ಕೆ.ಆರ್.ಪೇಟೆಯಲ್ಲಿ ಶಾಂತಿಯುತ ಮತದಾನ

ಕೆ.ಆರ್.ಪೇಟೆ.ಡಿ.28: ತಾಲ್ಲೂಕಿನ 33 ಗ್ರಾಮ ಪಂಚಾಯತಿಗಳ 539 ಸ್ಥಾನಗಳ ಅಭ್ಯರ್ಥಿಗಳ ಆಯ್ಕೆಗಾಗಿ 297 ಮತಗಟ್ಟೆಗಳಲ್ಲಿ ಮತದಾನವು ಯಾವುದೇ ಗಲಾಟೆ ಗದ್ದಲಗಳಿಲ್ಲದೇ ಶಾಂತಿಯುತವಾಗಿ ನಡೆಯಿತು.
ಮುಂಜಾನೆ ಏಳು ಗಂಟೆಯಿಂದ ಪ್ರಾರಂಭವಾದ ಮತದಾನ ಒಂಭತ್ತು ಗಂಟೆಯವವರೆಗೆ ನೀರಸವಾಗಿತ್ತು. ನಂತರ ಮತದಾರರು ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುವ ಪ್ರಕ್ರಿಯೆಗೆ ವೇಗ ಹೆಚ್ಚಾಯಿತು, ಗ್ರಾಮೀಣ ಪ್ರದೇಶದಲ್ಲಿ ಮತದಾರರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡರು. ತಾಲೂಕಿನ ಬೊಮ್ಮೇನಹಳ್ಳಿಯ ಮತಗಟ್ಟೆ ಸಂಖ್ಯೆ 25 ರಲ್ಲಿ ಮಾಜಿ ಶಾಸಕ ಬಿ.ಪ್ರಕಾಶ್ ತಮ್ಮ ಪತ್ನಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯೆ ಹೇಮಪ್ರಕಾಶ್ ಜೊತೆಗೂಡಿ ಮತಚಲಾಯಿಸಿದರು. ಹಾಗೂ ತಾಲೂಕಿನ ಚಿಲ್ಲದಹಳ್ಳಿಯ ಮತಗಟ್ಟೆ ಸಂಖ್ಯೆ 33 ರಲ್ಲಿ ಶತಾಯುಷಿ ನೀಲಮ್ಮ ಕೋಂ ಕೃಷ್ಣೇಗೌಡ ಅವರು ಸಹಾಯಕರೊಂದಿಗೆ ಆಗಮಿಸಿ ಮತಚಲಾಯಿಸಿದ್ದು ವಿಶೇಷವಾಗಿತ್ತು. ಕಣ್ಣು ಕಾಣದವರು ಹಾಗೂ ವಯೋವೃದ್ದರು ವೀಲ್‍ಛೇರಗಳ ಮೂಲಕ ಮತಗಟ್ಟೆಗೆ ಬಂದು ಸಹಾಯಕರ ಮೂಲಕ ಮತಚಲಾಯಿಸಿದರು.ಮಾಜಿ ಸ್ಪೀಕರ್ ಕೃಷ್ಣ ರವರು ಮತದಾನದಿಂದ ದೂರ ಉಳಿದಿರುವುದು ಕೇಳಿ ಬಂದಿದೆ.
ಅಭಿಪ್ರಾಯ: ತಾಲ್ಲೂಕಿನ ಮರುವನಹಳ್ಳಿ ಗ್ರಾಮದ ಮತಗಟ್ಟೆ ಸಂಖ್ಯೆ 60 ರಲ್ಲಿ ಎಂ.ಬಿ. ನಿಶಾಂತ್‍ಪಟೇಲ್ ಮೊದಲ ಬಾರಿಗೆ ಮತದಾನ ಮಾಡಿ ಇದೇ ಮೊದಲ ಬಾರಿಗೆ ಯಾವುದೇ ಭಯವಿಲ್ಲದೇ ಮತದಾನದಲ್ಲಿ ಪಾಲ್ಗೊಂಡಿದ್ದು ಸಂತಸ ತಂದಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಾನೂ ಒಬ್ಬ ಭವ್ಯ ಭಾರತ ನಿರ್ಮಾಣದಲ್ಲಿ ನಾನೂ ಒಬ್ಬ ರೂವಾರಿಯಾದ ಸಂತಸವಿದ್ದು ಪ್ರತೀ ಒಂದು ಮತಕ್ಕೂ ಬೆಲೆಯಿದೆ ಎಂದು ನನಗೆ ಅನಿಸುತ್ತಿದೆ ಎಂದರು.
