ಕೆ.ಪಿ.ಎಸ್.ಸಿ.ಯಲ್ಲಿ ನೆನೆಗುದಿಗೆ ಬಿದ್ದಿರುವ 666 ಹುದ್ದೆಗಳ ಅಂತಿಮ ಪಟ್ಟಿ ಪ್ರಕಟ ಸಮಿತಿಯ ಹೋರಾಟಕ್ಕೆ ಸ್ಪಂದನೆ : ಲಕ್ಷ್ಮಣ ದಸ್ತಿ

ಕಲಬುರಗಿ:ಫೆ.1: ಕೆ.ಪಿ.ಎಸ್.ಸಿ.ಯಲ್ಲಿ ಸುಮಾರು ದಿನಗಳಿಂದ ಗ್ರಾಮೀಣ ಕುಡಿಯುವ ನೀರು ಮತು ನೈರ್ಮಲ್ಯ ಇಲಾಖೆ, ನಗರ ಯೋಜನೆ ಇಲಾಖೆ, ಜಲ ಸಂಪನ್ಮೂಲ ಇಲಾಖೆ, ಕಾರ್ಮಿಕ ಇಲಾಖೆ, ಪೌರಾಡಳಿತ ಇಲಾಖೆ, ರೇಶ್ಮೆ ಇಲಾಕೆಯ ಸುಮಾರು 666 ಹುದ್ದೆಗಳ ಮೊದಲನೇ ಪಟ್ಟಿ ಪ್ರಕಟಿಸಿ ಅಂತಿಮ ಪಟ್ಟಿಗೆ ಸುಮಾರು ದಿನಗಳಿಂದ ನೆನೆಗುದಿಗೆ ಹಾಕಲಾಗಿತ್ತು. ಸದರಿ ವಿಷಯದ ಬಗ್ಗೆ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಗೆ ಕಳೆದ ಎರಡು ತಿಂಗಳು ಪೂರ್ವದಲ್ಲಿ ಮನವರಿಕೆ ಮಾಡಿರುವಂತೆ ಬೃಹತ್ ಸಭೆಯನ್ನು ನಡೆಸಿ ಕಲ್ಯಾಣ ಕರ್ನಾಟಕ ಸಚಿವರಿಗೆ ಹೋರಾಟದ ಮೂಲಕ ಪತ್ರ ಸಲ್ಲಿಸಲಾಗಿತ್ತು. ಅದರಂತೆ ಕೆ.ಪಿ.ಎಸ್.ಸಿ. ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ಅಂತಿಮ ಪಟ್ಟಿ ಪ್ರಕಟಿಸಲು ನಿರಂತರವಾಗಿ ಮನವರಿಕೆ ಮಾಡಿರುವಂತೆ ಕೆ.ಪಿ.ಎಸ್.ಸಿ.ಯಿಂದ ಆಯಾ ಇಲಾಖೆಗಳ 666 ಹುದ್ದೆಗಳ ಅಂತಿಮ ಪಟ್ಟಿ ಪ್ರಕಟವಾಗಿರುವುದು ಸಂತಸ ತಂದಿದೆ. ಸದರಿ ರಾಜ್ಯಮಟ್ಟದ ಮೆರಿಟ್ ಆಯ್ಕೆ ಹುದ್ದೆಗಳಲ್ಲಿ 371ನೇ(ಜೆ) ಕಲಂ ಮೀಸಲಾತಿಯಂತೆ ನೂರಾರು ಜನ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳು ಆಯ್ಕೆಯಾಗಿರುವುದು ಸಂತೋಷದ ವಿಷಯವಾಗಿದೆ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು ಸಂತಸ ವ್ಯಕ್ತಪಡಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಶುಭ ಕೋರಿದ್ದಾರೆ.
