ಕೆ.ಆರ್.ಸಿ. ನಿಯಮ ಉಲ್ಲಂಘಿಸಿ ಗ್ರಾಹಕರಿಗೆ ಜೆಸ್ಕಾಂ ನಿಂದ ವಂಚನೆ:ಆರೋಪ

ಬಳ್ಳಾರಿ, ಜ.07: ಕೆ.ಆರ್.ಸಿ. 10ನೇ ಒಪ್ಪಂದದ ನಿಯಮಗಳನ್ನು ಉಲ್ಲಂಘನೆ ಮಾಡಿ ಜೆಸ್ಕಾಂ ಗ್ರಾಹಕರನ್ನು ವಂಚನೆ ಮಾಡುತ್ತಿದೆ ಎಂದು ವಿದ್ಯುತ್ ಗುತ್ತಿಗೆದಾರರು ಆರೋಪಿಸಿದ್ದಾರೆ.
ಜನರು ನೀರು, ವಿದ್ಯುತ್ ಮೊದಲಾದ ಸೌಲಭ್ಯಗಳಿಂದ ಅಭಿವೃದ್ಧಿ ಪಡಿಸಿದ ಮತ್ತು ಅಭಿವೃದ್ಧಿ ಪಡಿಸದೇ ಇರುವ ನಿವೇಶನಗಳಲ್ಲಿ ನಿರ್ಮಿಸಿದ ಮನೆ, ಮತ್ತಿತರೆ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಪಾವತಿಸಬೇಕಾದ ಶುಲ್ಕವನ್ನು ಕೆ.ಆರ್.ಸಿ ನಿಗಧಿಪಡಿಸಿದೆ.
ಕಳೆದ ಜನವರಿ 2020ರಲ್ಲಿ ಶುಲ್ಕವನ್ನು ಪರಿಷ್ಕರಿಸಲಾಗಿತ್ತು. ಅದರಂತೆ 3 ಕಿ.ವ್ಯಾ ವರೆಗೆ ಅಭಿವೃದ್ಧಿ ಪಡಿಸಿದ ಲೇಔಟ್ ನಿವೇಶನಗಳಿಗೆ 1 ಕಿ.ವ್ಯಾಗೆ 6500 ಮತ್ತು ನಂತರದ ಒಂದು ಕಿ.ವ್ಯಾ 650 ನಿಗಧಿಪಡಿಸಲಾಗಿತ್ತು.
ಆದರೆ ಜೆಸ್ಕಾಂನ ಮುಖ್ಯ ಇಂಜಿನೀಯರ್ ಅವರು ಕಳೆದ ಜುಲೈನಲ್ಲಿ ಆದೇಶ ಒಂದನ್ನು ಹೊರಡಿಸಿ ಎಷ್ಟೇ ಕಿ.ವ್ಯಾ ಪಡೆದರೂ ಅಷ್ಟಕ್ಕೂ ತಲಾ 6500 ಪಾವತಿಸಲು ಸೂಚಿಸಿದ್ದರು. ಇದು ಗ್ರಾಹಕರಿಗೆ ಹೊರೆಯಾಗಿದ್ದಲ್ಲದೆ ಕೆ.ಆರ್.ಸಿ ನಿಯಮದ ಉಲ್ಲಂಘನೆಯಾಗಿತ್ತು.
ಈ ಬಗ್ಗೆ ಕೆ.ಆರ್.ಸಿ ಗಮನಕ್ಕೆ ತಂದಾಗ 9 ಅಕ್ಟೋಬರ್ ರಂದು ಜೆಸ್ಕಾಂ ತನ್ನ ಜುಲೈ ಆದೇಶವನ್ನು ಹಿಂಪಡೆದಿತ್ತು. ಆದರೆ ಮತ್ತೆ ನವೆಂಬರ್ 4ರಿಂದ ಆದೇಶ ಹೊರಡಿಸಿ ಕಳೆದ ಜುಲೈ ಆದೇಶವನ್ನೇ ಪಾಲಿಸುವಂತೆ ಸೂಚಿಸಿದೆ.
ಹೀಗಾಗಿ ಜೆಸ್ಕಾಂ ಅಧಿಕಾರಿಗಳು ತಮಗೆ ತಿಳಿದಂತೆ ಆದೇಶ ಹೊರಪಡಿಸುತ್ತಿದ್ದಾರೆ. ಇದು ಗ್ರಾಹಕರ ವಂಚನೆಯಾಗಿದೆ. ಕೆ.ಆರ್.ಸಿ ನಿಯಮದ ಸ್ಪಷ್ಟ ಉಲ್ಲಂಘನೆಯಾಗಿದೆ.
ಈ ಬಗ್ಗೆ ಕೆ.ಆರ್.ಸಿ.ಗೆ ದೂರು ಸಲ್ಲಿಸಿದರೆ ಅಲ್ಲಿನವರು ಸಹ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಎಸ್ಕಾಂಗಳಿಗೆ ನೀವು 10 ಒಪ್ಪಂದ ಪಾಲಿಸಬೇಕೆಂಬ ಸೂಚನೆ ನೀಡಿ ಕೈತೊಳೆದುಕೊಳ್ಳುತ್ತಿದೆ.
ಹೀಗಾಗಿ ಜೆಸ್ಕಾಂನ ವಂಚನೆ ನಿಲ್ಲಬೇಕು, ಇಲ್ಲದಿದ್ದರೆ ಗ್ರಾಹಕರ ನ್ಯಾಯಾಲಯದ ಮೋರೆ ಹೋಗಬೇಕಾಗುತ್ತದೆಂದು ವಿದ್ಯುತ್ ಗುತ್ತಿಗೆದಾರರಾದ ವೀರೇಶ್ ಕಂಬಾರ, ಬಿ.ಜಾವೀದ್, ಎಸ್.ಕೃಷ್ಣ ಪ್ರಸಾದ್, ಕೆ.ಎಂ.ವೀರೇಶ್ ಕುಮಾರ್ ಇಂದು ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ಕರೆದು ತಿಳಿಸಿದ್ದಾರೆ.