ಹಾಗೆಯೇ ಜೈನ್ನಹಳ್ಳಿ ಗ್ರಾಮದ ಜೆ.ಬಿ.ಮಾನಸ ಮತಗಟ್ಟೆ ಸಂಖ್ಯೆ 07 ರಲ್ಲಿ ಮೊದಲ ಬಾರಿ ಮತಚಲಾಯಿಸಿ ಹಲವು ವರ್ಷಗಳಿಂದ ಮತದಾನ ಮಾಡಬೇಕೆನ್ನುವ ಆಸೆ ಈಗ ಈಡೇರಿದ್ದು ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೇ ಮತಚಲಾಯಿಸಿದ್ದು ಸಂತೋಷ ತಂದಿದೆ ಎಂದರು.
ತಾಲೂಕಿನಲ್ಲಿ 95448 ಪುರುಷರು, 92993 ಮಹಿಳೆಯರು ಮತ್ತು ಇತರೆ ಮತದಾರರು ಸೇರಿದಂತೆ ಒಟ್ಟು 184628 ಮತದಾರರಿದ್ದು ಅಂತಿಮವಾಗಿ 05 ಗಂಟೆಯ ವೇಳೆಗೆ ಶೇ 88.87 ರಷ್ಟು ಮತದಾನ ನಡೆಯಿತು.
ಜಿ.ಧನಂಜಯ ಚುನಾವಣಾ ನೋಡಲ್ ಅಧಿಕಾರಿ ಹಾಗೂ ತಾ.ಪಂ ಇಓ ಚಂದ್ರಮೌಳಿ ತಾಲ್ಲೂಕಿನ ವಿವಿಧ ಮತಗಟ್ಟೆಗಳಿಗೆ ತೆರಳಿ ಮತದಾನದ ಪ್ರಕ್ರಿಯೆಯನ್ನು ವೀಕ್ಷಿಸಿದರು. ಕೆಲವು ಕಡೆಗಳಲ್ಲಿ ಮತದಾನ ಕೇಂದ್ರದ ಪಕ್ಕದಲ್ಲಿಯೇ ಮತಕೇಳುತ್ತಿದ್ದ ದೃಶ್ಯ ಕಂಡುಬಂತು 200 ಮೀಟರ್ ನಿರ್ಬಂಧಿತ ಪ್ರದೇಶ ಎಂದು ಘೋಷಿಸಿದ್ದರೂ ಜನರಿಗೆ ಅದರ ಅರಿವೇ ಇರಲಿಲ್ಲ.
ಕೆ.ಆರ್.ಪೇಟೆ ಪಟ್ಟಣದ ಎಲ್ಲಾ ಬೀದಿಗಳು ಜನರಿಲ್ಲದೇ ಬಣಗುಡುತ್ತಿದ್ದವು. ಬಸ್ ಸಂಚಾರ ವಿರಳವಾಗಿತ್ತು, ಟೀಅಂಗಡಿ, ದಿನಬಳಕೆಯ ವಸ್ತುಗಳ ಅಂಗಡಿಗಳು ಮುಂತಾದುವುಗಳು ಮುಚ್ಚಿದ್ದವು, ಹಳ್ಳಿಗಳು ಮತದಾನ ಮಾಡಲು ಆಗಮಿಸಿದ್ದ ಪಟ್ಟಣದ ಜನರಿಂದ ತುಂಬಿದ್ದವು. ಮೈಸೂರು, ಬೆಂಗಳೂರು ಮುಂಬೈ ಮುಂತಾದ ಕಡೆಗಳಿಂದ ತಮ್ಮ ಬೆಂಬಲಿಗರನ್ನು ಕರೆಯಿಸಿ ಮತದಾನ ಮಾಡಿದ ನಂತರ ಅವರಿಗೆ ಹಣ ನೀಡುತ್ತಿದ್ದುದು ಸಾಮಾನ್ಯವಾಗಿತ್ತು. ಒಂದು ವಾರದಿಂದಲೂ ಭರ್ಜರಿ ಬಾಡೂಟ, ಮದ್ಯ ವಿತರಣೆ, ಹಣ ಹಂಚಿಕೆ ನಿರಂತರವಾಗಿ ನಡೆದಿದ್ದರೂ ಎಲ್ಲಿಯೂ ಯಾವುದೇ ಪ್ರಕರಣಗಳು ದಾಖಲಾಗಿಲ್ಲ.