ಕೆ.ಆರ್. ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆಯಲ್ಲೇ ಕಮಲ ಕಹಳೆ

ಮೈಸೂರು: ಏ.21:- ಇನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾದ ಗುರುವಾರ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಟಿ.ಎಸ್. ಶ್ರೀವತ್ಸ ಅವರು ಭಾರೀ ಜನಸ್ತೋಮದೊಂದಿಗೆ ಅದ್ಧೂರಿ ಮೆರವಣಿಗೆಯಲ್ಲಿ ಆಗಮಿಸಿ, ಶಾಸಕ ಎಸ್.ಎ. ರಾಮದಾಸ್ ಜೊತೆಗೂಡಿ ನಾಮಪತ್ರ ಸಲ್ಲಿಸಿದರು.
ಕೆ.ಆರ್. ಕ್ಷೇತ್ರ ವ್ಯಾಪ್ತಿಯ ಅಗ್ರಹಾರದ ನೂರೊಂದು ಗಣಪತಿ ದೇವಸ್ಥಾನದಿಂದ ಹೊರಟ ಬೃಹತ್ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಗಣಪತಿಗೆ ಪೂಜೆ ಸಲ್ಲಿಸಿದ ಬಳಿಕ ತೆರೆದ ವಾಹನದಲ್ಲಿ ಟಿ.ಎಸ್. ಶ್ರೀವತ್ಸ, ಹಾಲಿ ಶಾಸಕ ಎಸ್.ಎ. ರಾಮದಾಸ್, ಮೇಯರ್ ಶಿವಕುಮಾರ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್, ಬಿಜೆಪಿ ಉಪಾಧ್ಯಕ್ಷ ಎಂ. ರಾಜೇಂದ್ರ ಮೊದಲಾದವರು ವಾಹನದಲ್ಲಿದ್ದರು.
ನೂರೊಂದು ಗಣಪತಿ ದೇವಸ್ಥಾನ ಬಳಿಗೆ ಆಗಮಿಸಿದ ಶಾಸಕ ಎಸ್.ಎ. ರಾಮದಾಸ್ ಅವರನ್ನು ಪಕ್ಷದ ಕಾರ್ಯಕರ್ತರು ಮತ್ತು ರಾಮದಾಸ್ ಅಭಿಮಾನಿಗಳು ಹೆಗಲ ಮೇಲೆ ಕೂರಿಸಿಕೊಂಡು ಹೊತ್ತು ತಂದು ತೆರೆದ ವಾಹನದಲ್ಲಿ ನಿಲ್ಲಿಸಿದರು. ಈ ವೇಳೆ ತೀವ್ರ ಸಂತೋಷಗೊಂಡ ರಾಮದಾಸ್ ಅವರು ಎಲ್ಲರಿಗೂ ಕೈ ಮುಗಿದು ನಗುಮೊಗದಲ್ಲಿಯೇ ಕೃತಜ್ಞತೆ ಸಲ್ಲಿಸಿದರು. ನಾಮಪತ್ರ ಸಲ್ಲಿಕೆ ವೇಳೆ ಟಿ.ಎಸ್. ಶ್ರೀವತ್ಸ ಅವರೊಡನೆ ಸಂಸದ ಪ್ರತಾಪಸಿಂಹ, ಶಾಸಕರಾದ ಎಸ್.ಎ. ರಾಮದಾಸ್, ಎಲ್. ನಾಗೇಂದ್ರ, ಮೇಯರ್ ಶಿವಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟದಾರ್ಯ, ಟಿ.ಡಿ. ಪ್ರಕಾಶ್ ಇದ್ದರು.
