರ ಸಾಮಾಜಿಕ ಜವಾಬ್ದಾರಿಯನ್ನು ಹೆಚ್ಚಿಸುತ್ತವೆ. ಯಾವುದೇ ಲಾಭಿಯಿಲ್ಲದೇ ನೈಜವಾಗಿ ಸಾಧನೆಯನ್ನು ಗುರುತಿಸಿ ನೀಡಿದಾಗ ಪ್ರಶಸ್ತಿಯ ಗೌರವ ಹೆಚ್ಚಿಸುತ್ತದೆ. ಹಂಪಾಪಟ್ಟಣವು ರಾಜ್ಯದಲ್ಲೇ ಸಾಂಸ್ಕೃತಿಕ ಗ್ರಾಮವಾಗಿ ಹೆಸರು ಮಾಡಿದೆ. ಇಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ರಾಜ್ಯ ಮಟ್ಟದಲ್ಲಿ ಸದ್ದು ಮಾಡುತ್ತವೆ. ಇಲ್ಲಿನ ಅನೇಕ ಕಲಾವಿದರು ರಾಜ್ಯ ಮಟ್ಟದ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಹಲವಾರು ಕಲಾವಿದರು, ಸಾಹಿತಿಗಳು, ಹೋರಾಟಗಾರರು, ಪತ್ರಕರ್ತರು ಮತ್ತು ವಿಜ್ಞಾನಿಗಳನ್ನು ನಾಡಿಗೆ ನೀಡಿದ ಈ ಗ್ರಾಮದ ಮಣ್ಣಿನ ಗುಣ ವೈಶಿಷ್ಟ್ಯಪೂರ್ಣವಾಗಿದೆ ಎಂದು ಬಣ್ಣಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಟ್ರಸ್ಟ್‌ನ ಗೌರವಾಧ್ಯಕ್ಷ ಆರ್.ಖಾಜಾ ಹುಸೇನ್ ಸಾಬ್ ವಹಿಸಿದ್ದರು ಹಾಗೂ ಟ್ರಸ್ಟ್‌ನ ಅಧ್ಯಕ್ಷ ಎ.ಕೇಶವಮೂರ್ತಿ, ತಾಲೂಕು ಕರವೇ ಅಧ್ಯಕ್ಷ ಬುಡ್ಡಿ ಬಸವರಾಜ್, ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ಪಿ.ಎಂ.ಮಂಜುನಾಥ್, ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಬಿ.ಆನಂದಮೂರ್ತಿ ಹಾಗೂ ಪದಾಧಿಕಾರಿಗಳಾದ ವಿಶ್ವನಾಥ್ ಬಿಲ್ಲವ, ಕೆ.ಶಶಿಶೇಖರ್, ರಾಜ್ಯ ಬೀಜ ನಿಗಮದ ಅಧಿಕಾರಿ ನಾಗರಕಟ್ಟೆ ಎಸ್.ರಾಜೇಂದ್ರ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.ಸಮಾರಂಭದಲ್ಲಿ 8 ಸಾಧಕರಿಗೆ ಜನನಿ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.