ಈ ಮಧ್ಯೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಡಿ ಆಯ್ಕೆಯಾದ ಎ.ಇ./ ಜೆ.ಇ. ಹುದ್ದೆಗಳ ನೇಮಕಾತಿ ಸುತ್ತೋಲೆಗೆ ಪ್ರಶ್ನಿಸಿ ಕೆ.ಎ.ಟಿ.ಯಲ್ಲಿ ಕೆಲವು ಅಭ್ಯರ್ಥಿಗಳು ದಾವೆ ಹೂಡಿದ್ದರು. ಸರಕಾರದ ಕಾನೂನು ಇಲಾಖೆಯ ನಿರ್ಲಕ್ಷ ಧೋರಣೆಯಿಂದ ಕೆ.ಎ.ಟಿ.ಯಲ್ಲಿ ನೇಮಕಾತಿ ಸುತ್ತೋಲೆ ರದ್ದುಪಡಿಸಿ ಆದೇಶ ಹೊರಡಿಸಿತು. ಕೆ.ಎ.ಟಿ. ಆದೇಶ ಪ್ರಶ್ನಿಸಿ ಫಲಾನುಭವಿ ಅಭ್ಯರ್ಥಿಗಳು ಉಚ್ಛ ನ್ಯಾಯಾಲಯದಲ್ಲಿ ದಾವೆಹೂಡಿದ್ದರು ಉಚ್ಛ ನ್ಯಾಯಾಲಯ ನೇಮಕಾತಿ ಸುತ್ತೋಲೆಯನ್ನು ಎತ್ತಿ ಹಿಡಿದು ಆಯ್ಕೆಯಾದ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸಲು ಆದೇಶಿಸಿತ್ತು. ಆದರೆ ಕೆ.ಪಿ.ಎಸ್.ಸಿ.ಯಲ್ಲಿ ಅಧ್ಯಕ್ಷರು ಮತು ಕಾರ್ಯದರ್ಶಿ ಹಾಗೂ ಆಡಳಿತ ಮಂಡಳಿಯ ಸಮನ್ವಯತೆಯ ಕೊರತೆಯಿಂದ ಆಯಾ ಇಲಾಖೆಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲು ವಿನಾಕಾರಣ ವಿಳಂಬವಾಗಿತ್ತು. ಇದಕ್ಕೆ ಪ್ರತಿಭಟಿಸಿ ಬೆಂಗಳೂರಿನಲ್ಲಿ ಕಲ್ಯಾಣ ಕರ್ನಾಟಕದ ಫಲಾನುಭವಿ ಅಭ್ಯರ್ಥಿಗಳು ಸೇರಿದಂತೆ, ಆಯಾ ಭಾಗದ ನೂರಾರು ಜನ ಅಭ್ಯರ್ಥಿಗಳು ಹೋರಾಟ ಮಾಡಿದರು. ಏತನ್ಮಧ್ಯೆ ಕಾನೂನು ಸಚಿವರಾದ ಎಚ್.ಕೆ. ಪಾಟೀಲರು 371ನೇ(ಜೆ) ಕಲಮಿನಡಿ ಮೆರಿಟ್ ಆಧಾರದಂತೆ ಆಯ್ಕೆಯಾದ ಹುದ್ದೆಗಳಿಗೆ ತಡೆಯಲು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರಕ್ಕೆ ಸಮಿತಿ ಸೇರಿದಂತೆ ಮಾಧ್ಯಮದವರೂ ಸಹ ಇದಕ್ಕೆ ಬಲವಾಗಿ ಖಂಡಿಸಿರುವುದು ಇಲ್ಲಿ ಸ್ಮರಿಸಬಹುದಾಗಿದೆ.
ಫಲಾನುಭವಿ ಆಯ್ಕೆಯಾದ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸಲು ಸಮಿತಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐ.ಟಿ.ಬಿ.ಟಿ. ಸಚಿವರಾದ ಪ್ರಿಯಾಂಕ್ ಖರ್ಗೆ ಇವರಿಗೆ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ ಪಾಟೀಲವರಿಗೆ, ಕೆ.ಪಿ.ಎಸ್.ಸಿ. ಅಧ್ಯಕ್ಷರಿಗೆ, ಕಾರ್ಯದರ್ಶಿಗಳಿಗೆ ನಿರಂತರವಾಗಿ ವಿಶೇಷ ಮನವರಿಕೆ ಮಾಡಿತು. ಅದರಂತೆ ಸಮಿತಿ ಫಲಾನುಭವಿ ಅಭ್ಯರ್ಥಿಗಳಿಗೆ ಧೈರ್ಯ ತುಂಬಿ ಕಳೆದ ಎರಡು ತಿಂಗಳಿನಿಂದ ನಿರಂತರವಾಗಿ ನಡೆಸಿರುವ ಹೋರಾಟದ ಫಲಸ್ವರೂಪ ರಾಜ್ಯದ ಅದರಲ್ಲೂ ವಿಶೇಷವಾಗಿ ಕಲ್ಯಾಣ ಕರ್ನಾಟಕದ ಅರ್ಹ ಮೆರಿಟ್ ಅಭ್ಯರ್ಥಿಗಳಿಗೆ 371ನೇ(ಜೆ) ಕಲಂ ಮೀಸಲಾತಿಯಂತೆ ನ್ಯಾಯ ಸಿಕ್ಕಿರುವುದು ಸ್ವಾಗತಾರ್ಹವಾದ ವಿಷಯವಾಗಿದೆ. ಈ ವಿಷಯಕ್ಕೆ ಸ್ಪಂದಿಸಿದ ಸಚಿವರಾದ ಪ್ರಿಯಾಂಕ್ ಖರ್ಗೆಯವರಿಗೆ ಡಾ. ಶರಣಪ್ರಕಾಶ ಪಾಟೀಲವರಿಗೆ ಮತ್ತು ಕೆ.ಪಿ.ಎಸ್.ಸಿ. ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಆಡಳಿತ ಮಂಡಳಿಗೆ ಅಭಿನಂದನೆಗಳು ಸಲ್ಲಿಸುತ್ತದೆ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು ಪತ್ರಿಕಾಪ್ರಕಟಣೆಯ ಮೂಲಕ ತಿಳಿಸಿದ್ದಾರೆ.