ಕೆ.ಆರ್.ಪೇಟೆ ಕೋವಿಡ್ ಹಾಟ್‍ಸ್ಪಾಟ್ ಆಗುತ್ತಿದೆ, ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಿ: ನಾರಾಯಣಗೌಡ ಎಚ್ಚರಿಕೆ

ಕೃಷ್ಣರಾಜಪೇಟೆ.ಜೂ.04- ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಸೋಂಕಿತರು ತಾಲೂಕಿನಲ್ಲಿ ಪತ್ತೆಯಾಗುತ್ತಿದ್ದಾರೆ ಎಂದರೆ ಅರ್ಥವೇನು, ಕೆ.ಆರ್.ಪೇಟೆ ಕೋವಿಡ್ ಹಾಟ್‍ಸ್ಪಾಟ್ ಆಗುತ್ತಿದೆ, ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಿ ಕೋವಿಡ್ ಸೋಂಕು ಹರಡುವುದನ್ನು ತಡೆಯಬೇಕು ಇಲ್ಲದಿದ್ದರೆ ಅಧಿಕಾರಿಗಳನ್ನೇ ನೇರವಾಗಿ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ಎಚ್ಚರಿಕೆ ನೀಡಿದರು.
ಅವರು ಇಂದು ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಪಾಂಡವಪುರ ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಂಡ್ಯ ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವನಾಗಿ ಜಿಲ್ಲೆಯ ಉದ್ಧಗಲಕ್ಕೂ ಸಂಚರಿಸಿ ಕೆಲಸ ಮಾಡುತ್ತಿರುವ ನನ್ನ ಕ್ಷೇತ್ರದಲ್ಲಿಯೇ ಕೋವಿಡ್ ಸೋಂಕು ನಿಯಂತ್ರಣಕ್ಕೆ ಬರಲಿಲ್ಲವೆಂದರೆ ಅರ್ಥವೇನು, ಅಧಿಕಾರಿಗಳಾಗಿ ನೀವೇನು ಕೆಲಸ ಮಾಡುತ್ತಿದ್ದೀರಿ, ನಿಮ್ಮ ಕಾರ್ಯದಕ್ಷತೆಯು ನನಗೆ ಸಮಾಧಾನ ತರುತ್ತಿಲ್ಲ, ನಾಳೆಯಿಂದ ತಾಲೂಕಿನಾಧ್ಯಂತ ವಿವಾಹ ಸಮಾರಂಭಗಳು, ಅಂತ್ಯಸಂಸ್ಕಾರಗಳಿಗೆ ಹೆಚ್ಚಿನ ಜನರು ಸೇರದಂತೆ ಕಡಿವಾಣ ಹಾಕಿ ಕೋವಿಡ್ ಲಾಕ್‍ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಅನುಮತಿ ಪಡೆಯದೇ ನಿಯಮಭಾಹಿರವಾಗಿ ತಾಲೂಕಿನಾಧ್ಯಂತ ನಡೆಯುತ್ತಿರುವ ವಿವಾಹ ಸಮಾರಂಭಗಳು ಹಾಗೂ ಬೀಗರೂಟಗಳನ್ನು ನಡೆಸುವರ ವಿರುದ್ಧ ಪ್ರಕರಣ ದಾಖಲಿಸಿ, ಅನಧಿಕೃತವಾಗಿ ಇಸ್ಪೀಟು ಸೇರಿದಂತೆ ಆಟವಾಡುತ್ತಿರುವವರು ಕಂಡು ಬಂದರೆ ಅಂತಹ ವ್ಯಕ್ತಿಗಳನ್ನು ಬಂಧಿಸಿ ಕೇಸು ದಾಖಲಿಸಿ ಜೈಲಿಗೆ ಕಳಿಸುವ ಬದಲಿಗೆ ಕೋವಿಡ್ ಕೇರ್ ಸೆಂಟರ್‍ಗಳಲ್ಲಿರಿಸಿ ಕೋವಿಡ್ ಸೋಂಕಿತರಿಗೆ ಸೇವಾ ಕೆಲಸಗಳನ್ನು ಮಾಡಿಸಿ, ನಾಳೆಯಿಂದಲೇ ತಾಲೂಕಿನಾಧ್ಯಂತ ಬಿಗಿಯಾಗಿ ಕಾನೂನು ಕ್ರಮ ಜಾರಿಯಾಗಬೇಕು. ಅನಧಿಕೃತವಾಗಿ9 ಸಕಾರಣವಿಲ್ಲದೇ ದ್ವಿಚಕ್ರ ವಾಹನಗಳು ಹಾಗೂ ಕಾರುಗಳಲ್ಲಿ ಸಂಚರಿಸುವವರ ವಿರುದ್ಧ ಪ್ರಕರಣ ದಾಖಲಿಸಿ ವಾಹನಗಳನ್ನು ಸೀಜ್ ಮಾಡಿ ಎಂದು ಸಚಿವ ನಾರಾಯಣಗೌಡ ಖಡಕ್ ಎಚ್ಚರಿಕೆ ನೀಡಿದರು.
