ಕೆ.ಆರ್.ಪುರ-ವೈಟ್ ಫೀಲ್ಡ್ ಮೆಟ್ರೋ ಮಾರ್ಗಕ್ಕೆ ನಾಳೆ ಮೋದಿ ಚಾಲನೆ

ಕೆ.ಆರ್.ಪುರ,ಮಾ.೨೪- ಬೆಂಗಳೂರಿನ ಬೈಯಪ್ಪನಹಳ್ಳಯಿಂದ ಕೆಆರ್ ಪುರ ಹಾಗೂ ವೈಟ್ ಫೀಲ್ಡ್ ನಮ್ಮ ಮೆಟ್ರೋ ಸೇವೆಯನ್ನು ನಾಳೆ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.
ವೈಟ್‌ಫೀಲ್ಡ್‌ನಿಂದ ಕೆಆರ್ ಪುರಂವರೆಗಿನ ೧೩.೭೧ ಕಿಮೀ ಉದ್ದದ ಆರ್-೧ ವಿಸ್ತರಣಾ ಮಾರ್ಗದ ಉದ್ಘಾಟನಾ ಕಾರ್ಯಕ್ರಮಕ್ಕೆ ಸಕಲ ಸಿದ್ದತೆಗಳು ಪೂರ್ಣಗೊಂಡಿವೆ.
ಕೆಆರ್ ಪುರ ದಿಂದ ವೈಟ್ ಫೀಲ್ಡ್ ನೇರಳೆ ಮಾರ್ಗ ಐಟಿ ಉದ್ಯೋಗಿಗಳಿಗೆ ಸಹಾಯಕವಾಗಲಿದೆ,ಮೆಟ್ರೋ ಲೋಕಾರ್ಪಣೆಯಿಂದ ಐಟಿ ಉದ್ಯೋಗಿಗಳಿಗೆ ಸಂಚಾರ ದಟ್ಟಣೆ ಸಮಸ್ಯೆಯಿಂದ ಮುಕ್ತಿದೊರೆಯುವ ಸಾಧ್ಯತೆಯಿದೆ.
ಅಲ್ಲದೆ ವೈಟ್ ಫೀಲ್ಡ್ ಸುತ್ತಮುತ್ತಲಿನ ಲಕ್ಷಾಂತರ ಮಂದಿ ಪ್ರಯಾಣಿಕರು ತಮ್ಮ ಪ್ರಯಾಣ ನಡೆಸಲಿದ್ದು,ಐಟಿಬಿಟಿ ಕೇಂದ್ರಕ್ಕೆ ಹೊಸ ಉತ್ಸಾಹ ಬರಲಿದೆ.
೧೩ ಕಿ. ಮೀ. ಮಾರ್ಗವನ್ನು ೧೨ ನಿಮಿಷಗಳಲ್ಲಿ ರೈಲು ಕ್ರಮಿಸಲಿದೆ, ಇನ್ನೂ ನಿಲ್ದಾಣಗಳಲ್ಲಿ ಸೀಮಿತ ದ್ವಿಚಕ್ರ ವಾಹನ ನಿಲುಗಡೆ ಮತ್ತು ಕೆಆರ್ ಪುರ ಮತ್ತು ವೈಟ್‌ಫೀಲ್ಡ್ ನಿಲ್ದಾಣಗಳಲ್ಲಿ ಕಾರು ಮತ್ತು ದ್ವಿಚಕ್ರ ವಾಹನಗಳಿಗೆ ಹೆಚ್ಚುವರಿ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ.
ನಿಲ್ದಾಣಗಳ ಸುತ್ತಲೂ ಇರುವ ಸೇವಾ ರಸ್ತೆಗಳ ಎರಡೂ ಬದಿಯಲ್ಲಿ, ಪ್ರವೇಶ ಮತ್ತು ನಿರ್ಗಮನ ದ್ವಾರದೊಂದಿಗೆ ಬಿಎಂಟಿಸಿ ಬಸ್ ನಿಲ್ದಾಣಗಳು ಮಲ್ಟಿಮೋಡಲ್ ಏಕೀಕರಣ ಕೇಂದ್ರ ಇರಲಿದೆ. ರಸ್ತೆಗಳನ್ನು ದಾಟಲು ಎಲ್ಲ ನಿಲ್ದಾಣಗಳನ್ನು ಪಾದಚಾರಿಗಳ ಮೇಲ್ಸೇತುವೆಯಾಗಿ ಉಪಯೋಗಿಸಬಹುದು. ಪ್ರಯಾಣಿಕರ ಅನುಕೂಲಕ್ಕಾಗಿ, ಪ್ರತಿ ನಿಲ್ದಾಣದಲ್ಲಿ ೮ ಎಸ್ಕಲೇಟರ್‌ಗಳು, ೪ ಎಲಿವೇಟರ್‌ಗಳು ಮತ್ತು ೮ ಮೆಟ್ಟಿಲುಗಳನ್ನು ಅಳವಡಿಸಲಾಗಿದೆ.
ಮೋದಿ ರೋಡ್ ಶೋ:
ವೈಟ್ ಫೀಲ್ಡ್ ಮೆಟ್ರೋ ಹೊಸ ಮಾರ್ಗ ಉದ್ಘಾಟನೆಯ ನಂತರ ಪ್ರಧಾನಿ ಮೋದಿ ಅವರು ವೈಟ್ ಫೀಲ್ಡ್ ನಲ್ಲಿ ಸಮೀಪ ಮಹದೇವಪುರ ಕ್ಷೇತ್ರದ ಸತ್ಯ ಸಾಯಿ ಆಶ್ರಮದಿಂದ ವೈಟ್ ಫೀಲ್ಡ್ ಮೆಟ್ರೋ ಸ್ಟೇಷನ್ ವರೆಗೂ ಸುಮಾರು ೧ ಕಿ.ಮೀ. ರೋಡ್ ಶೋ ನಡೆಸಲಿದ್ದಾರೆ.
ಸಂಚಾರ ದಟ್ಟಣೆ ಸಂಭವ ಹಲವು ಮಾರ್ಗಗಳ ಬದಲಾವಣೆ:
ಪ್ರಧಾನಿ ನರೇಂದ್ರ ಮೋದಿ ಅವರು ವೈಟ್ ಫೀಲ್ಡ್ ಭಾಗಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಸಂಚಾರ ವ್ಯತ್ಯಯವಾಗಲಿದೆಬದಲಿ ಮಾರ್ಗ ಅನುಸರಿಸುವಂತೆ ವಾಹನ ಸವಾರರಿಗೆ ಸೂಚಿಸಲಾಗಿದೆ.
ಹಲವು ನಾಯಕರ ಉಪಸ್ಥಿತಿ: ಸ್ಥಳೀಯ ಶಾಸಕರಾದ ಅರವಿಂದ ಲಿಂಬಾವಳಿ, ಬೈರತಿ ಬಸವರಾಜ್,ಬಿಜೆಪಿ ನಾಯಕರ ದಂಡು ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.