ಕೆ.ಎಸ್.ಆರ್.ಟಿ.ಸಿ ಬಸ್ ಸೌಕರ್ಯಕ್ಕಾಗಿ ಮನವಿ

ಚಿತ್ರದುರ್ಗ.ಸೆ.೧೭; ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಹೊಸದುರ್ಗ ತಾಲ್ಲೂಕು, ದೊಡ್ಡಕಿಟ್ಟದಹಳ್ಳಿ ಅಂಚೆ, ನಾಕಿಕರೆ ಗ್ರಾಮದ ವಾಸಿಯಾದ ಮೂಡಲಗಿರಿ.ಆರ್ ಮತ್ತು ಎನ್.ಟಿ.ಶಿವಮೂರ್ತಿ  ಜಿಲ್ಲಾಧಿಕಾರಿಗೆ  ಮನವಿ ಸಲ್ಲಿಸಿದರು. 
ನಾಕಿಕೆರೆ, ದೊಡ್ಡಕಿಟ್ಟದಹಳ್ಳಿ, ಹಾಲೇನಹಳ್ಳಿ, ಬೂದಿಪುರ ಗ್ರಾಮದಿಂದ ಪ್ರತಿನಿತ್ಯ ಶಾಲಾ ವಿದ್ಯಾರ್ಥಿಗಳು 7 ರಿಂದ 8 ಕಿ.ಮೀ ದೂರ ಹೊಳಲ್ಕೆರೆ ತಾಲ್ಲೂಕಿನ ಉಪ್ಪರಿಗೇನಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಸುಮಾರು 90 ರಿಂದ 100 ವಿದ್ಯಾರ್ಥಿಗಳು ಶಾಲೆಗೆ ಹೋಗುತ್ತಿದ್ದು ಹಾಗೂ 8ನೇ ತರಗತಿಯಿಂದ ದ್ವಿತೀಯ ಪಿಯುಸಿ ವರೆಗೆ ವಿದ್ಯಾಭ್ಯಾಸ ಮಾಡುತ್ತಿದ್ದು, ಇವರುಗಳಿಗೆ ಓಡಾಡಲು ಸರಿಯಾದ ಸಾರಿಗೆ ಸೌಕರ್ಯ ಇರುವುದಿಲ್ಲವೆಂದು ಮಾನ್ಯರಿಗೆ ಮನವಿ ಮಾಡಿದರು. ಶಾಲಾ ಆರಂಭ 9 ಗಂಟೆಗೆ ಇದ್ದರೆ ವಿದ್ಯಾರ್ಥಿಗಳು ಬೆಳಿಗ್ಗೆ 7 ಗಂಟೆಗೆ ಮನೆಯಿಂದ ನಡೆದುಕೊಂಡು ಹೋಗಬೇಕಾಗುತ್ತದೆ. ಅವರಿಗೆ ಸರಿಯಾದ ಸಮಯಕ್ಕೆ ತಮ್ಮ ಕಾರ್ಯಕಲಾಪಗಳನ್ನು ನೆರವೇರಿಸಲು ಆಗುತ್ತಿಲ್ಲ ಹಾಗೂ ಸುಮಾರು ದೂರ ನಡೆದುಕೊಂಡು ಹೋಗುವುದರಿಂದ ವಿದ್ಯಾರ್ಥಿಗಳಿಗೆ ಬಹಳ ಸುಸ್ತಾಗಿ, ಪಾಠ ಪ್ರವಚನ ಕೇಳಲು ಸಹ ಆಸಕ್ತಿ ಇರುವುದಿಲ್ಲವೆಂದು ತಮ್ಮ ಊರಿನ ವಿದ್ಯಾರ್ಥಿಗಳ ಕಷ್ಟಗಳನ್ನು ವಿವರಿಸುತ್ತಾ, ಮಾನ್ಯ ಜಿಲ್ಲಾಧಿಕಾರಿಗಳು, ಚಿತ್ರದುರ್ಗ ಇವರಿಗೆ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿಕೊಡುವಂತೆ ಮನವಿ ಸಲ್ಲಿಸಿದರು.