ಮೆರವಣಿಗೆಯಲ್ಲಿ ಶಾಸಕ ಎಲ್. ನಾಗೇಂದ್ರ ಸೇರಿದಂತೆ ಅನೇಕ ಪ್ರಮುಖರು ಪಾದಯಾತ್ರೆ ಮೂಲಕ ನಗರ ಪಾಲಿಕೆ ಕಚೇರಿ ತಲುಪಿದರು. ವೀರಗಾಸೆ, ನಗಾರಿ, ಡೊಳ್ಳು ಮುಂತಾದ ಕಲಾ ತಂಡದ ತಾಳಕ್ಕೆ ಕೆಲ ಅಭಿಮಾನಿಗಳು ಹೆಜ್ಜೆ ಹಾಕಿದರು. ಮೆರವಣಿಗೆಯಲ್ಲಿ ಪಾಲ್ಗೊಂಡ ಸಾವಿರಾರು ಮಂದಿ ಪಕ್ಷದ ಅಭ್ಯರ್ಥಿ ಟಿ.ಎಸ್. ಶ್ರೀವತ್ಸ, ನರೇಂದ್ರಮೋದಿ, ಬಿ.ಎಸ್. ಯಡಿಯೂರಪ್ಪ, ಅಮಿತ್ ಶಾ, ಬಸವರಾಜ ಬೊಮ್ಮಾಯಿ, ಜೆ.ಪಿ. ನಡ್ಡಾ, ಬಿ.ವೈ. ವಿಜಯೇಂದ್ರ, ಎಸ್.ಎ. ರಾಮದಾಸ್ ಮೊದಲಾದವರ ಭಾವಚಿತ್ರವುಳ್ಳ ಪ್ಲೇ ಕಾಡ್ರ್ಗಳನ್ನು ಕೈಯಲ್ಲಿ ಹಿಡಿದು ಗಮನ ಸೆಳೆದರು.
ಬೃಹತ್ ಮೆರವಣಿಗೆ ಹಿನ್ನೆಲೆಯಲ್ಲಿ ಸಯ್ಯಾಜಿರಾವ್ ರಸ್ತೆ ಮತ್ತು ತ್ಯಾಗರಾಜ ರಸ್ತೆಯಲ್ಲಿ ಅಸಂಖ್ಯಾತ ಜನರು ಸೇರಿದ್ದರು. ಕೆಲಕಾಲ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಯಿತು. ಮೆರವಣಿಗೆ ಹಿನ್ನೆಲೆಯಲ್ಲಿ ಪೆÇಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.
ರಸ್ತೆ ಉದ್ದಕ್ಕೂ ಅಭ್ಯರ್ಥಿ ಟಿ.ಎಸ್. ಶ್ರೀವತ್ಸ ಅವರಿಗೆ ಪುಷ್ಪಾರ್ಚನೆ ಮಾಡಲಾಯಿತು. ಪಕ್ಷದ ಪರ ಘೋಷಣೆ ಮೊಳಗಿತು. ಎಲ್ಲೆಡೆ ಬಿಜೆಪಿ ಬಾವುಟ ರಾರಾಜಿಸಿ, ಕೇಸರಿ ಮಯವಾಗಿತ್ತು.
