ಕೆ.ಎಸ್.ಆರ್.ಟಿ.ಎಸ್ ಎಂದು ನಾಮಕರಣ ಮಾಡಿ: ಕರವೇ ಹರೀಶ್

ಚಿತ್ರದುರ್ಗ.ಜೂ.೫; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹೆಸರಿಗೆ ಪರ್ಯಾಯವಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಾರಿಗೆ ಸೇವೆ ಎಂಬ ಹೆಸರನ್ನು ನಾಮಕರಣ ಮಾಡಿ, ಕನ್ನಡಿಗರ ಅಸ್ಮಿತೆ, ಸ್ವಾತಂತ್ರ‍್ಯ ಹೋರಾಟ, ಹುತಾತ್ಮ ವೀರ ಕನ್ನಡಿಗ ಸಂಗೊಳ್ಳಿ ರಾಯಣ್ಣನವರಿಗೆ ಗೌರವ ಸಲ್ಲಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ರಾಜ್ಯಾಧ್ಯಕ್ಷರಾದ ಕರವೇ ಹರೀಶ್ ಮನವಿ ಮಾಡಿದ್ದಾರೆ. ಕರವೇಯುವಸೇನೆಯ ಜೂಮ್ ಡಿಜಿಟಲ್ ಮೀಟಿಂಗ್‌ನಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆ.ಎಸ್.ಆರ್.ಟಿ.ಸಿ.)ಯ ಹೆಸರು ನ್ಯಾಯಾಲಯದ ಆದೇಶದಂತೆ ಕೇರಳ ರಾಜ್ಯದ ಪಾಲಾಗಿದೆ. ಕರ್ನಾಟಕ ಸಾರಿಗೆ ಸಂಸ್ಥೆಗೆ ಪರ್ಯಾಯ ಹೆಸರು ನಾಮಕರಣ ಮಾಡಲು ಚರ್ಚೆಗಳು ನಡೆಯುತ್ತಿದೆ. ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಗೆ ಕನ್ನಡಿಗರ ಅಸ್ಮಿತೆ, ಸ್ವಾತಂತ್ರ‍್ಯ ಹೋರಾಟ, ಹುತಾತ್ಮ ವೀರ ಕನ್ನಡಿಗ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಹೆಸರಿನೊಂದಿಗೆ, ಪೂರಕವಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಟ್ರಾನ್ಸ್ಪೋರ್ಟ್ ಸರ್ವೀಸ್ (ಕೆ.ಎಸ್.ಆರ್.ಟಿ.ಎಸ್) ಎಂದು ಮಾಡುವುದರೊಂದಿಗೆ ಅಲ್ಪ ಬದಲಾವಣೆಯೊಂದಿಗೆ ಹೆಸರನ್ನು ಉಳಿಸಿಕೊಂಡು ಜೊತೆಗೆ ಸಂಗೊಳ್ಳಿ ರಾಯಣ್ಣನವರಿಗೆ ಗೌರವವನ್ನು ಸಲ್ಲಿಸಿದಂತಾಗುತ್ತದೆ.  ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರು ನಿರ್ಧಾರ ಮಾಡಿ, ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿರುವ ಕೆ.ಎಸ್.ಆರ್.ಟಿ.ಸಿ. (ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ) ಹೆಸರಿಗೆ ಪರ್ಯಾಯವಾಗಿ ಕೆ.ಎಸ್.ಆರ್.ಟಿ.ಎಸ್. (ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಾರಿಗೆ ಸೇವೆ) ಎಂದು ನಾಮಕರಣ ಮಾಡುವಂತೆ ಮನವಿ ಮಾಡಿದರು. ಖಜಿಟಲ್ ಮೀಟಿಂಗ್ ನಲ್ಲಿ ಸಂಗೊಳ್ಳಿ ರಾಯಣ್ಣ ಯುವ ಜಾಗೃತಿಯ ಮಧ್ಯ ಕರ್ನಾಟಕ ಅಧ್ಯಕ್ಷ ಜಗದೀಶ್, ರಾಜ್ಯ ಉಪಾಧ್ಯಕ್ಷ ಮಾಲತೇಶ್ ಅರಸ್ ಉಪಸ್ಥಿತರಿದ್ದು ಸರ್ಕಾರಕ್ಕೆ ಮನವಿ ಮಾಡಿದರು.