ಕೆ.ಆರ್‍ಪೇಟೆ ವಿಧಾನ ಸಭಾ ಕ್ಷೇತ್ರದ ಶಾಂತಿಯುತ ಚುನಾವಣೆಗೆ ತಾಲೂಕು ಆಡಳಿತ ಸಕಲ ಸಿದ್ದತೆ

ಕೆ.ಆರ್.ಪೇಟೆ: ಮಾ.31:- ಕೃಷ್ಣರಾಜಪೇಟೆ 192 ವಿಧಾನ ಸಭಾ ಕ್ಷೇತ್ರದ ಶಾಂತಿಯುತ ಚುನಾವಣೆಗೆ ತಾಲೂಕು ಆಡಳಿತ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ ಎಂದು ಕ್ಷೇತ್ರ ಚುನಾವಣಾ ಅಧಿಕಾರಿ ಕೃಷ್ಣಕುಮಾರ್ ತಿಳಿಸಿದರು.
ಚುನಾವಣಾ ಸಿದ್ದತಾ ಕ್ರಮಗಳನ್ನು ಕುರಿತು ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಕೇಂದ್ರ ಚುನಾವಣಾ ಆಯೋಗ ಮೇ 10 ರಂದು ರಾಜ್ಯ ವಿದಾನ ಸಭಾ ಚುನಾವಣೆಗೆ ದಿನಾಂಕ ನಿಗಧಿ ಮಾಡಿದ್ದು ಮಾರ್ಚ್ 29 ರಿಂದಲೇ ನೀತಿ ಸಂಹಿತೆ ಜಾರಿಯಾಗಿದೆ. ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ತಾಲೂಕು ಆಡಳಿತ ಸರ್ವ ಸಿದ್ದತೆಗಳನ್ನು ಮಾಡಿಕೊಂಡಿದೆ. ಕ್ಷೇತ್ರದಲ್ಲಿ 1,09,070 ಪುರುಷ, 1,08,532 ಮಹಿಳಾ ಮತ್ತು 10 ತೃತೀಯ ಲಿಂಗಿಗಳು ಸೇರಿ ಒಟ್ಟು 2,17,612 ಜನ ಮತದಾರರಿದ್ದಾರೆ. ಇದರಲ್ಲಿ 6260 ಮಂದಿ 80 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ಮತದಾರರಿದ್ದು 2539 ಜನ ವಿಕಲ ಚೇತನ ಮತದಾರರಿದ್ದಾರೆ. ಸುಲಲಿತ ಮತದಾನಕ್ಕಾಗಿ ಕ್ಷೇತ್ರದಲ್ಲಿ 258 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 45 ಮತಗಟ್ಟೆಗಳನ್ನು ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. 80 ವರ್ಷ ಮೇಲ್ಪಟ್ಟ ಹಿರಿಯ ಮತದಾರರು ಬಯಸಿದರೆ ಅವರು ತಮ್ಮ ಮನೆಯಿಂದಲೇ ಅಂಚೆ ಮತದಾನ ಮಾಡಲು ವ್ಯವಸ್ಥೆ ಮಾಡಲಾಗುವುದು. ವಿಕಲ ಚೇತನರು ಮತ್ತು ತೀವ್ರ ಅನಾರೋಗ್ಯ ಪೀಡಿತರಿಗೂ ಮನೆಯಿಂದಲೇ ಮತದಾನ ಮಾಡಲು ಅವಕಾಶÀವಿದೆ. ಆದರೆ ಇವರು ತಮ್ಮ ಮತಕೇಂದ್ರ ವ್ಯಾಪ್ತಿಯ ಬಿ.ಎಲ್.ಓ ಗಳ ಮೂಲಕ 12 ಡಿ ಫಾರಂ ಮೂಲಕ ಒಪ್ಪಿಗೆ ಪತ್ರ ನೀಡಬೇಕು ಎಂದು ಕೃಷ್ಣಕುಮಾರ್ ತಿಳಿಸಿದರು.
ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ತಾಲೂಕಿನ ಕಿಕ್ಕೇರಿ ಹೋಬಳಿಯ ಆನೆಗೊಳ, ಅಕ್ಕಿಹೆಬ್ಬಾಳು ಹೋಬಳಿಯ ಸಿಂಗನಹಳ್ಳಿ ಮತ್ತು ಸಂತೇಬಾಚಹಳ್ಳಿ ಹೋಬಳಿಯ ಅಘಲಯ ಗ್ರಾಮ ಸೇರಿ ಒಟ್ಟು 3 ಕಡೆ ತಪಾಸಣಾ ಕೇಂದ್ರಗಳನ್ನು ತೆರೆದಿದ್ದು ನಿತ್ಯ 3 ಪಾಳಿಯಲ್ಲಿ ಚೆಕ್ ಪೋಸ್ಟ್ ಸಿಬ್ಬಂಧಿಗಳು ದಿನದ 24 ಘಂಟೆ ಕರ್ತವ್ಯ ನಿರ್ವಹಿಸಲಿದ್ದಾರೆ. ಮುಕ್ತ ಮತ್ತು ನ್ಯಾಯಯುತ ಚುನಾವಣೆಗಾಗಿ 258 ಮತಗಟ್ಟೆಗಳನ್ನು 18 ಸೆಕ್ಟರ್ ಗಳಾಗಿ ವಿಭಜಿಸಲಾಗಿದ್ದು ಸೆಕ್ಟರ್ ಅಧಿಕಾರಿಗಳ ನೇಮಕ ಮಾಡಲಾಗಿದೆ. ಚುನಾವನಾ ಅಕ್ರಮಗಳ ತಡೆಗಾಗಿ 12 ಸಂಚಾರಿ ದಳ, 03 ವೀಡಿಯೂಗ್ರಫಿ ತಂಡಗಳನ್ನು ರಚಿಸಲಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಚುನಾವಣಾ ಪ್ರಚಾರ ಮತ್ತು ಸಾಮಾಜಿಕ ಸ್ವಾಸ್ಥವನ್ನು ಹಾಳುಮಾಡುವವರ ವಿರುದ್ದ ನಿಗಾವಹಿಸಲು 03 ವೀಡಿಯೂ ವಿಜಿಲೆನ್ಸ್ ತಂಡಗಳನ್ನು ರಚಿಸಲಾಗಿದೆ. ಪ್ರತಿ ಅಭ್ಯರ್ಥಿಗೆ 40 ಲಕ್ಷ ರೂ ಗಳನ್ನು ಚುನಾವಣಾ ವೆಚ್ಚಕ್ಕೆ ನಿಗಧಿ ಪಡಿಸಲಾಗಿದೆ. ಇದಕ್ಕಿಂತ ಹೆಚ್ಚು ಹಣವನ್ನು ವೆಚ್ಚ ಮಾಡುವ ಅಭ್ಯರ್ಥಿಗಳ ವಿರುದ್ದ ಕ್ರಮ ಜರುಗಿಸಲಾಗುವುದು. ಅಭ್ಯರ್ಥಿಗಳ ಖರ್ಚು ವೆಚ್ಚದ ಮೇಲೆ ನಿಗಾ ವಹಿಸಲು 01 ವೆಚ್ಚ ನಿರ್ವಹಣಾ ತಂಡವನ್ನು ರಚಿಸಲಾಗಿದೆ. ಮದುವೆ ಮತ್ತಿತರ ಕೌಟುಂಬಿಕ ಕಾರ್ಯಕ್ರಮಗಳನ್ನು ಮಾಡುವವರು 50 ಸಾವಿರಕ್ಕಿಂತ ಹೆಚ್ಚಿನ ಹಣವನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗುವಂತಿಲ್ಲ. 50 ಸಾವಿರಕ್ಕಿಂತಲೂ ಹೆಚ್ಚಿನ ಹಣವಿದ್ದರೆ ಅದಕ್ಕೆ ಸೂಕ್ತ ದಾಖಲೆಗಳನ್ನು ನೀಡಬೇಕಾಗುತ್ತದೆ. ಸೂಕ್ತ ದಾಖಲೆಗಳಿಲ್ಲದಿದ್ದರೆ ಅಂತಹ ಹಣವನ್ನು ವಶಪಡಿಸಿಕೊಂಡು ವೆಚ್ಚ ನಿರ್ವಹಣಾ ಸಮಿತಿಒಗೆ ಒಪ್ಪಿಸಲಾಗುವುದು. ಸೂಕ್ತ ದಾಖಲೆಗಳನ್ನು ಒದಗಿಸಿದ ಅನಂತರ ಅಂತಹ ಹಣವನ್ನು ಹಿಂದಿರುಗಿಸಲಾಗುವುದು ಎಂದ ಚುನಾವಣಾ ಅಧಿಕಾರಿ ಕೃಷ್ಣಕುಮಾರ್ ನೀತಿ ಸಂಹಿತೆ ಮತ್ತು ಚುನಾವಣಾ ಕಟ್ಟುಪಾಡುಗಳು ಎಲ್ಲರಿಗೂ ಒಂದೆ ಆಗಿದ್ದು ಶಾಂತಿಯುತ ಮತದಾನಕ್ಕಾಗಿ ಕಟ್ಟು ನಿಟ್ಟಿನ ಕ್ರಮ ವಹಿಸಲಾಗುವುದು. ನೀತಿ ಸಂಹಿತೆಯ ಉಲ್ಲಂಘನೆ ಪ್ರಕರಣಗಳು ಕಂಡು ಬಂದರೆ ಸಾರ್ವಜನಿಕರು ತಕ್ಷಣವೇ ದೂರು ನಿರ್ವಹಣಾ ಕೇಂದ್ರದ ದೂರವಾಣಿ ಸಂಖ್ಯೆ 08230-262227 ಗೆ ಕರೆ ಮಾಡಿ ಮಾಹಿತಿ ನೀಡಬೇಕು. ಮಾಹಿತಿದಾರರ ಹೆಸರನ್ನು ಗೌಪ್ಯವಾಗಿಡಲಾಗುವುದೆಂದು ತಿಳಿಸಿದರು.
ತಹಸೀಲ್ದಾರ್ ನಿಸರ್ಗಪ್ರಿಯ, ಪುರಸಭೆಯ ಮುಖ್ಯಾಧಿಕಾರಿ ಬಸವರಾಜು ಸುದ್ದಿಗೋಷ್ಠಿಯಲ್ಲಿದ್ದರು.