ಮೆರವಣಿಗೆಯಲ್ಲಿ ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ಬಹುಶಃ ನನಗೆ ಟಿಕೆಟ್ ಮಿಸ್ ಆದಾಗ ಅನೇಕರಲ್ಲಿ ಅನುಮಾನ ಉದ್ಭವಿಸಿತ್ತು ನಾನು ಪಕ್ಷೇತರನಾಗಿ ನಿಲ್ಲುತ್ತೇನೆಂದು ಅಂದು ಕೊಂಡಿದ್ದರು. ಆದರೆ, ಜಿಲ್ಲೆಯಲ್ಲಿದ್ದ 12 ನಾಯಕರಲ್ಲಿ ಉಳಿದಿರುವುದು ನಾನೊಬ್ಬನೇ ಆಗಿದ್ದೇನೆ. ಹೀಗಿರುವಾಗ ನಾನು ಈಗ ಶಾಸಕ ಸ್ಥಾನಕ್ಕಾಗಿ ತಾಯಿ ಸ್ಥಾನದಲ್ಲಿ ನೋಡುವ ಪಕ್ಷವನ್ನು ಬೀಡಬೇಕೇ ಎಂದು ಆಲೋಚನೆ ಮಾಡಿದೆ. ಮಾತ್ರವಲ್ಲದೆ, ಪಕ್ಷೇತರವಾಗಿ ಸ್ಪರ್ಧಿಸಿ ಮತ್ತೆ ಬಿಜೆಪಿಯಲ್ಲೇ ಉಳಿದುಕೊಳ್ಳುವ ಆಲೋಚನೆ ಸಹ ಚರ್ಚೆಗೆ ಬಂದಿದ್ದವು. ಆದರೆ, ಶಿಸ್ತಿ ಪಕ್ಷದಲ್ಲಿದ್ದು, ಆರ್‍ಎಸ್‍ಎಸ್‍ನಿಂದ ಬಂದವನಾಗಿ ನಾನು ಪಕ್ಷದ ಸೂಚನೆಯನ್ನು ದೇಶಕ್ಕೋಸ್ಕರ ಆಲೋಚನೆ ಮಾಡಬೇಕೆಂದು ನಿರ್ಣಯಿಸಿದೆ. ಇದೇ ಕಾರಣಕ್ಕಾಗಿ ಅಧಿಕಾರದ ವ್ಯಾಮೋಹವಲ್ಲ, ದೇಶ ನನಗೆ ಮುಖ್ಯ. ದೇಶದ ಅತ್ಯುನ್ನತ ಸ್ಥಾನದಲ್ಲಿರುವ ಪ್ರಧಾನಿ ನರೇಂದ್ರಮೋದಿಯವರು ನನ್ನ ಮೇಲೆ ತೋರಿರುವ ಪ್ರೀತಿ ಮುಖ್ಯ ಅದೇ ಕಾರಣಕ್ಕೆ ಬಿಜೆಪಿಯಲ್ಲೇ ಉಳಿದೆ ಎಂದರು.
ಇನ್ನೂ ಕ್ಷೇತ್ರದಲ್ಲಿ ಈಗಾಗಲೇ 33ಸಾವಿರ ಬಿಜೆಪಿ ಕಾರ್ಯಕರ್ತರಿದ್ದಾರೆ. ಮಾತ್ರವಲ್ಲದೆ, ಬೂತ್ ಮಟ್ಟದಲ್ಲಿ ಆಲ್‍ಬೂತ್ ಬಿಜೆಪಿ ಬೂತ್ ಅಭಿಯಾನವನ್ನು ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಯಶಸ್ವಿಯಾಗಿ ನಡೆಸಿದ್ದೇವೆ. ಕ್ಷೇತ್ರದಲ್ಲಿ ಬಿಜೆಪಿಯ ದೊಡ್ಡ ತಂಡವೇ ಇದೆ. ಇವೆರಲ್ಲರೂ ಕ್ಷೇತ್ರದಲ್ಲಿ ಯಾರೇ ಅಭ್ಯರ್ಥಿ ಯಾದರೂ ಅವರನ್ನು ಗೆಲ್ಲಿಸಬೇಕೆಂಬ ಗುರಿ ನಮ್ಮೆಲ್ಲರದ್ದಾಗಿದೆ. ಹೀಗಾಗಿ ಪಕ್ಷದವರಾದ ಶ್ರೀವತ್ಸ ಅವರನ್ನು ಅತಿಹೆಚ್ಚು ಮತಗಳಲ್ಲಿ ಗೆಲ್ಲಿಸುವ ಮೂಲಕ ಮತ್ತೆ ಕ್ಷೇತ್ರ ಬಿಜೆಪಿಯ ಕ್ಷೇತ್ರ ಎಂಬುದನ್ನು ಮತದಾರರಾಗಿ ನೀವೆಲ್ಲರೂ ಸಾಬೀತು ಮಾಡಬೇಕೆಂದು ಹೇಳಿದರು.