ಕೆ.ಆರ್.ಪೇಟೆಯಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು

ಕೆ.ಆರ್.ಪೇಟೆ. ಮೇ.02: ತಾಲೂಕಿನಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕನ್ನು ಕಡಿಮೆ ಮಾಡಲು ಹಾಗೂ ಸಾವಿನ ಪ್ರಮಾಣವನ್ನು ಕಡಿಮೆಗೊಳಿಸಲು ಅಧಿಕಾರಿಗಳು ಸಮರೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ತಿಳಿಸಿದರು.
ಅವರು ಪಟ್ಟಣದ ಮಿನಿವಿಧಾನಸೌಧದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಬೆಳಗ್ಗೆ 6 ಗಂಟೆಯಿಂದ ಹತ್ತು ಗಂಟೆಯವರೆಗೆ ಸಾರ್ವಜನಿಕರು ಅಗತ್ಯವಸ್ತುಗಳ ಖರೀದಿಯನ್ನು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಖರೀದಿಸಬೇಕು.
ಹತ್ತು ಗಂಟೆಯ ನಂತರ ಯಾರೂ ಮನೆಯಿಂದ ಹೊರ ಬರಬಾರದು ಮೆಡಿಕಲ್ ಎಮರ್ಜೆನ್ಸಿ ಇರುವವರನ್ನು ಹೊರತುಪಡಿಸಿ ಬೇರೆಯವರು ಅನಾವಶ್ಯಕವಾಗಿ ತಿರುಗಾಟ ಮಾಡಬಾರದು. ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ಏರು ಗತಿಯಲ್ಲಿ ಸಾಗುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸಿದ ಸಚಿವರು ಸೋಂಕು ಹರಡದಂತೆ ಕೈಗೊಳ್ಳಬಹುದಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಗ್ರಾಮೀಣ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ.
ಚೌಡಸಮುದ್ರ ಮತ್ತು ಕೊಮ್ಮೇನಹಳ್ಳಿ ಗ್ರಾಮಗಳನ್ನು ಕಂಟೋನ್ಮೆಂಟ್ ವಲಯಗಳನ್ನಾಗಿ ಮಾಡಲಾಗಿದೆ. ಜನರು ಇನ್ನಾದರೂ ಪರಿಸ್ಥಿತಿಯ ಗಂಭೀರತೆಯನ್ನು ಅರಿಯಬೇಕು. ಸೀಲ್ ಡೌನ್ ಮಾಡಿದ ಗ್ರಾಮಗಳಿಗೆ ಸೂಕ್ತ ಅಗತ್ಯ ವಸ್ತುಗಳನ್ನು ಒದಗಿಸುವಲ್ಲಿ ಅಧಿಕಾರಿಗಳು ಗಮನ ಹರಿಸಬೇಕು. ಖಾಸಗಿ ಆಸ್ಪತ್ರೆಗಳಿಗೆ ಬರುವ ಜನರು ಮೊದಲು ಪರೀಕ್ಷೆ ಮಾಡಿಸಿಕೊಂಡು ಬರಬೇಕು. ಕೋವಿಡ್ ರೋಗಿಗಳಿಗೆ ಗುಟಮಟ್ಟದ ಚಿಕಿತ್ಸೆ ನೀಡಬೇಕು. ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಸದ್ಯದ ಪರಿಸ್ಥಿತಿಯಲ್ಲಿ ಆಮ್ಲಜನಕದ ಕೊರತೆ ತಾಲೂಕಿನಲ್ಲಿ ಇಲ್ಲ. ಇನ್ನೂ ಒಂದು ವಾರಗಳ ಕಾಲ ಈ ಸಮಸ್ಯೆ ಇರುವುದಿಲ್ಲ ಹಾಗೂ ಎಲ್ಲಾ ಗ್ರಾಮಪಂಚಾಯಿತಿಗಳ ಮಟ್ಟದಲ್ಲಿ ಅಧಿಕಾರಿಗಳು ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಬದ್ದತೆಯಿಂದ ಮಹಾಮಾರಿಯ ನಿಯಂತ್ರಿಸುವ ಕೆಲಸ ಮಾಡಬೇಕು. ಇನ್ನೂ ಒಂದು ತಿಂಗಳುಗಳ ಕಾಲ ಹೆಚ್ಚಿನ ಶ್ರಮ ವಹಿಸಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ತಹಶೀಲ್ದಾರ್ ಎಂ.ಶಿವಮೂರ್ತಿ, ತಾಲೂಕು ಆರೋಗ್ಯಾಧಿಕಾರಿ ಡಾ.ಮಧುಸೂದನ್, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಜಯಂತ್, ಪುರಸಭಾ ಮುಖ್ಯಾಧಿಕಾರಿ ಸತೀಶ್ ಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್, ವೃತ್ತ ನಿರೀಕ್ಷಕ ದೀಪಕ್ ಸೇರಿದಂತೆ ಹಲವರು ಹಾಜರಿದ್ದರು.