ಮಂಡ್ಯ ಜಿಲ್ಲೆ ಸೇರಿದಂತೆ ಜಿಲ್ಲೆಯ ಎಲ್ಲಾ ಏಳು ತಾಲೂಕುಗಳಲ್ಲಿಯೂ ನಿಷೇಧಾಜ್ಞೆಯು ಜಾರಿಯಲ್ಲಿದೆ, ಲಾಕ್‍ಡೌನ್ ನಿಯಮಗಳನ್ನು ಪಾಲಿಸದ ವ್ಯಕ್ತಿಯು ಎಷ್ಟೇ ಪ್ರಭಾವಶಾಲಿಯಾಗಿದ್ದರೂ ಹೆದರದೇ ಕೇಸು ದಾಖಲಿಸಿ, ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ ಒಬ್ಬನೇ ಒಬ್ಬ ವ್ಯಕ್ತಿಯು ಹಸಿವಿನಿಂದ ಬಳಲದಂತೆ ಎಚ್ಚರ ವಹಿಸಿ ಕೆಲಸ ಮಾಡಿ ಎಂದು ಕೈಮುಗಿದು ಮನವಿ ಮಾಡಿದ ಸಚಿವ ನಾರಾಯಣಗೌಡ ಜಿಲ್ಲೆಗೆ ಕೋವಿಡ್ ನಿರ್ವಹಣೆಗಾಗಿ ರಾಜ್ಯ ಸರ್ಕಾರವು 28ಕೋಟಿ ರೂಪಾಯಿ ವಿಶೇಷ ಅನುಧಾನವನ್ನು ಬಿಡುಗಡೆ ಮಾಡಿದೆ. ತಾಲೂಕು ಆಡಳಿತ ಸೇರಿದಂತೆ ಜಿಲ್ಲಾಡಳಿತಕ್ಕೆ ಹಣದ ಕೊರತೆಯಿಲ್ಲ, ದಾನಿಗಳು ಸ್ವಯಂ ಪ್ರೇರಣೆಯಿಂದ ಆಗಮಿಸಿ ಉಧಾರವಾಗಿ ದಾನ ಧರ್ಮ ಮಾಡುತ್ತಿದ್ದಾರೆ. ಆದ್ದರಿಂದ ಕೋವಿಡ್ 2ನೇ ಅಲೆಯ ಭೀಕರತೆಯನ್ನು ತಡೆಯುವುದಷ್ಟೇ ನಮ್ಮ ಧ್ಯೇಯವಾಗಬೇಕು. ಯಾವುದೇ ಅಧಿಕಾರಿ ಸೇರಿದಂತೆ ಸರ್ಕಾರಿ ನೌಕರರು ಕೋವಿಡ್ ನಿರ್ವಹಣೆಯ ಕೆಲಸದಲ್ಲಿ ಲೋಪವೆಸಗಿರುವುದು ಕಂಡು ಬಂದರೆ ನಿರ್ಧಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಿ, ಇಲ್ಲದಿದ್ದರೆ ನಾನು ತಾಲೂಕು ಆಡಳಿತವನ್ನೇ ನೇರವಾಗಿ ಹೊಣೆಗಾರನನ್ನಾಗಿ ಮಾಡಬೇಕಾಗುತ್ತದೆ ಎಂದು ಸಚಿವ ನಾರಾಯಣಗೌಡ ಎಚ್ಚರಿಕೆ ನೀಡಿದರು.
ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್, ಪಾಂಡವಪುರ ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, ಮನ್‍ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ, ತಹಶೀಲ್ದಾರ್ ಎಂ.ಶಿವಮೂರ್ತಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್, ತಾಲೂಕು ಆರೋಗ್ಯಾಧಿಕಾರಿ ಡಾ.ಮಧುಸೂಧನ್, ಸರ್ಕಲ್ ಇನ್ಸ್‍ಪೆಕ್ಟರ್ ಎಂ.ಕೆ.ದೀಪಕ್, ಕಿಕ್ಕೇರಿ ಪೋಲಿಸ್ ಠಾಣೆಯ ಇನ್ಸ್‍ಪೆಕ್ಟರ್ ಜಗಧೀಶ್, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಎಂ.ಎಸ್.ಜಯಂತ್, ಪುರಸಭೆಯ ಮುಖ್ಯಾಧಿಕಾರಿ ಸತೀಶ್‍ಕುಮಾರ್, ರಾಜಶ್ವನಿರೀಕ್ಷಕರಾದ ಚಂದ್ರಕಲಾ, ರಾಜಮೂರ್ತಿ, ನರೇಂದ್ರ, ರಾಮಚಂದ್ರಪ್ಪ, ರಾಮಚಂದ್ರ, ಸಬ್‍ಇನ್ಸ್‍ಪೆಕ್ಟರ್ ಬ್ಯಾಟರಾಯಗೌಡ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದು ಸಚಿವರಿಗೆ ಅಗತ್ಯ ಮಾಹಿತಿಗಳನ್ನು ನೀಡಿದರು.