ಕೆ.ಜಿ.ಎಫ್.ಆರ್.ಟಿ.ಓ ಕಚೇರಿಗೆ ಮೂಲಭೂತ ಸೌಲಭ್ಯ ಕಲ್ಪಿಸಿ

ಕೋಲಾರ,ಜೂ.೧೫- ಕೆಜಿಎಫ್ ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ಸಾರ್ವಜನಿಕರಿಗೆ ಅಗತ್ಯ ಮೂಲಭೂತ ಸೌಲಭ್ಯವನ್ನು ಸರ್ಕಾರ ಒದಗಿಸಬೇಕು ಎಂದು, ನಮ್ಮ ಕೋಲಾರ ರೈತ ಸಂಘದ ಮುಖಂಡರು ಆರ್‌ಟಿಓ ಅಧಿಕಾರಿ ಆನಂದ್‌ಕುಮಾರ್‌ಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಮ್ಮ ಕೋಲಾರ ರೈತ ಸಂಘದ ಜಿಲ್ಲಾಧ್ಯಕ್ಷ ಕೋಟಿಗಾನಹಳ್ಳಿ ಗಣೇಶ್ ಗೌಡ ಮಾತನಾಡಿ, ಜಿಲ್ಲೆಯ ಮಾಲೂರು, ಬಂಗಾರಪೇಟೆ ಕೆ ಜಿ ಎಫ್ ಭಾಗದ ಜನರು ಆರ್‌ಟಿಓ ಕಚೇರಿಗೆ ಬರುತ್ತಾರೆ.ಆದರೆ ಬರುವ ಜನರಿಗೆ ಕೆಜಿಎಫ್ ಕಚೇರಿಯಲ್ಲಿ ಸೌಲಭ್ಯಗಳು ವಂಚಿತವಾಗಿದ್ದು, ನೂತನ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್ ಅವರು ಗಮನಹರಿಸುವ ನಿಟ್ಟಿನಲ್ಲಿ ಕೆಜಿಎಫ್ ಆರ್‌ಟಿಓ ಕಚೇರಿಯನ್ನು ಅಭಿವೃದ್ಧಿಪಡಿಸಬೇಕೆಂದು ಒತ್ತಾಯಿಸಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ರಾತ್ರಿಯ ವೇಳೆಯಲ್ಲಿ ಗಣಿ ಮಾಲೀಕರು ಹಾಗೂ ಟಿಪ್ಪರ್ ವಾಹನ ಚಾಲಕರು ಜಿಲ್ಲಾಡಳಿತದ ನೀಡಿರುವ ಮಾನದಂಡಗಳನ್ನು ಉಲ್ಲಂಘಿಸಿ ಮನಸ್ಸಿಗೆ ಬಂದಂತೆ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿ ತಮ್ಮ ಕಾರ್ಯ ಪ್ರವೃತ್ತಿಯನ್ನು ಮುಂದುವರಿಸಿದ್ದಾರೆ ಎಂದು ದೂರಿದರು. ಮಾಲೂರು ತಾಲೂಕಿನಲ್ಲಿ ಕಲ್ಲು ಗಣಿಗಾರಿಕೆ ಹಾಗೂ ಕ್ವಾರಿಯಲ್ಲಿ ಬಳಕೆಯಾಗುತ್ತಿರುವ ಟಿಪ್ಪರ್‌ಗಳು ಹಾಗೂ ಲಾರಿಗಳು ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿ, ಮಿತಿ ಮೀರಿದ ಭಾರವನ್ನು ಹೊರುತ್ತಿರುವುದರಿಂದ ರಸ್ತೆಗಳು ಹಾಳಾಗಿವೆ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.
ಇನ್ನು ಟಿಪ್ಪರ್ ಲಾರಿಗಳು ಮತ್ತು ಜೆಸಿಬಿಗಳ ವಾಹನದ ಎಫ್‌ಸಿ, ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲದ ವಾಹನಗಳನ್ನು ಓಡಾಟ ಮಾಡುತ್ತಿದೆ. ಇಂತಹ ವಾಹನಗಳು ಯಾವುದೇ ಸಮಯದಲ್ಲಿ ಮಾಡುವ ಅನಾಹುತಗಳಿಗೆ ಯಾರು ಎಂದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಶಾಲಾ ಕಾಲೇಜುಗಳ ಆಡಳಿತ ಮಂಡಳಿಯ ವಾಹನಗಳು ಸುಸ್ಥಿತಿಯಲ್ಲಿ ಇರುವುದಿಲ್ಲ. ಕೆಲವೊಂದು ಶಾಲಾ ಆಡಳಿತ ಮಂಡಳಿಯವರ ವಾಹನಗಳನ್ನು ಖಾಸಗಿ ಅವರಿಂದ ಗುತ್ತಿಗೆ ಆಧಾರದ ಮೇಲೆ ವಾಹನಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇದು ಸಹ ಅಪಾಯಕಾರಿಯ ಸಂಗತಿಯಾಗಿದೆ. ಕೆಲವೊಂದು ವಾಹನಗಳ ಮಾಲೀಕರು ಹೊರ ರಾಜ್ಯಗಳಿಂದ ವಾಹನಗಳನ್ನು ಕಡಿಮೆ ದರದಲ್ಲಿ ಖರೀದಿಸಿ ಬಳಕೆ ಮಾಡುತ್ತಿದ್ದಾರೆ.ಈ ವಾಹನಗಳು ಸುಸ್ಥಿತಿಯಲ್ಲಿರುವುದಿಲ್ಲ. ಇಂತಹ ವಾಹನಗಳನ್ನು ಪತ್ತೆ ಮಾಡ ಬೇಕು ಇಲ್ಲದೆ ಹೋದರೆ ನಮ್ಮ ಕೋಲಾರ ರೈತ ಸಂಘದಿಂದ ಹೋರಾಟವನ್ನು ಮಾಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ನಿಯೋಗದಲ್ಲಿ ನಮ್ಮ ಕೋಲಾರ ರೈತ ಸಂಘದ ಮುಖಂಡರಾದ ಕೆಸಿಪಿ ನಾಗರಾಜ್, ಕೆಂಬೋಡಿ ಕೃಷ್ಣೇಗೌಡ, ಕಾಮಧೇನಹಳ್ಳಿ ವೆಂಕಟಾಚಲಪತಿ ಇದ್ದರು.