ಕೆ.ಆರ್ ಆಸ್ಪತ್ರೆಗೆ ಸಚಿವ ಎಸ್.ಟಿ.ಎಸ್ ದಿಡೀರ್ ಭೇಟಿ

ಮೈಸೂರು.ಏ.೨೦- ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಮೈಸೂರಿನ ಕೆಆರ್ ಆಸ್ಪತ್ರೆ ಕೈಗೊಂಡಿರುವ ಕ್ರಮಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಇಂದು ದಿಢೀರ್‌ನೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಸ್ಪತ್ರೆಯಲ್ಲಿ ವಾರ್ಡ್‌ಗಳ ಲಭ್ಯತೆ, ಕೋವಿಡ್ ಸೋಂಕಿತರಿಗೆ ನೀಡಲಾಗುತ್ತಿರುವ ಚಿಕಿತ್ಸೆ, ಔಷಧಗಳ ಲಭ್ಯತೆ, ಊಟ, ಉಪಚಾರಗಳ ಪರಿಶೀಲನೆಯನ್ನು ನಡೆಸಿ ಸೋಂಕಿತರಿಂದಲೂ ಸಮಸ್ಯೆಗಳಿವೆಯೇ ಎಂದು ಮಾಹಿತಿ ಪಡೆದುಕೊಂಡು ಸಮಸ್ಯೆಗಳಿದ್ದರೆ ಗಮನಕ್ಕೆ ತನ್ನಿ ಎಂದು ಸಚಿವ ಸೋಮಶೇಖರ್ ಹೇಳಿದರು.
ಔಷಧಿಗಳೂ ಸೇರಿದಂತೆ ಯಾವುದೇ ನ್ಯೂನತೆಗಳು, ಸಮಸ್ಯೆಗಳಿದ್ದರೂ ತಮ್ಮ ಗಮನಕ್ಕೆ ತರುವಂತೆ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿ ಸೋಂಕಿತರಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ ಎಚ್ಚರವಹಿಸಿ ಎಂದು ಸೂಚನೆ ನೀಡಿದರು.
ಕೋವಿಡ್ ೨ನೇ ಅಲೆ ಗಂಭೀರವಾಗಿದೆ. ಹಾಗಾಗಿ, ಜನ ಸುರಕ್ಷಿತ ಕ್ರಮಗಳನ್ನು ಪಾಲಿಸುವಂತೆ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಎಲ್. ನಾಗೇಂದ್ರ, ಸಂಸದ ಪ್ರತಾಪ್‌ಸಿಂಹ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಉಪಸ್ಥಿತರಿದ್ದರು.